ಬುಧವಾರ, ಜನವರಿ 29, 2020
24 °C

ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ದೌರ್ಜನ್ಯ: ದೇಶದೆಲ್ಲೆಡೆ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

demonstrator displays a placard during a protest march to show solidarity with the students of New Delhi's Jamia Millia Islamia university

ನವದೆಹಲಿ : ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದರ ವಿರುದ್ಧದ ಪ್ರತಿಭಟನೆ ದೇಶದ ವಿವಿಧೆಡೆಗೆ ಸೋಮವಾರ ಹಬ್ಬಿದೆ.

ಬೆಂಗಳೂರು, ಹೈದರಾಬಾದ್‌, ಲಖನೌ, ಚೆನ್ನೈ, ಕೋಲ್ಕತ್ತ ಮತ್ತು ಮುಂಬೈ ಸೇರಿ ವಿವಿಧ ನಗರಗಳ ವಿದ್ಯಾಸಂಸ್ಥೆಗಳಲ್ಲಿ ಪ್ರತಿಭಟನೆ ನಡೆದಿದೆ. 

ಜಾಮಿಯಾ ವಿ.ವಿ.ಯ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಭಾನುವಾರ ಸಂಜೆ ಹಿಂಸಾಚಾರ ನಡೆದಿತ್ತು. ಬಳಿಕ, ‘ಪೊಲೀಸರು ವಿ.ವಿ.ಯ ಗ್ರಂಥಾಲಯದ ಒಳಗೆ ಅಶ್ರುವಾಯು ಶೆಲ್‌ ಸಿಡಿಸಿದ್ದಾರೆ ಮತ್ತು ಅನುಮತಿ ಇಲ್ಲದೆಯೇ ವಿ.ವಿ. ಆವರಣದೊಳಕ್ಕೆ ನುಗ್ಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿ ವಿವಿಧ ನಗರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. 

ಉತ್ತರ ‍ಪ್ರದೇಶದ ವಿವಿಧ ವಿ.ವಿ.ಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಇಲ್ಲಿನ ಮವು ಪಟ್ಟಣದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿದೆ. 

ಬೆಂಗಳೂರಿನ ಐಐಎಸ್‌ಸಿ ವಿದ್ಯಾರ್ಥಿಗಳು ‘ಪೊಲೀಸ್‌ ದೌರ್ಜನ್ಯ’ದ ವಿರುದ್ಧ ದನಿ ಎತ್ತಿದ್ದಾರೆ. ಸಾಮಾನ್ಯವಾಗಿ ಚಳವಳಿಗಳಿಂದ ದೂರ ಉಳಿಯುವ ಕಾನ್ಪುರ, ಮದ್ರಾಸ್‌ ಮತ್ತು ಬಾಂಬೆ ಐಐಟಿಗಳ ವಿದ್ಯಾರ್ಥಿಗಳು ಪ‍್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಮೋದಿ–ಸೋನಿಯಾ ಪ್ರತಿಕ್ರಿಯೆ

ಹೊರದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿರುವ, ಭಾರತ ಬಿಟ್ಟು ಬೇರೆಲ್ಲೂ ಆಶ್ರಯ ಇಲ್ಲದವರಿಗೆ ರೂಪಿಸಿದ ಈ ಕಾಯ್ದೆಯ ಬಗ್ಗೆ ಯಾವ ಭಾರತೀಯನೂ ಆತಂಕಪಡಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೋದಿ ಸರ್ಕಾರದ ಉದ್ದೇಶ ಸ್ಪಷ್ಟ– ಅಸ್ಥಿರತೆ ದೇಶಕ್ಕೆ ವಿಸ್ತರಿಸಬೇಕು. ಯುವಕರ ಹಕ್ಕು ಕಸಿದು, ಕೋಮು ಉನ್ಮಾದ ಬಡಿದೆಬ್ಬಿಸಿ ಲಾಭ ಪಡೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲೂ ಪ್ರತಿಭಟನೆ ಕಾವು

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ರಾಜ್ಯದ ವಿವಿಧ ಕಡೆ ಸೋಮವಾರ ಪ್ರತಿಭಟನೆಗಳು ನಡೆದವು. ಮೈಸೂರು ಹಾಗೂ ಹೊಸಪೇಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆದರೆ, ಮಂಗಳೂರಿನಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.

ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಂಗಳೂರು ನಗರದ ಬಲ್ಮಠದ ಕಲೆಕ್ಟರ್ ಗೇಟ್ ಬಳಿ ಸೋಮವಾರ ಸಂಜೆ ದಿಢೀರ್ ರಸ್ತೆತಡೆ ನಡೆಸಿದ ಕ್ಯಾಂಪಸ್ ಫ್ರಂಟ್‌ ಆಫ್‌ ಇಂಡಿಯಾದ ಸದಸ್ಯರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಬೃಹತ್‌ ಪ್ರತಿಭಟನೆ: ಮೈಸೂರಿನಲ್ಲಿ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ವಿಜಯಪುರ ಹಾಗೂ ಹಾವೇರಿಯಲ್ಲಿಯೂ ಪ್ರತಿಭಟನೆ ನಡೆಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು