ಶನಿವಾರ, ಜುಲೈ 31, 2021
28 °C

ಪದೇಪದೇ‌ ಕಂಪಿಸುತ್ತಿರುವ ದೆಹಲಿ: ಲಘು ಭೂಕಂಪದ ನಂತರ‌ ಭಾರಿ ಕಂಪನ?

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಹರಡುವಿಕೆಯ ತಡೆಗಾಗಿ ಎರಡು ತಿಂಗಳ‌ ಹಿಂದೆ  ಘೋಷಿಸಲಾದ ಲಾಕ್‌ಡೌನ್‌ ನಿಂದಾಗಿ ಮನೆಗಳಲ್ಲೇ‌ ಬಂದಿಯಾಗಿರುವ‌ ದೆಹಲಿಯ ಜನರ ತಲ್ಲಣ, ಪದೇ ಪದೇ  ಕಂಪಿಸುತ್ತಿರುವ ಭೂಮಿಯಿಂದಾಗಿ ಮತ್ತಷ್ಟು ತೀವ್ರಗೊಂಡಿದೆ.

ಬುಧವಾರ ರಾತ್ರಿ 10.40ಕ್ಕೆ ಮತ್ತೊಂದು ಲಘು ಭೂಕಂಪ ‌ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.2ರಷ್ಟು ದಾಖಲಾಗಿದೆ.

ಈ ಕಂಪನವೂ ಸೇರಿದಂತೆ ದೆಹಲಿ ಸೇರಿದಂತೆ ರಾಷ್ಟ್ರ ರಾಜಧಾನಿ ವಲಯ(ಎನ್ ಸಿ ಆರ್) ದಲ್ಲಿ ಏಪ್ರಿಲ್ 12ರಿಂದ ಇದುವರೆಗೆ ಒಟ್ಟು 10 ಕಂಪನಗಳು ದಾಖಲಾದಂತಾಗಿದೆ.

ಈ 10 ಲಘು ಕಂಪನಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.2ರಿಂದ 4.5ರಷ್ಟು  ದಾಖಲಾಗಿದೆ.

ಈ ರೀತಿಯ ಲಘು ಕಂಪನಗಳು ಭಾರೀ ಕಂಪನದ‌ ಮುನ್ಸೂಚನೆ‌ ಎಂದು ‌ಭೂಗರ್ಭಶಾಸ್ತ್ರ ತಜ್ಞರು ಅಭಿಪ್ರಾಯಪಟ್ಟಿದ್ದು, ಸಾರ್ವಜನಿಕರು ಸುರಕ್ಷತಾ‌ ಕ್ರಮದೊಂದಿಗೆ ಸನ್ನದ್ಧರಾಗಿರುವುದು ಸೂಕ್ತ ಎಂಬ ಸಲಹೆಗಳೂ ಕೇಳಿ ಬರುತ್ತಿವೆ.

ಅಂದಾಜು ಎರಡು ಕೋಟಿ ಜನಸಂಖ್ಯೆ ಇರುವ ಈ ಮೆಟ್ರೋಪಾಲಿಟಿನ್ ‌ನಗರದಲ್ಲಿನ ವಸತಿ ಸಮುಚ್ಛಯಗಳು ಹಾಗೂ ವಾಸ ಸ್ಥಳಗಳ ನಿರ್ಮಾಣ ಹಂತದಲ್ಲಿ ಭೂಕಂಪ ತಡೆ‌ ನಿಯಮ ಪಾಲಿಸಿರುವ‌ ಬಗ್ಗೆ ಶಂಕೆ‌ ಇರುವುದರಿಂದ ಸುರಕ್ಷತೆಯು ಅಪಾಯದಲ್ಲಿದೆ. 6ರಿಂದ 8ರ‌ ತೀವ್ರತೆಯ ಕಂಪನ ಸಂಭವಿಸಿದರೆ ಕಟ್ಟಡಗಳು ‌ನೆಲಸಮ ‌ಆಗುವ. ಸಾದ್ಯತೆಗಳೇ ಹೆಚ್ಚು ಎಂಬುದೂ ಜನರ ಆತಂಕ ಇಮ್ಮಡಿಗೊಳಿಸಿದೆ.

ನಿಯಮ‌ ಅನುಸರಿಸಿ, ಕ್ರಮಬದ್ಧವಾಗಿ ಕಂಪನ ತಡೆ ಸಾಮರ್ಥ್ಯದೊಂದಿಗೆ ನಿರ್ಮಿಸಿದ‌ ಕಟ್ಟಡಗಳು ಈ‌ ಪ್ರಮಾಣದ ಕಂಪನವನ್ನು ತಡೆಯಬಲ್ಲವು ಎಂದು  ಜಮ್ಮುವಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಚಂದನ್‌ ಘೋಷ್ ತಿಳಿಸಿದ್ದಾಗಿ ಎಕ್ಸ್ ಪ್ರೆಸ್ ಯು.ಕೆ. ವೆಬ್‌ಸೈಟ್‌ ನ ವರದಿ ತಿಳಿಸಿದೆ.

ಕಂಪನಗಳು ಭೂಮಿಯ ಐದು ಕಿಲೋ ಮೀಟರ್ ವ್ಯಾಪ್ತಿಯ ಆಳದಲ್ಲಿ ದಾಖಲಾಗಿವೆ. ದೆಹಲಿ ಮತ್ತು ಸುತ್ತಮುತ್ತ ಭೂಮಿಯ ಮೇಲ್ಮೈನಲ್ಲಿ‌ ಅನೇಕ ದೋಷಗಳಿವೆ. ಈ ದೋಷಗಳು ಭೂಕಂಪಕ್ಕೆ‌ ಕಾರಣ ಆಗುತ್ತಿರಬಹುದು. ಈ ಬಗ್ಗೆ ಅರಿಯಲು ಹವಾಮಾನ ಕೇಂದ್ರದಲ್ಲಿರುವ ದಾಖಲೆಗಳು ಹಾಗೂ‌ ಈ ಕುರಿತ‌ ಇದುವರೆಗಿನ ಸಂಶೋಧನೆಗಳನ್ನು ಪರಿಶೀಲಿಸಬೇಕಿದೆ ಎಂದು ಹವಾಮಾನ ಇಲಾಖೆಯ ಭೂಕಂಪ‌ಶಾಸ್ತ್ರಜ್ಞ ಎ.ಪಿ. ಪಾಂಡೆ ಇತ್ತೀಚೆಗಷ್ಟೇ ಹೇಳಿದ್ದಾರೆ.

ಭೂಕಂಪನ ಸಂಭವಿಸಲಿರುವ  ಸ್ಥಳ, ಸಮಯದ ಕುರಿತು ನಿಖರವಾಗಿ ಭವಿಷ್ಯ ನುಡಿಯಲಾಗದು. ಆದರೂ, ಇಷ್ಟು ಪ್ರಮಾಣದ‌ಲ್ಲಿ ಭೂಮಿ ಲಘುವಾಗಿ ಕಂಪಿಸಿರುವುದು‌ ಎನ್ ಸಿ ಆರ್ ವ್ಯಾಪ್ತಿಯ ಅಪಾಯದ‌ ಮುನ್ಸೂಚನೆಯೇ ಆಗಿದೆ ಎಂದು ವಾಡಿಯಾ‌ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ಮುಖ್ಯಸ್ಥ ಡಾ.ಕಲಚಂದ್‌ ಸೈನ್ ಹೇಳಿದ್ದಾರೆ.

ಇನ್ನಷ್ಟು...

ದೆಹಲಿಯಲ್ಲಿ ಲಘು ಭೂಕಂಪ: ಆತಂಕದಿಂದ ಮನೆಯಿಂದ ಹೊರಬಂದ ಜನರು

ದೆಹಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ

ದೆಹಲಿಯಲ್ಲಿ ಮತ್ತೆ ಲಘು ಭೂಕಂಪ

ರಾಜಧಾನಿ ದೆಹಲಿಯಲ್ಲಿ ಮತ್ತೆ ಲಘು ಭೂಕಂಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು