ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ ವಿರುದ್ಧ ಸಿಡಿದೆದ್ದ ದೆಹಲಿ ಪೊಲೀಸ್‌

ವಕೀಲರು ನಡೆಸಿದ ಹಲ್ಲೆ ಖಂಡಿಸಿ ಪ್ರತಿಭಟನೆ: ರಾಜಕೀಯ ಕೆಸರೆರಚಾಟಕ್ಕೂ ವೇದಿಕೆ
Last Updated 5 ನವೆಂಬರ್ 2019, 20:03 IST
ಅಕ್ಷರ ಗಾತ್ರ

ನವದೆಹಲಿ: ಸಾವಿರಾರು ಪೊಲೀಸ್‌ ಸಿಬ್ಬಂದಿ ರಾಜಧಾನಿಯಲ್ಲಿ ಬೀದಿಗಿಳಿದು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಈ ವಿಚಾರವಾಗಿ ರಾಜಕೀಯ ಚಟುವಟಿಕೆಗಳೂ ಗರಿಗೆದರಲು ಆರಂಭವಾದವು.

‘ಪೊಲೀಸ್‌ ಆಯುಕ್ತ ಅಮೂಲ್ಯ ಪಟ್ನಾಯಕ್‌ ಮೇಲಿನ ವಿಶ್ವಾಸವನ್ನುಇಲಾಖೆಯ ಕೆಳಹಂತದ ಸಿಬ್ಬಂದಿಯು ಕಳೆದುಕೊಂಡಿದೆ’ ಎಂಬ ಟೀಕೆಗಳು ವ್ಯಕ್ತವಾದವು. ಇನ್ನೊಂದೆಡೆ, ಗೃಹಸಚಿವ ಅಮಿತ್‌ ಶಾ ಅವರ ಮೌನದ ಬಗ್ಗೆಯೂ ಪ್ರಶ್ನೆಗಳು ಮೂಡಿದವು. ‘ಪೊಲೀಸರು ಪ್ರತಿಭಟನೆಗೆ ಇಳಿದಿದ್ದರೂ ಗೃಹ ಸಚಿವಾಲಯವು ಮೂಕ ಪ್ರೇಕ್ಷಕನಾಗಿ ಕುಳಿತಿದೆ’ ಎಂದು ಕಾಂಗ್ರೆಸ್‌ ಪಕ್ಷ ಟೀಕಿಸಿದೆ.

‘ಪೊಲೀಸ್‌ ಇಲಾಖೆಯನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಲಾಗಿದ್ದು, ಅದು ಬಿಜೆಪಿಯ ಸಶಸ್ತ್ರ ಘಟಕದಂತೆ ಕೆಲಸ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ಅದು ಮರೆತಿದೆ’ ಎಂದು ಎಎಪಿ ಆರೋಪಿಸಿದೆ.

‘ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗೃಹಸಚಿವ ಅಮಿತ್‌ ಶಾ ವಿಫಲರಾಗಿದ್ದಾರೆ. ಅವರು ಸರ್ಕಾರಗಳನ್ನು ರಚಿಸುವುದು ಮತ್ತು ಒಡೆಯುವುದರಲ್ಲೇ ನಿರತರಾಗಿದ್ದಾರೆ’ ಎಂದು ಅವರು ಟೀಕಿಸಿದರು.

ಬೆಂಬಲದ ಕೊರತೆ: ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆದಿದ್ದರೂ ಪೊಲೀಸರ ಪರವಾಗಿ ಯಾರೂ ಧ್ವನಿ ಎತ್ತಲಿಲ್ಲ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.

‘ವಕೀಲರ ದಾಳಿಯಿಂದ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ, ರಾಜಕೀಯ ಮುಖಂಡರಾಗಲಿ ನಮ್ಮ ಪರವಾಗಿ ಧ್ವನಿ ಎತ್ತಲಿಲ್ಲ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿ ಕೇಂದ್ರದ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಟ್ವೀಟ್‌ ಮಾಡಿದರೂ ಸ್ವಲ್ಪ ಹೊತ್ತಿನಲ್ಲೇ ಅವರು ಅದನ್ನು ಅಳಿಸಿಹಾಕಿದರು. ಅದರ ಬದಲು ಸಾಕೇತ್‌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಘರ್ಷಣೆಯ ವಿಡಿಯೊ ಒಂದನ್ನು ಹಾಕಿ, ‘ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ’ ಎಂದು ಬರೆದರು.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆಯುಕ್ತ ಪಟ್ನಾಯಕ್‌ ಅವರು ಸ್ಥಳಕ್ಕೆ ಬಂದರು. ಅವರ ವಿರುದ್ಧವೇಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು. ವಿಶೇಷ ಆಯುಕ್ತ ಸತೀಶ್‌ ಗೊಲಚಾ ಅವರು ರಾತ್ರಿ ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.

‘ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಆಸ್ಪತ್ರೆಗೆ ಹೋಗಿ ಗಾಯಗೊಂಡ ವಕೀಲರಿಗೆ ಸಾಂತ್ವನ ಹೇಳಿದ್ದಾರೆ. ಆದರೆ ಪೊಲೀಸರನ್ನು ಭೇಟಿಮಾಡಿಲ್ಲ. ಇದು ಅನ್ಯಾಯವಲ್ಲವೇ’ ಎಂದು ಪ್ರತಿಭಟನಾಕಾರರೊಬ್ಬರು ಪ್ರಶ್ನಿಸಿದರು.

‘... ಜೋಶ್‌, ಲೋ ಸರ್‌’
ಸರ್ಕಾರದ ವಿರುದ್ಧದ ಅಸಮಾಧಾನವನ್ನು ಹೊರಹಾಕಲು ಪೊಲೀಸರು, ಲೋಕಸಭೆ ಚುನಾವಣೆಯ ಸಂಸರ್ಭದಲ್ಲಿ ಬಿಜೆಪಿ ಪ್ರಚಾರಕ್ಕಾಗಿ ಬಳಸಿಕೊಂಡಿದ್ದ ‘ಹೌ ಈಸ್‌ ದ ಜೋಶ್‌’ ಘೋಷಣೆಯನ್ನು ಬಳಸಿಕೊಂಡರು.

ಬಾಲಾಕೋಟ್‌ ದಾಳಿಯನ್ನು ಕುರಿತ ಬಾಲಿವುಡ್‌ ಸಿನಿಮಾದಲ್ಲಿ ಸೈನಿಕರು ಈ ಘೋಷಣೆ ಕೂಗುವ ಸನ್ನಿವೇಶವಿದೆ. ಆದರೆ ಪೊಲೀಸರು ಬಳಸಿದ್ದ ಫಲಕಗಳಲ್ಲಿ ಇದನ್ನು ‘ಹೌ ಈಸ್‌ ದ ಜೋಶ್‌’... ‘ಲೋ ಸರ್‌’ ಎಂದು ಬದಲಿಸಲಾಗಿತ್ತು. ನಮಗೆ ನ್ಯಾಯ ಬೇಕು, ರಕ್ಷಕರನ್ನು ರಕ್ಷಿಸಿ, ನಾವು ಸಮವಸ್ತ್ರದಲ್ಲಿರುವ ಮನುಷ್ಯರು, ಮುಂತಾದ ಫಲಕಗಳು ಸಹ ಪ್ರತಿಭಟನೆಯಲ್ಲಿ ಕಾಣಿಸಿದವು.

ಅಧಿಕಾರಿಗಳ ಬೆಂಬಲ
ಪೊಲೀಸರ ಪ್ರತಿಭಟನೆಯನ್ನು ಬೆಂಬಲಿಸಿ ಅನೇಕ ಐಪಿಎಸ್‌ ಅಧಿಕಾರಿಗಳು ಟ್ವೀಟ್‌ ಮಾಡಿದ್ದಾರೆ.

‘ಕ್ಷಮಿಸಿ... ನಾವು ಪೊಲೀಸರು.. ನಮಗೆ ಅಸ್ತಿತ್ವ ಇಲ್ಲ, ನಮಗೆ ಕುಟುಂಬ ಇಲ್ಲ... ಮಾನವ ಹಕ್ಕುಗಳೂ ನಮಗೆ ಅನ್ವಯವಾಗುವುದಿಲ್ಲ...!’ ಎಂದು ದೆಹಲಿ ಪೊಲೀಸ್‌ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಮಧುರ್‌ ವರ್ಮಾ ಟ್ವೀಟ್‌ ಮಾಡಿದ್ದಾರೆ.

ಸಮಸ್ಯೆ ಇತ್ಯರ್ಥಕ್ಕೆ ಯತ್ನ
‘ಪೊಲೀಸ್‌– ವಕೀಲರ ಘರ್ಷಣೆಯ ಘಟನೆಯ ವಿಚಾರಣೆ ನಡೆಸುತ್ತಿರುವ ನ್ಯಾಮೂರ್ತಿಗಳಾದ ಡಿ.ಎನ್‌. ಪಟೇಲ್‌ ಹಾಗೂ ಸಿ. ಹರಿಶಂಕರ್‌ ಅವರನ್ನೊಳಗೊಂಡ ಪೀಠವು ಭಾರತೀಯ ವಕೀಲರ ಸಂಘ ಹಾಗೂ ದೆಹಲಿಯ ಇತರ ವಕೀಲರ ಸಂಘಗಳಿಗೆ ನೋಟಿಸ್‌ ನೀಡಿ, ಕೇಂದ್ರ ಸರ್ಕಾರದ ಮನವಿಯನ್ನು ಕುರಿತು ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ತೀಸ್‌ ಹಜಾರಿ ಕೋರ್ಟ್‌ ಆವರಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಾರದೆಂದು ನೀಡಿದ್ದ ಆದೇಶವನ್ನು ಆನಂತರದ ಘಟನೆಗಳಿಗೆ ಅನ್ವಯಿಸಬಾರದು ಎಂದು ಕೇಂದ್ರ ಕೋರ್ಟ್‌ಗೆ ಮನವಿ ಮಾಡಿತ್ತು.

ಸಾಕೇತ್‌ ಕೋರ್ಟ್‌ ಆವರಣದಲ್ಲಿ ವಕೀಲರೊಬ್ಬರು ಸಮವಸ್ತ್ರದಲ್ಲಿದ್ದ ಪೊಲೀಸ್‌ ಹಾಗೂ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ. ಈ ಕಾರಣಕ್ಕೆ ಕೇಂದ್ರದ ಮನವಿಯು ಮಹತ್ವ ಪಡೆದುಕೊಂಡಿದೆ. ಈನಡುವೆ, ‘ನ್ಯಾಯಾಲಯದ ಆವರಣದಲ್ಲಿ ನಡೆದ ಘರ್ಷಣೆಯ ವಿಡಿಯೊ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸುದ್ದಿ ವಾಹಿನಿಗಳಿಗೆ ಸೂಚನೆ ನೀಡಬೇಕು. ವಿಡಿಯೊ ಪ್ರಸಾರವಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ’ ಎಂದು ವಕೀಲರಕೆಲವು ಸಂಘಟನೆಗಳು ಮನವಿ ಮಾಡಿವೆ. ಆ ಕುರಿತು ಯಾವುದೇ ಸೂಚನೆ ನೀಡಲು ಕೋರ್ಟ್‌ ನಿರಾಕರಿಸಿತು.

ಬಹಿಷ್ಕಾರ ಮುಂದುವರಿಕೆ
ತೀಸ್‌ ಹಜಾರಿ ಘರ್ಷಣೆ ಘಟನೆಯ ನಂತರ ನ್ಯಾಯಾಲಯಗಳ ಕಲಾಪವನ್ನು ಬಹಿಷ್ಕರಿಸಿರುವ ಜಿಲ್ಲಾ ನ್ಯಾಯಾಲಯಗಳ ವಕೀಲರು, ಬುಧವಾರವೂ ಕಲಾಪದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸಬೇಡಿ ಎಂದು ಭಾರತೀಯ ವಕೀಲರ ಸಂಘವು ಮನವಿ ಮಾಡಿದ್ದರೂ, ವಕೀಲರು ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿದ್ದಾರೆ. ‘ದೆಹಲಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರು ಬುಧವಾರವೂ ಕಲಾಪ ಬಹಿಷ್ಕರಿಸಲಿದ್ದಾರೆ’ ಎಂದು ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸಂಚಾಲನಾ ಸಮಿತಿಯ ಕಾರ್ಯದರ್ಶಿ ಧೀರ್‌ ಸಿಂಗ್‌ ತಿಳಿಸಿದರು.

**

ಪೊಲೀಸರು 24 ಗಂಟೆ ರಕ್ಷಣಾ ಕೆಲಸದಲ್ಲಿ ತೊಡಗಿರುತ್ತಾರೆ. ಆದರೂ ಅವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತದೆ.
-ಮುನೇಶಾ ದಹಿಯಾ, ಪೊಲೀಸ್‌ ಅಧಿಕಾರಿಯೊಬ್ಬರ ಪತ್ನಿ

**

ಪೊಲೀಸರಲ್ಲಿ ಧೈರ್ಯ ತುಂಬಬಲ್ಲ ಯಾವುದೇ ಕ್ರಮ ವನ್ನು ಹಿರಿಯ ಅಧಿಕಾರಿಗಳು ಕೈಗೊಳ್ಳಲಿಲ್ಲ. ಆದ್ದರಿಂದ ಪ್ರತಿಭಟನೆ ಅನಿವಾರ್ಯವಾಯಿತು.
-ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT