ಬುಧವಾರ, ಫೆಬ್ರವರಿ 19, 2020
25 °C
ಸಭೆ ನಡೆಸಲು ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

ಅತ್ಯಾಚಾರ ವಿಡಿಯೊ ವೈರಲ್ ತಡೆಗೆ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಕ್ಕಳ ಅಶ್ಲೀಲ ಚಿತ್ರಗಳು, ಅತ್ಯಾಚಾರದ ವಿಡಿಯೊಗಳು ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವ ಸಂಬಂಧ ಗೂಗಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹ ಜಾಲತಾಣ ಸಂಸ್ಥೆಗಳ ಜತೆ ಕೇಂದ್ರ ಸರ್ಕಾರ ಸಭೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.

ಹೈದರಾಬಾದ್ ಮೂಲದ ಎನ್‌ಜಿಒ ‘ಪ್ರಜ್ವಲ’ದ ಪ್ರತಿನಿಧಿಯಾಗಿರುವ ವಕೀಲೆ ಅಪರ್ಣಾ ಭಟ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಸೂರ್ಯಕಾಂತ್‌ ಅವರನ್ನು ಒಳಗೊಂಡ ಪೀಠ ಈ ಸೂಚನೆ ನೀಡಿತು.

‘ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ವಿಡಿಯೊಗಳು ಹರಡುವುದನ್ನು ತಡೆಗಟ್ಟುವ ಕುರಿತು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಸಂಬಂಧಪಟ್ಟ ಸಂಸ್ಥೆಗಳ ಜತೆ 2018ರ ಡಿಸೆಂಬರ್‌ನಿಂದಲೂ ಸಭೆ ನಡೆಸಿಲ್ಲ’ ಎಂದು ಭಟ್ ನೀಡಿದ ಮಾಹಿತಿಯನ್ನು ಪರಿಗಣಿಸಿದ ಪೀಠ, ‘ಸಭೆ ನಡೆಸುವಂತೆ ಎಂಎಚ್‌ಎಗೆ ಸೂಚನೆ ನೀಡಲಾಗುತ್ತದೆ’ ಎಂದು ಹೇಳಿತು.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಎಂಎಚ್‌ಎ ಸಭೆ ನಡೆಸುತ್ತದೆ. ಈ ಸಂಬಂಧ ಯಾವುದೇ ಆದೇಶ ನೀಡುವುದು ಬೇಡ’ ಎಂದು ಪೀಠಕ್ಕೆ ತಿಳಿಸಿದರು.

‘ಮಕ್ಕಳ ಅಶ್ಲೀಲ ಚಿತ್ರಗಳು, ಅತ್ಯಾಚಾರದ ವಿಡಿಯೊಗಳನ್ನು ಅಂತರ್ಜಾಲದಿಂದ ತೆಗೆಯಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಬಹುದು’ ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಸಿಬಿಐಗೆ ಆದೇಶಿಸಿದ್ದ ಪೀಠ: ಎರಡು ಅತ್ಯಾಚಾರ ಪ್ರಕರಣಗಳ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ ಎಂದು 2015ರಲ್ಲಿ ಸುಪ್ರೀಂಕೋರ್ಟ್‌ನ ಆಗಿನ ಸಿಜೆಐ ಎಚ್‌.ಎಲ್‌. ದತ್ತು ಅವರಿಗೆ ಪತ್ರ ಬರೆಯಲಾಗಿತ್ತು. ಜತೆಗೆ ಪೆನ್‌ಡ್ರೈವ್‌ನಲ್ಲಿ ಈ ವಿಡಿಯೊಗಳನ್ನೂ ನೀಡಲಾಗಿತ್ತು. ಇದನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಆಗಿನ ನ್ಯಾಯಪೀಠ, ‘ವಿಡಿಯೊ ಹರಡಲು ಕಾರಣರಾದವರನ್ನು ಪತ್ತೆ ಹಚ್ಚಲು ತನಿಖೆ ನಡೆಸಬೇಕು’ ಎಂದು ಸಿಬಿಐಗೆ ಸೂಚಿಸಿತ್ತು.

ತ್ವರಿತ ಕ್ರಮಕ್ಕೆ ಎನ್‌ಜಿಒ ಆಗ್ರಹ

‘ಅತ್ಯಾಚಾರ ವಿಡಿಯೊಗಳು ಹಾಗೂ ಅಶ್ಲೀಲ ಚಿತ್ರಗಳು ಹರಡುವುದನ್ನು ತ್ವರಿತವಾಗಿ ತಡೆಯಬೇಕು ಎನ್ನುವುದು ಎನ್‌ಜಿಒ ನಿಲುವು. ಆದರೆ ಈ ಕುರಿತು ಜಾಲತಾಣ ಸಂಸ್ಥೆಗಳು ಭಿನ್ನ ನಿಲುವು ಹೊಂದಿದೆ’ ಎಂದು ಅಪರ್ಣಾ ಭಟ್ ಪೀಠಕ್ಕೆ ತಿಳಿಸಿದರು.

‘ಅಶ್ಲೀಲ ವಿಡಿಯೊಗಳು ಜಾಲತಾಣದಲ್ಲಿ ಕಂಡುಬರುತ್ತಿದ್ದಂತೆಯೇ ಅವುಗಳು ಹರಡುವುದನ್ನು ತಡೆಯಬಹುದು ಎನ್ನುವುದು ಎನ್‌ಜಿಒ ನಿಲುವು. ಆದರೆ, ಅಂತಹ ವಿಡಿಯೊಗಳು ಇರುವುದನ್ನು ತಮ್ಮ ಗಮನಕ್ಕೆ ತಂದ ಬಳಿಕವಷ್ಟೆ ಅವುಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಬಹುದು ಎಂದು ಜಾಲತಾಣಗಳು ಹೇಳುತ್ತವೆ. ಅತ್ಯಾಚಾರದ ವಿಡಿಯೊ ಹರಡುವುದನ್ನು ತಡೆಯಲು 36 ತಾಸುಗಳ ಬಳಿಕ ಕ್ರಮ ಕೈಗೊಳ್ಳುವುದಾದರೆ ಅಷ್ಟರಲ್ಲಾಗಲೇ ಅವು ವೈರಲ್ ಆಗಿರುತ್ತವೆ’ ಎಂದು ಭಟ್ ಅವರು ವಾದಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೀಡಬೇಕು ಎಂದು ಭಟ್ ಅವರಿಗೆ ಪೀಠ ಸೂಚಿಸಿತು. ನಾಲ್ಕು ವಾರಗಳ ಬಳಿಕ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು