ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ ಸುದ್ದಿ ಗೊತ್ತಿದ್ದರೂ ಚಿತ್ರೀಕರಣದಲ್ಲಿ ಮೋದಿ ‘ಬ್ಯುಸಿ’

ಪುಲ್ವಾಮಾ ದಾಳಿ ರಾಜಕೀಯಕ್ಕೆ ಬಳಕೆ
Last Updated 21 ಫೆಬ್ರುವರಿ 2019, 20:19 IST
ಅಕ್ಷರ ಗಾತ್ರ

ನವದೆಹಲಿ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಎಲ್ಲಾ ಪಕ್ಷಗಳು ಹೇಳಿದ್ದವು. ಆದರೆ ಈ ದಾಳಿಯೇ ಈಗ ರಾಜಕೀಯ ವಾಕ್ಸಮರಕ್ಕೆ ಗ್ರಾಸವಾಗುತ್ತಿದೆ.

‘ಪುಲ್ವಾಮಾ ದಾಳಿ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು. ಯೋಧರ ಮೇಲಿನ ದಾಳಿಯ ಬಗ್ಗೆ ಮಾಹಿತಿ ದೊರೆತರೂ ಚಿತ್ರೀಕರಣವನ್ನು ಮುಂದುವರಿಸಿದರು’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ಆರೋಪಿಸಿದ್ದಾರೆ.

‘ಈ ವಿಷಯದಲ್ಲಿ ಏನನ್ನೂ ಮಾತನಾಡದಂತೆ ನಮ್ಮ ಅಧ್ಯಕ್ಷ ರಾಹುಲ್ ಗಾಂಧಿ ನಮಗೆಲ್ಲಾ ನಿರ್ದೇಶನ ನೀಡಿದ್ದರು. ಹೀಗಾಗಿ ನಾವು ಸುಮ್ಮನಿದ್ದೆವು. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಾನುವಾರ ಈ ವಿಚಾರವನ್ನು ಇಟ್ಟುಕೊಂಡುಅಸ್ಸಾಂನಲ್ಲಿ ರಾಜಕೀಯ ಮಾಡಿದ್ದಾರೆ.‘ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿತ್ತು. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ನಾವು ಕಾಂಗ್ರೆಸ್‌ನಂತಲ್ಲ. ನಮ್ಮ 40 ಯೋಧರ ಬಲಿದಾನವ್ಯರ್ಥವಾಗುವುದಿಲ್ಲ’ ಎಂದು ಹೇಳಿದ್ದಾರೆ. ಇದು ರಾಜಕೀಯವಲ್ಲವೇ? ದಾಳಿಗೆ ಸಂಬಂಧಿಸಿದಂತೆ ಕೇಳಲು ಬಹಳಷ್ಟು ಪ್ರಶ್ನೆಗಳಿವೆ’ ಎಂದು ಸುರ್ಜೇವಾಲಾ ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ್ದಾರೆ.

‘ದಾಳಿ ಮಧ್ಯಾಹ್ನ 3.10ಕ್ಕೆ ನಡೆದಿದೆ. ಆಗ ಪ್ರಧಾನಿ ಮೋದಿ ಜಿಮ್‌ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಇದ್ದರು. ಪ್ರಧಾನಿಯ ಹಿಮಾಲಯದ ದಿನಗಳನ್ನು ಕುರಿತು ಡಿಸ್ಕವರಿ ವಾಹಿನಿಯ ಸಿಬ್ಬಂದಿ ಅಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ದಾಳಿಯ ವಿಷಯ ಗೊತ್ತಾದರೂ ಮೋದಿ ಚಿತ್ರೀಕರಣವನ್ನುಸಂಜೆ ಏಳರವೆರೆಗೆ ಮುಂದುವರಿಸಿದರು’ ಎಂದು ಅವರು ಆರೋಪಿಸಿದ್ದಾರೆ.

‘ದಾಳಿಗೆ ಬಲಿಯಾದ ಯೋಧರಿಗಾಗಿ ಇಡೀ ದೇಶ ಮರುಗುತ್ತಿದ್ದರೆ, ಪ್ರಧಾನಿ ಮೋದಿ ದೋಣಿಯಲ್ಲಿ ಕುಳಿತು ಮೊಸಳೆ ನೋಡುತ್ತಿದ್ದರು. ಸಂಜೆ ಏಳು ಗಂಟೆಗೆ ಅವರು ರಾಷ್ಟ್ರೀಯ ಉದ್ಯಾನದಲ್ಲಿನ ಅತಿಥಿ ಗೃಹದಲ್ಲಿ ಸಮೋಸ ಮತ್ತು ಟೀ ಸೇವಿಸಿದ್ದಾರೆ. ಆದರೆ ಆಗ ಇಡೀ ದೇಶ ಯೋಧರಿಗಾಗಿ ಕಣ್ಣೀರಿಡುತ್ತಿತ್ತು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಂತಹ ಸಮಯದಲ್ಲಿ ಪ್ರಧಾನಿಯು ಭದ್ರತಾ ವ್ಯವಹಾರಗಳ ಸಂಪುಟ ಸಮಿತಿಯ ಸಭೆ ನಡೆಸಬೇಕಿತ್ತು. ಆದರೆ ತನ್ನನ್ನು ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುವ ಮೋದಿ ಚಿತ್ರೀಕರಣ ನಡೆಸುತ್ತಿದ್ದರು. ಇಂತಹ ವರ್ತನೆಯನ್ನು ದೇಶವೊಂದರ ಪ್ರಧಾನಿಯಿಂದ ನಿರೀಕ್ಷಿಸಲು ಸಾಧ್ಯವೇ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕ್‌ ಭಾಷೆಯಲ್ಲಿ ಕಾಂಗ್ರೆಸ್‌ ಮಾತು: ಬಿಜೆಪಿ
ನವದೆಹಲಿ:
ಪುಲ್ವಾಮಾ ದಾಳಿಯ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಕಾಶ್ಮೀರ ಸಮಸ್ಯೆಯ ಸೃಷ್ಟಿಕರ್ತ ಜವಾಹರಲಾಲ್‌ ನೆಹರೂ ಎಂದು ಹೇಳಿದೆ. ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರದ ನೈತಿಕತೆಯನ್ನು ಕಾಂಗ್ರೆಸ್‌ ಪಕ್ಷ ಕುಗ್ಗಿಸುತ್ತಿದೆ ಎಂದು ಹರಿಹಾಯ್ದಿದೆ.

‘ನೀವು ನಮಗೆ ರಾಷ್ಟ್ರೀಯತೆಯ ಪಾಠ ಹೇಳಬೇಕಾಗಿಲ್ಲ. ನಮ್ಮ ಪ್ರತಿ ಹನಿ ರಕ್ತದಲ್ಲಿಯೂ ರಾಷ್ಟ್ರೀಯತೆ ಇದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಮಾತನಾಡುತ್ತಿರುವ ರೀತಿಯಲ್ಲಿಯೇ ಕಾಂಗ್ರೆಸ್‌ ವಕ್ತಾರರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನ ವಕ್ತಾರರ ಹೇಳಿಕೆ ಕೇಳಿ ಪಾಕಿಸ್ತಾನದ ಜನರು ಮುದಗೊಂಡಿರುತ್ತಾರೆ. ಶೈಲಿಯಲ್ಲಿ ಬದಲಾವಣೆ ಇರಬಹುದು, ಆದರೆ, ವಿಷಯದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್‌ ದೇವಧರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯ್ಡು ಅವರು ಪಾಕಿಸ್ತಾನ ಪ್ರಧಾನಿಯತ್ತ ವಾಲಿರುವಂತೆ ಕಾಣಿಸುತ್ತಿದೆ. ನಾಯ್ಡು ಅವರಿಗೆ ಭಾರತದ ಪ್ರಧಾನಿಗಿಂತ ಪಾಕಿಸ್ತಾನ ಪ್ರಧಾನಿ ಮೇಲೆ ಹೆಚ್ಚು ನಂಬಿಕೆ ಇದ್ದಂತಿದೆ ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿಯ ಬಳಿಕ ಇಡೀ ದೇಶ ಒಂದಾಗಿದೆ. ಒಂದಾದ ಬಳಿಕ ಒಂದರಂತೆ ದೇಶಗಳು ದಾಳಿಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿವೆ. ಭಾರತದ ಜತೆ ಗಟ್ಟಿಯಾಗಿ ನಿಂತಿವೆ. ಭಾರತವು ಸಂಕಷ್ಟದ ಸ್ಥಿತಿ ಎದುರಿಸುತ್ತಿರುವಾಗ ಕಾಂಗ್ರೆಸ್‌ ಪಕ್ಷದ ಬಣ್ಣ ಬಯಲಾಗಿದೆ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಮೋದಿ ಅವರು ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೂ ಅವರು ಉತ್ತರ ಕೊಟ್ಟಿದ್ದಾರೆ. ಭಯೋತ್ಪಾದಕರ ಸಂಚಿಗೆ ಅನುಗುಣವಾಗಿ ಭಾರತ ಸ್ಥಗಿತವಾಗದು. ಉಗ್ರರ ದಾಳಿಯಿಂದಾಗಿ ಭಾರತ ಸ್ಥಗಿತವಾಯಿತು ಎಂಬ ಸಂದೇಶ ರವಾನೆ ಆಗಬಾರದು ಎಂದು ಅವರು ಹೇಳಿದ್ದಾರೆ.

ಯೋಧರಿಗೆ ವಿಮಾನ
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆಯಲ್ಲಿರುವ ಕೇಂದ್ರೀಯ ಶಸಸ್ತ್ರ ಪೊಲೀಸ್ ಪಡೆಯ ಎಲ್ಲಾ ಯೋಧರು ವಿಮಾನದಲ್ಲಿ ಓಡಾಡಬಹುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಶ್ರೀನಗರ–ದೆಹಲಿ, ದೆಹಲಿ–ಶ್ರೀನಗರ, ಜಮ್ಮು–ಶ್ರೀನಗರ, ಶ್ರೀನಗರ–ಜಮ್ಮು ನಡುವಣ ಓಡಾಟಕ್ಕೆ ಇದು ಅನ್ವಯವಾಗಲಿದೆ. ಯೋಧರು ಕೆಲಸದ ಓಡಾಟ ಮತ್ತು ರಜೆಯ ವೇಳೆಯ ಓಡಾಟಕ್ಕೂ ಇದು ಅನ್ವಯವಾಗಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಶುಕ್ರವಾರ ವಿಚಾರಣೆ:ಉರಿ ಮತ್ತು ಪುಲ್ವಾಮಾ ದಾಳಿಗಳ ತನಿಖೆಗೆ ಸುಪ್ರೀಂ ಕೋರ್ಟ್‌ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ ಎಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಪಾಕಿಸ್ತಾನಕ್ಕೆ ನೀರು ಸ್ಥಗಿತ
ನವದೆಹಲಿ:
ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ನದಿ ನೀರನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

‘ರಾವಿ, ಬಿಯಾಸ್ ಮತ್ತು ಸತಲೆಜ್‌ ನದಿಗಳ ನಮ್ಮ ಪಾಲಿನ ನೀರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿತ್ತು. ಅದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ ಜನರ ಉಪಯೋಗಕ್ಕಾಗಿ ಈ ನೀರನ್ನು ಬಳಸುತ್ತೇವೆ’ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

‘ರಾವಿ ನದಿಗೆ ಶಹಾಪುರ–ಕಂಡಿಯಲ್ಲಿ ಅಣೆಕಟ್ಟೆ ನಿರ್ಮಿಸಲಾಗುತ್ತಿದೆ. ಉಜ್‌ ನದಿಗೆ ಕಟ್ಟಲಾಗಿರುವ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಹೆಚ್ಚಿನ ನೀರನ್ನು ರಾವಿ–ಬಿಯಾಸ್ ನದಿ ಜೋಡಣೆ ಯೋಜನೆ ಮೂಲಕ ಬೇರೆ ರಾಜ್ಯಗಳಿಗೆ ಹರಿಸಲಾಗುತ್ತದೆ. ಈ ಎಲ್ಲಾ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ವಿಮಾನದ ವೆಚ್ಚ ಮುಖ್ಯವಾಯಿತೇ?
‘ಗುಪ್ತಚರ ವ್ಯವಸ್ಥೆಯ ವೈಫಲ್ಯವೇಪುಲ್ವಾಮಾ ದಾಳಿಗೆ ಕಾರಣ. ಕಾರ್‌ಬಾಂಬ್ ದಾಳಿ ನಡೆಸುತ್ತೇವೆ ಎಂದು ಜೈಷ್ ಎ ಮೊಹಮ್ಮದ್ ಬಿಡುಗಡೆ ಮಾಡಿದ್ದ ವಿಡಿಯೊವನ್ನು ಕಡೆಗಣಿಸಿದ್ದು ಏಕೆ? ಕಾಶ್ಮೀರಿ ಉಗ್ರರಿಗೆ ಆರ್‌ಡಿಎಕ್ಸ್‌ನಂತಹ ಪ್ರಬಲ ಸ್ಫೋಟಕ ಸಾಮಗ್ರಿಗಳು ದೊರೆತದ್ದು ಹೇಗೆ? ತುರ್ತು ಸಂದರ್ಭದಲ್ಲಿ ಯೋಧರನ್ನು ಏರ್‌ಲಿಫ್ಟ್ ಮಾಡಬೇಕಿತ್ತು. ಆದರೆ ಅವರನ್ನು ರಸ್ತೆ ಮೂಲಕವೇ ಕಳುಹಿಸಿದ್ದು ಏಕೆ? ಯೋಧರ ಪ್ರಾಣಕ್ಕಿಂತ ನಿಮಗೆ ವಿಮಾನದ ವೆಚ್ಚವೇ ಮುಖ್ಯವಾಯಿತೇ’ ಎಂದು ಸುರ್ಜೇವಾಲ ಅವರು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿಯ ವಿದೇಶಿ ಪ್ರವಾಸ:‘ನಮ್ಮ ಪ್ರಧಾನಿಯ ಆದ್ಯತೆಯ ವಿಷಯಗಳೇನು ಎಂಬ ಪ್ರಶ್ನೆ ಕೇಳಬೇಕಾಗಿದೆ. ಏಕೆಂದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಈ ಮನುಷ್ಯ ದಕ್ಷಿಣ ಕೊರಿಯಾಕ್ಕೆ ಪ್ರವಾಸ ಹೋಗಿದ್ದಾರೆ’ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.

‘ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಎಂದು ಹೊಗಳಿದ ಸೌದಿ ಯುವರಾಜನನ್ನು ಅಷ್ಟೊಂದು ಅದ್ದೂರಿಯಾಗಿ ಸ್ವಾಗತಿಸುವ ಅವಶ್ಯಕತೆ ಏನಿತ್ತು? ಭಯೋತ್ಪಾದನೆ ನಿರ್ಮೂಲನೆಗೆ ಸಂಬಂಧಿಸಿದಂತೆ ಇಬ್ಬರು ನಾಯಕರೂ ಚರ್ಚೆ ನಡೆಸಿದರು. ಆದರೆ ಅವರ ಜಂಟಿ ಹೇಳಿಕೆಯಲ್ಲಿ ‘ಭಯೋತ್ಪಾದನೆ ಪೋಷಕ ದೇಶ’ ಪಾಕಿಸ್ತಾನದ ಉಲ್ಲೇಖವೇ ಇರಲಿಲ್ಲ. ಬಹುಶಃ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನದ ಹೆಸರು ಸೇರಿಸಬೇಕು ಎಂಬುದು ಪ್ರಧಾನಿ ಮೋದಿ ಅವರಿಗೆ ಮರೆತು ಹೋಗಿರಬೇಕು’ ಎಂದು ಅವರು ಲೇವಡಿ ಮಾಡಿದ್ದಾರೆ.

ಹಫೀಜ್‌ ಸಂಘಟನೆ ನಿಷೇಧ
ಇಸ್ಲಾಮಾಬಾದ್‌:
ಮುಂಬೈನಲ್ಲಿ 2008ರಲ್ಲಿ ನಡೆದ ದಾಳಿಯ ರೂವಾರಿ ಹಫೀಜ್‌ ಸಯೀದ್‌ನ ಜಮಾತ್‌ –ಉದ್‌ –ದವಾ (ಜೆಯುಡಿ) ಹಾಗೂ ಫಲಾಹ್ ಇ ಇನ್ಸ್ಯಾನಿಟ್ ಫೌಂಡೇಷನ್ ಸಂಘಟನೆಗಳನ್ನು ಪಾಕಿಸ್ತಾನ ನಿಷೇಧಿಸಿದೆ.

ಪ್ರಧಾನಿ ಇಮ್ರಾನ್‌ ಖಾನ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಉಗ್ರರ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.

**

ಒಂದೆಡೆ ನಮ್ಮ ಭದ್ರತಾ ಸಿಬ್ಬಂದಿಯು ಹುತಾತ್ಮ ಯೋಧರ ದೇಹದ ತುಣುಕುಗಳನ್ನು ಆಯ್ದುಕೊಳ್ಳುತ್ತಿದರೆ, ಸಂವೇದನೆಯೇ ಇಲ್ಲದ ಈ ಪ್ರಧಾನಿ ತಮ್ಮ ಪ್ರಚಾರಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದರು.
–ರಣದೀಪ್ ಸಿಂಗ್ ಸುರ್ಜೇವಾಲಾ,ಕಾಂಗ್ರೆಸ್ ವಕ್ತಾರ

**

ಪ್ರಧಾನಿಯ ಪೂರ್ವ ನಿಗದಿತ ಕಾರ್ಯಕ್ರಮದ ಮೇಲೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಆದರೆ ನಮ್ಮ ಪ್ರಧಾನಿ ದೇಶಕ್ಕಾಗಿ ಪ್ರತಿದಿನ 18 ಗಂಟೆ ದುಡಿಯುವುದನ್ನು ಮುಂದುವರಿಸಲಿದ್ದಾರೆ.
–ಅಮಿತ್ ಶಾ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

**

ದೇಶಕ್ಕಾಗಿ ಪ್ರಾಣಬಿಟ್ಟ ಯೋಧರಿಗೆ ಹುತಾತ್ಮ ಸ್ಥಾನಮಾನಗಳಿಲ್ಲ. ಆದರೆ ದೇಶಕ್ಕೆ ಏನನ್ನೂ ನೀಡದ ಈ ಮನುಷ್ಯನಿಗೆ (ಅನಿಲ್ ಅಂಬಾನಿ) ₹ 30 ಸಾವಿರ ಕೋಟಿ ಉಡುಗೊರೆ. ಮೋದಿಯ ‘ನವಭಾರತ’ಕ್ಕೆ ಸ್ವಾಗತ.
–ರಾಹುಲ್ ಗಾಂಧಿ,ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT