ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ–ಬಂಗಾಳಿ ಸಿನಿಮಾ ಸಂಭ್ರಮ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಸಿನಿಮೋತ್ಸವದ ಕಾರಣಕ್ಕಾಗಿ ವರ್ಷಕ್ಕೊಮ್ಮೆ ಸುದ್ದಿಯಲ್ಲಿರುವ ರಾಜಧಾನಿಯಲ್ಲೀಗ ಪ್ರಾದೇಶಿಕ ಮಟ್ಟದ ಸಿನಿಮೋತ್ಸವಕ್ಕೂ ವೇದಿಕೆ ದಕ್ಕುತ್ತಿದೆ. ವರುಷದ ಹಿಂದಷ್ಟೇ ಪ್ರಥಮ ಬಾರಿಗೆ ಕನ್ನಡ–ಬಂಗಾಳಿ ಸಿನಿಮೋತ್ಸವ ಆಚರಿಸಿ ಯಶಸ್ಸು ಗಳಿಸಿದ್ದ ಸತ್ಯಜಿತ್ ರೇ ಫಿಲಂ ಸೊಸೈಟಿ ಈಗ ಎರಡನೇ ವರ್ಷದ ಕನ್ನಡ–ಬಂಗಾಳಿ ಸಿನಿಮೋತ್ಸವಕ್ಕೆ ಸಜ್ಜಾಗಿದೆ.

ಜೂನ್ 8,9 ಮತ್ತು 10 ಈ ಮೂರು ದಿನಗಳ ಕಾಲ ನಡೆಯಲಿರುವ ಸಿನಿಮೋತ್ಸವ, ಕನ್ನಡ ಮತ್ತು ಬಂಗಾಳಿ ಸಿನಿ ಪ್ರೇಕ್ಷಕರ ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆಯಾಗಲಿದೆ. ಒಟ್ಟು 16 ಸಿನಿಮಾಗಳು ಪ್ರದರ್ಶನವಾಗಲಿದ್ದು, ಸಿನಿಮೋತ್ಸವವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗ ಕನ್ನಡ ಸಿನಿಮಾಗಳಿಗೆ ಮೀಸಲಾಗಿದ್ದು, ಇದರಲ್ಲಿ ಕನ್ನಡದ ‘ರಾಜಕುಮಾರ’, ‘ಒಂದು ಮೊಟ್ಟೆಯ ಕಥೆ’, ‘ಹೆಬ್ಬೆಟ್ಟು ರಾಮಕ್ಕ’ ಮತ್ತು ‘ಕೂರ್ಮಾವತಾರ’ ಸಿನಿಮಾಗಳು ಪ್ರದರ್ಶನ ಕಾಣಲಿವೆ.

ಎರಡನೇ ವಿಭಾಗ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ ಸ್ಮರಣೆಗೆ ಮೀಸಲಾಗಿದ್ದು, ಇದರಲ್ಲಿ ಸತ್ಯಜಿತ್ ರೇ ಬರೆದ ನಾಲ್ಕು ಕಥೆಗಳು ಕಿರುಚಿತ್ರ ರೂಪದಲ್ಲಿ ಪ್ರದರ್ಶನವಾಗಲಿವೆ. ಸತ್ಯಜಿತ್ ರೇ ಅವರ ಮಗ ಸಂದೀಪ್ ರೇ ಈ ಕಿರುಚಿತ್ರಗಳನ್ನು ನಿರ್ದೇಶಿಸಿರುವುದು ವಿಶೇಷ. ಮೂರನೇ ವಿಭಾಗದದಲ್ಲಿ ಬಂಗಾಳದ ಅತ್ಯುತ್ತಮ ಚಿತ್ರಗಳು ಪ್ರದರ್ಶನ ಕಾಣಲಿವೆ.

‘ಇದುವರೆಗೆ ಭಾರತದ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ಕಾಣದ ‘ಅರನ್ಯದೇಬ್’, ‘ಫೆಲುದಾ–50 ಇಯರ್ಸ್ ಆನ್ ರೇ’ಸ್ ಡಿಟೆಕ್ಷಿವ್’ (ಸಾಕ್ಷ್ಯಚಿತ್ರ), ಐಯೇ (iye), ‘ಪೂಪ’ ಮತ್ತು ‘ರೇನ್‌ಬೊ ಜೆಲ್ಲಿ’ ಸಿನಿಮಾಗಳು ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಪ್ರದರ್ಶನ ಕಾಣಲಿವೆ. ಮೂರು ದಿನಗಳ ಕಾಲ ಸಿನಿಮಾ ಪ್ರದರ್ಶನದ ಬಳಿಕ ನಿರ್ದೇಶಕ, ನಟ ವರ್ಗ ಮತ್ತು ಪ್ರೇಕ್ಷಕರ ನಡುವೆ ಸಂವಾದ ನಡೆಯಲಿದೆ.

ಕನ್ನಡ ಮತ್ತು ಬಂಗಾಳಿ ಸಿನಿ ಪ್ರೇಕ್ಷಕರಿಗೆ ತಮ್ಮಿಷ್ಟದ ಕಲಾವಿದರು ಮತ್ತು ನಿರ್ದೇಶಕರ ಜತೆ ಸಂವಾದ ನಡೆಸುವ ಅಪರೂಪದ ಕ್ಷಣಗಳು ದೊರೆಯಲಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಫೆಡರೇಷನ್ ಆಫ್ ಫಿಲಂ ಸೊಸೈಟಿ ಇನ್ ಇಂಡಿಯಾದ ಸಹಕಾರದಿಂದ ಈ ಸಿನಿಮೋತ್ಸವ ಆಯೋಜಿಸಲಾಗಿದೆ’ ಎನ್ನುತ್ತಾರೆ ಕನ್ನಡ–ಬಂಗಾಳಿ ಸಿನಿಮೋತ್ಸವದ ನಿರ್ದೇಶಕಿ ಹಾಗೂ ಸತ್ಯಜಿತ್ ರೇ ಫಿಲಂ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ.ಮಧುಶ್ರೀ ಸೇನ್‌ಗುಪ್ತ.

ಸಿನಿಮೋತ್ಸವದಲ್ಲಿ ಬಂಗಾಳದ ಖ್ಯಾತ ನಿರ್ದೇಶಕ ಸಂದೀಪ್ ರೇ, ‘15 ಪಾರ್ಕ್ ಅವೆನ್ಯೂ’, ‘ಪಿಂಕ್’, ‘ಕಹಾನಿ’ ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಧೃತಿಮನ್ ಚಟರ್ಜಿ, ಖ್ಯಾತ ಸಿನಿಮಾ ವಿಮರ್ಶಕರಾದ ಪ್ರೇಮೇಂದ್ರ ಮಜುಂದಾರ್, ಸಾಯಿಬಲ್ ಚಟರ್ಜಿ, ಸಿಲಾದಿತ್ಯ ಸೇನ್ ಸೇರಿದಂತೆ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ.

ಜೂನ್ 8ರ ಸಂಜೆ 5.30ಕ್ಕೆ ನಡೆಯಲಿರುವ ವಸಂತನಗರದ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ರಾಜೇಂದ್ರ ಸಿಂಗ್ ಬಾಬು, ಪಿ.ಶೇಷಾದ್ರಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ. ಉದ್ಘಾಟನಾ ದಿನದಂದು ‘ಆಶಾ ಜ್ವರ್ ಮಝೇ’ ಮತ್ತು ಸಮಾರೋಪ ದಿನದಂದು ವಿಶೇಷ ವಿಭಾಗದಲ್ಲಿ ‘ಪೂಪ’ ಸಿನಿಮಾಗಳು ಪ್ರದರ್ಶನವಾಗಲಿವೆ. ಕುಮಾರ ಪಾರ್ಕ್ ರಸ್ತೆಯ ಗಾಂಧಿ ಭವನ ಮತ್ತು ವಸಂತ ನಗರದ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಸಿನಿಮಾಗಳ ಪ್ರದರ್ಶನವಾಗಲಿವೆ.

ಪಾಸ್‌ಗಾಗಿ ಸಂಪರ್ಕಿಸಿ: https://www.facebook.com/srfs.bengaluru/ ಅಥವಾ ಮೊಬೈಲ್ 90195 12868, 97394 62220

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT