ಮಂಗಳವಾರ, ಸೆಪ್ಟೆಂಬರ್ 28, 2021
24 °C
ಪ್ರಧಾನಿಯನ್ನು ದುರ್ಯೋಧನನಿಗೆ ಹೋಲಿಸಿದ ಕಾಂಗ್ರೆಸ್‌ ನಾಯಕಿ

ಮೋದಿಗೆ ಅಹಂಕಾರ: ಪ್ರಿಯಾಂಕಾ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಂಬಾಲಾ (ಹರಿಯಾಣ): ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಭಾರತದ ಪಾತ್ರ ದುರ್ಯೋಧನನಿಗೆ ಹೋಲಿಸಿದ್ದಾರೆ. ‘ದುರ್ಯೋಧನನಿಗೂ ಸೊಕ್ಕು ಇತ್ತು’ ಎಂದು ಅವರು ಹೇಳಿದ್ದಾರೆ. 

ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ‘ಭ್ರಷ್ಟಾಚಾರಿ ನಂ. 1’ ಎಂದು ಹೀಯಾಳಿಸಿದ ಮೋದಿ ಹೇಳಿಕೆಗೆ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ಕೊಟ್ಟ ಪ್ರಿಯಾಂಕಾ, ‘ಜನರ ಮನವನ್ನು ಬೇರೆಡೆ ಸೆಳೆಯುವ ಬದಲು ಅಭಿವೃದ್ಧಿಯಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿ’ ಎಂದು ಸವಾಲು ಎಸೆದಿದ್ದಾರೆ.

‘ಈ ದೇಶ ಎಂದಿಗೂ ಅಹಂಕಾರ ಮತ್ತು ಸೊಕ್ಕನ್ನು ಕ್ಷಮಿಸುವುದಿಲ್ಲ. ಇತಿಹಾಸದಲ್ಲಿಯೂ ಇದು ನಿರೂಪಿತವಾಗಿದೆ. ಮಹಾಭಾರತದಲ್ಲಿಯೂ ಇದಕ್ಕೆ ಸಾಕ್ಷ್ಯವಿದೆ’ ಎಂದು ಅಂಬಾಲಾದಲ್ಲಿ ನಡೆದ
ಪ್ರಚಾರ ಭಾಷಣದಲ್ಲಿ ಮಾತನಾಡಿದರು.

‘ದುರ್ಯೋಧನನಿಗೂ ಇಂಥದೇ ಸೊಕ್ಕು ಇತ್ತು. ತನ್ನ ಮನವೊಲಿಸಲು ಬಂದ ಕೃಷ್ಣನನ್ನು ದುರ್ಯೋಧನ ಒತ್ತೆಯಾಳಾಗಿ ಇರಿಸಿಕೊಂಡಿದ್ದ’ ಎಂಬುದನ್ನು ಉಲ್ಲೇಖಿಸಿದರು. ಪಕ್ಷದ ಅಭ್ಯರ್ಥಿ ಕುಮಾರಿ ಸೆಲ್ಜಾ ಪರ ಅವರು ಪ್ರಚಾರ ಮಾಡಿದರು.

ಹಿಂದಿ ಕವಿ ರಾಮಧಾರಿ ಸಿಂಗ್ ದಿನಕರ್‌ ಅವರ ಸಾಲುಗಳನ್ನು ಓದಿದ ಅವರು, ‘ಯಾರದಾದರೂ ಕುಸಿತ ಆರಂಭವಾದರೆ ಮೊದಲಿಗೆ ಅವರಿಗೆ ಅದೃಷ್ಟ ಕೈಕೊಡುತ್ತದೆ. ನಾಶ ಮನುಷ್ಯನ ಹತ್ತಿರಕ್ಕೆ ಬಂದಾಗ ಮೊದಲು ವಿವೇಕ ಸಾಯುತ್ತದೆ’ ಎಂದರು.

ಪ್ರಧಾನಿಯವರೇ ಜನರನ್ನು ನೇರವಾಗಿ ಎದುರಿಸಿ, ಐದು ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ತಿಳಿಸಿ. ಮುಂದೆ ಏನು ಮಾಡುವ ಉದ್ದೇಶ, ಗುರಿ ಇದೆ ಎಂದು ವಿವರಿಸಿ ಎಂದು ಸವಾಲು ಹಾಕಿದರು. 

‘ನೀವು ಪ್ರಧಾನಿ. ಬಿಜೆಪಿಯ ಅತಿದೊಡ್ಡ ನಾಯಕ. ನಿಮಗೆ ಜನರ ಸಮಸ್ಯೆಗಳು ಅರ್ಥವಾಗಬೇಕು. ಇಲ್ಲವಾದರೆ, ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಭ್ರಮನಿರಸನದಿಂದ ಮೋದಿ ವಿರುದ್ಧ ಟೀಕೆ: ಬಿಜೆಪಿ

ನವದೆಹಲಿ: ಚುನಾವಣೆಯಲ್ಲಿ ಕಳಪೆ ಪ್ರದರ್ಶನದಿಂದ ಭ್ರಮನಿರಸನಗೊಂಡಿರುವ ವಿರೋಧಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ವಿರುದ್ಧ ಟೀಕೆಗೆ ಇಳಿದಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಮಹಾಭಾರತದ ದುರ್ಯೋಧನ ಪಾತ್ರಕ್ಕೆ ನರೇಂದ್ರ ಮೋದಿ ಅವರನ್ನು ಹೋಲಿಸುವ ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಉಪಾಧ್ಯಕ್ಷ ವೈಜಯಂತ್‌ ಜಯ್‌ಪಾಂಡಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿರೋಧಪಕ್ಷಗಳ ನಾಯಕರ ಟೀಕೆಗಳಿಗೆ ಜನರು ಮೇ 23ರಂದು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಪ್ರತಿಪಾದಿಸಿದರು.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆಲ್ಲಲು ‘ನರೇಂದ್ರ ಮೋದಿ ಪರ ಅಲೆ’ ನೆರವಾಗಲಿದೆ. 2014ರ ಚುನಾವಣೆಗಿಂತಲೂ ಬಿಜೆಪಿ ಸ್ಥಾನ ಉತ್ತಮಗೊಳ್ಳಲಿದೆ ಎಂದು ಹೇಳಿಕೊಂಡರು.

ಕಾಂಗ್ರೆಸ್‌ನ ಹಿಂದಿನ ‘ದುರಾಡಳಿತ’ ಕುರಿತು ಮೋದಿ ಮಾತನಾಡಿದ್ದಕ್ಕೆ ಕಾಂಗ್ರೆಸ್‌ ನಾಯಕರು ಪ್ರತಿಯಾಗಿ ಟೀಕಿಸುತ್ತಿದ್ದಾರೆ. ಬಳಸುವ ಭಾಷೆ ಅವರು ಭ್ರಮನಿರಸನಗೊಂಡಿದ್ದನ್ನು ತೋರಿಸುತ್ತಿದೆ. ಕಾಂಗ್ರೆಸ್ ತನ್ನ ಹಿನ್ನೆಲೆ ಕುರಿತು ಏಕೆ ಆತಂಕಕ್ಕೆ ಒಳಗಾಗಬೇಕು ಎಂದರು. ಉಭಯ ಸರ್ಕಾರಗಳ (ಎನ್‌ಡಿಎ, ಯುಪಿಎ) ಸಾಧನೆ ಕುರಿತು ಬೇಕಿದ್ದರೆ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.

***

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ಈ ಚುನಾವಣೆಯನ್ನು ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೃಷಿಕರು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಎದುರಿಸಬೇಕು
-ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ನಾಯಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು