ಸೋಮವಾರ, ಜನವರಿ 17, 2022
18 °C
ಮೂಲಸಮಸ್ಯೆಗೆ ಪರಿಹಾರ ಹುಡುಕದೆ ಉಗ್ರರ ಸದೆ ಬಡಿವ ಮಾತು ಕೇವಲ ಕಾಲಹರಣ * ಎರಡು ಅತಿರೇಕಗಳ ಮಧ್ಯೆ ತತ್ತರಿಸಿರುವ ಜನಸಾಮಾನ್ಯರು

ಹಾವನ್ನು ಬಿಟ್ಟು ಹುತ್ತವ ಬಡಿದಂತೆ...

ಡಿ. ಉಮಾಪತಿ Updated:

ಅಕ್ಷರ ಗಾತ್ರ : | |

Prajavani

ವಿದೇಶಗಳಲ್ಲಿ ಬೇಹುಗಾರಿಕೆ ನಡೆಸುವ ಭಾರತದ ‘RAW’ ಸಂಸ್ಥೆಯ ಮಾಜಿ ಮುಖ್ಯಸ್ಥ ಅಮರಜಿತ್ ಸಿಂಗ್ ದುಲಾತ್ ಅವರು ಕಾಶ್ಮೀರ ಸಮಸ್ಯೆಯನ್ನು ಆಳ ಕಣಿವೆಯ ಇಳಿಜಾರಿನಲ್ಲಿ ಉರುಳುತ್ತಿರುವ ಬಸ್ಸಿಗೆ ಹೋಲಿಸಿದ್ದಾರೆ. ಹಿಂಸೆ ಮತ್ತು ಅರಾಜಕತೆಯತ್ತ ಧಾವಿಸುತ್ತಿರುವ ಈ ಬಸ್ಸಿನ ಬ್ರೇಕುಗಳು ಕೆಲಸ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಬಸ್ಸಿನ ಸ್ಟೀಯರಿಂಗ್ ವೀಲ್ ಕೂಡ ಕಳೆದು ಹೋಗಿದೆ ಎನ್ನುತ್ತಾರೆ.

ಸ್ವತಂತ್ರ ಭಾರತದ ಸರ್ಕಾರಗಳು ಒಂದರ ನಂತರ ಮತ್ತೊಂದು ಕಾಶ್ಮೀರ ವಿವಾದಕ್ಕೆ ಪರಿಹಾರ ಹುಡುಕುವ ಗಂಭೀರ ಪ್ರಯತ್ನ ನಡೆಸಿಲ್ಲ. ಅಂತಹ ಪ್ರಯತ್ನಗಳಿಗೆ ಪಾಕಿಸ್ತಾನ ಮನಸಾರೆ ಸಹಕಾರ ನೀಡಿಯೂ ಇಲ್ಲ. ದ್ವಿಪಕ್ಷೀಯ ಆವರಣಕ್ಕೆ ಸೀಮಿತ ಆಗಿದ್ದ ಈ ವಿವಾದವನ್ನು ವಿಶ್ವಸಂಸ್ಥೆಯ ವೇದಿಕೆಗೆ ಒಯ್ದ ಅಂದಿನ ಪ್ರಧಾನಿ ನೆಹರೂ ನಡೆಯಲ್ಲಿ ಸಮಸ್ಯೆಯ ಬೇರನ್ನು ಹುಡುಕುವವರಿದ್ದಾರೆ. ಆದರೆ ಅದು ವಿವಾದಿತ ವಾದ. ಅಂದಿನಿಂದ ಇಂದಿನ ತನಕ ಕಾಶ್ಮೀರವು ಉಭಯ ದೇಶಗಳ ನಡುವಣ ಚದುರಂಗ ಪಂದ್ಯಭೂಮಿ ಆಗಿ ಪರಿಣಮಿಸಿದೆ. ಯಥಾಸ್ಥಿತಿಯನ್ನು ಬದಲಿಸುವ ಇಚ್ಛಾಶಕ್ತಿ ತೋರಿದವರು ವಿರಳ. 

ಇಂದಿರಾಗಾಂಧಿ ಸರ್ಕಾರ ಬಾಂಗ್ಲಾ ಪರ ನಡೆಸಿದ 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ನಿರ್ಣಾಯಕವಾಗಿ ಹಣಿದಿತ್ತು. ಆದರೆ ಪಾಕಿಸ್ತಾನ ಒಡೆದ ಆರೋಪವನ್ನು ಭಾರತ ಹೊರಬೇಕಾಯಿತು. ವಿಶೇಷವಾಗಿ ಪಾಕ್ ಸೇನೆ-ಜಿಹಾದಿಗಳ ಪ್ರತೀಕಾರ ತಹತಹ ಇಮ್ಮಡಿಸಿತು. ಭಾರತವನ್ನು ಸಾವಿರ ಗಾಯಗಳ ರಕ್ತಸ್ರಾವಗಳಿಗೆ ಗುರಿ ಮಾಡುವ ಪಣ ತೊಡಲಾಯಿತು. ಕಾಶ್ಮೀರ ಮತ್ತು ಪಂಜಾಬ್ ರಣಾಂಗಣ ಆದವು. 1980ರ ದಶಕದಲ್ಲಿ ಸಿಡಿದ ಈ ಸೇಡಿನ ಕಿಡಿಗಳು 1990ರ ಹೊತ್ತಿಗೆ ಭೀಕರ ಕೆನ್ನಾಲಿಗೆಗಳಾಗಿ ಕಣಿವೆಯನ್ನು ಆವರಿಸಿದ್ದವು. ಕಾಶ್ಮೀರಿ ಬ್ರಾಹ್ಮಣರು ತಮ್ಮ ನೆಲದಲ್ಲೇ ನಿರಾಶ್ರಿತರಾದರು.

ಇದನ್ನೂ ಓದಿ... ಕಾಶ್ಮೀರ: ಉಗ್ರರ ಕುಲುಮೆ

ಕಣಿವೆಯ ಜನರೊಂದಿಗೆ ವಿಶ್ವಾಸದ ಸೇತುವೆ ಕಟ್ಟುವ ನಿಜ ಕಾಳಜಿಯನ್ನು ಯಾವ ಸರ್ಕಾರವೂ ತೋರಲಿಲ್ಲ. ಎಡೆಬಿಡದ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಗಳು- ಅಪಪ್ರಚಾರ ಸಮರಗಳು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣವಾಗಿಸಿದವು. ಜಿಹಾದಿಗಳು ಮತ್ತು ಭಾರತದ ಭದ್ರತಾ ಪಡೆಗಳ ಅತಿರೇಕಗಳ ನಡುವೆ ಜನಸಾಮಾನ್ಯರು ನಲುಗಿದರು. ಸಾವಿರಾರು ಹತ್ಯೆಗಳು ಮತ್ತು ನಾಪತ್ತೆಯ ಪ್ರಕರಣಗಳ ಜೊತೆಗೆ ಬಡತನ -ನಿರುದ್ಯೋಗಗಳು ಸಾಮಾಜಿಕ ಅಶಾಂತಿಗೆ ತೈಲ ಸುರಿದವು. ಭಾರತ ಸರ್ಕಾರ ಸ್ಥಳೀಯರ ಪಾಲಿಗೆ ಪರಕೀಯ ಆಗುತ್ತ ಹೋಯಿತು.

ಅಟಲ ಬಿಹಾರಿ ವಾಜಪೇಯಿ ಸರ್ಕಾರ (1998-2004) ಶಾಂತಿ ಸ್ಥಾಪನೆಯತ್ತ ಹೆಜ್ಜೆ ಇರಿಸಿದ ಮಾತಿದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಾರತ ಭಾಗದ ಕಾಶ್ಮೀರದ ನಡುವೆ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದು, ಸ್ವಾಯತ್ತ ಅಧಿಕಾರ ನೀಡಿಕೆ, ಮಿಲಿಟರೀಕರಣವನ್ನು ಕೊನೆಗೊಳಿಸುವುದು ಹಾಗೂ ಕಾಶ್ಮೀರದ ಮೇಲೆ ಭಾರತ-ಪಾಕ್ ಜಂಟಿ ನಿರ್ವಹಣೆಯ ವ್ಯವಸ್ಥೆ ರೂಪಿಸುವ ಪರಿಹಾರಗಳನ್ನು ಮುಷರಫ್ ಸೂಚಿಸಿದ್ದರು. ಶಾಂತಿ ಸ್ಥಾಪನೆಯ ಈ ತಳಹದಿ ರೂಪು ತಳೆಯುವಷ್ಟರಲ್ಲಿ 2004ರ ಚುನಾವಣೆಗಳಲ್ಲಿ ವಾಜಪೇಯಿ ಅಧಿಕಾರ ಕಳೆದುಕೊಂಡರು. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ಈ ಪ್ರಯತ್ನಗಳಿಗೆ ತೆರೆಮರೆಯಲ್ಲಿ ಅನೌಪಚಾರಿಕವಾಗಿ ನೀರೆರೆಯಿತು. ಆದರೆ ಮುಷರಫ್ ಪ್ರಸ್ತಾವಕ್ಕೆ ಪಾಕಿಸ್ತಾನದಲ್ಲೇ ಬೆಂಬಲ ಸಿಗಲಿಲ್ಲ ಎಂಬ ಸಂಗತಿಯನ್ನು ವಿಕಿಲೀಕ್ಸ್ ಹೊರಹಾಕಿವೆ.

ಪ್ರಧಾನಿಯಾಗಿ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫರನ್ನು ಮೋದಿ ಆಹ್ವಾನಿಸಿದ್ದರು. 2015ರ ಅಂತ್ಯದಲ್ಲಿ ಮೋದಿ ಲಾಹೋರ್‌ಗೆ ಅನಿರೀಕ್ಷಿತ ಭೇಟಿ ನೀಡಿ ಷರೀಫರನ್ನು ಆಲಿಂಗಿಸಿದರು. ಆದರೆ ವಾರದೊಪ್ಪತ್ತಿನಲ್ಲೇ ಪಠಾಣಕೋಟ್ ವಾಯುನೆಲೆಯ ಮೇಲೆ ಪಾಕ್ ಭಯೋತ್ಪಾದಕರ ದಾಳಿ ನಡೆಯಿತು. 2016ರಲ್ಲಿ ಯುವ ಭಯೋತ್ಪಾದಕ ಬುರ್ಹಾನ್ ವಾಣಿಯನ್ನು ಭದ್ರತಾ ಪಡೆಗಳು ಕೊಂದವು. ಎರಡೇ ತಿಂಗಳಲ್ಲಿ ಗಡಿಯ ಸನಿಹದ ಉಡಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ 17 ಭಾರತೀಯ ಯೋಧರು ಬಲಿಯಾದರು. 

ಇದನ್ನೂ ಓದಿ... ಕಾಶ್ಮೀರ ಕಣಿವೆ; ಚೆಲ್ಲು ಚೆದುರಾದ ಚಿತ್ತಾರ

ಇದೀಗ ಲೋಕಸಭಾ ಚುನಾವಣೆಗಳ ಹೊಸ್ತಿಲಲ್ಲಿ ಘಟಿಸಿರುವ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪುನಃ 42 ಭಾರತೀಯ ಯೋಧರು ಪ್ರಾಣ ತೆತ್ತಿದ್ದಾರೆ. ಒಂದೆಡೆ ಧರಿಸಿದ ಬಲಿಷ್ಠ ಹಿಂದುತ್ವ ರಾಷ್ಟ್ರವಾದಿ ಕಿರೀಟ ಮತ್ತೊಂದೆಡೆ ಸಾಲುಗಟ್ಟಿದ ಭಯೋತ್ಪಾದಕ ದಾಳಿಗಳ ಕಹಿ ಅನುಭವ ಮೋದಿಯವರನ್ನು ದಂಡಪ್ರಯೋಗದತ್ತಲೇ ನೂಕಿದ್ದು ಕಟುವಾಸ್ತವ. ಅವರ ಅವಧಿಯಲ್ಲಿ ಜಿಹಾದಿಗಳು ಹೆಚ್ಚು ಸಕ್ರಿಯರಾದರು. ಹೆಚ್ಚು ಸಂಖ್ಯೆಯಲ್ಲಿ ಹತರಾದದ್ದೂ ಹೌದು. ಕಣಿವೆಯ ಜನರ ಸಾವು ನೋವುಗಳು ಶಿಖರ ಮುಟ್ಟಿದವು. ಕಾಶ್ಮೀರ ಕಣಿವೆ ಭಾರತದಿಂದ ಇನ್ನಷ್ಟು ‘ದೂರ’ ಸರಿಯಿತು. ‘ಅಲ್ಲಾಹು’ (ಧಾರ್ಮಿಕ ಕಟ್ಟರ್‌ವಾದಿಗಳ ಜಿಹಾದಿ ಸಂಘಟನೆಗಳು) ಮತ್ತು ‘ಆರ್ಮಿ’ಯ (ಸರ್ವಶಕ್ತ ಪಾಕಿಸ್ತಾನಿ ಸೇನೆ) ಮುಷ್ಠಿಯಲ್ಲಿರುವ ಪಾಕಿಸ್ತಾನದಲ್ಲಿ ಜನರು ಆರಿಸಿದ ಸರ್ಕಾರ ನಿಜವಾಗಿಯೂ ಅಸಹಾಯಕ. ಬಹುತೇಕ ಜಿಹಾದಿಗಳು ಸೇನೆ ಮತ್ತು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಹೀಗೆ ಉಗ್ರರ ಸಮಸ್ಯೆಗೆ ಹಲವು ಮುಖಗಳಿವೆ. ಅಮೆರಿಕಾ- ಚೀನಾ- ರಷ್ಯಾ ಹಿತಾಸಕ್ತಿಯ ಅಂತರರಾಷ್ಟ್ರೀಯ ಆಯಾಮಗಳಿವೆ. ಸದೆಬಡಿಯುವುದು ಸರಳವಲ್ಲ. ಹಾವನ್ನು ಬಿಟ್ಟು ಹುತ್ತವನ್ನು ಬಡಿದರೆ ಫಲ ದೊರೆಯುವುದಿಲ್ಲ.

ಹೀಗೆ ಮೊಳೆಯಿತು ಪ್ರತ್ಯೇಕತಾವಾದ
ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿದ ಹೊತ್ತು, ಭಾರತ- ಪಾಕಿಸ್ತಾನ್ ವಿಭಜನೆಯ ಹೊತ್ತು ಕೂಡ ಆಗಿತ್ತು. ನೂರಾರು ಅರಸೊತ್ತಿಗೆಗಳು ಸಂಸ್ಥಾನಗಳಿಗೆ ಭಾರತ ಇಲ್ಲವೇ ಪಾಕಿಸ್ತಾನದೊಂದಿಗೆ ವಿಲೀನವಾಗುವ ಆಯ್ಕೆ ನೀಡಲಾಗಿತ್ತು. ಮುಸ್ಲಿಮರೇ ಬಹುಸಂಖ್ಯಾತರಾದ ಕಾಶ್ಮೀರದ ಹಿಂದೂ ಮಹಾರಾಜ ತನ್ನ ನಿರ್ಧಾರವನ್ನು ಮುಂದೂಡಿದ. ಸ್ವತಂತ್ರವಾಗಿ ಉಳಿಯುವ ಆಲೋಚನೆಯೂ ಆತನಿಗಿತ್ತು. ಮುಸ್ಲಿಂ ಪ್ರಜೆಗಳು ದಂಗೆಯೆದ್ದರು. ಈ ದಂಗೆಯನ್ನು ಬೆಂಬಲಿಸಿ ಪಾಕಿಸ್ತಾನ್ ಪ್ರಚೋದಿತ ಪಶ್ತೂನ್ ಗುಡ್ಡಗಾಡು ಜನರು ಕಾಶ್ಮೀರದ ಮೇಲೆ ದಂಡೆತ್ತಿ ಬಂದರು. ಮಹಾರಾಜ ರಕ್ಷಣೆಗಾಗಿ ಭಾರತದ ಮಿಲಿಟರಿ ನೆರವು ಬಯಸಿದ. ಭಾರತದೊಡನೆ ವಿಲೀನ ಹೊಂದದೆ ಹೋದರೆ ಸೇನೆಯ ನೆರವು ನೀಡಲಾಗದು ಎಂಬುದು ಭಾರತದ ನಿಲುವಾಗಿತ್ತು. ಭವಿಷ್ಯತ್ತಿನಲ್ಲಿ ತಮ್ಮ ರಾಜಕೀಯ ಸ್ಥಿತಿಗತಿಗಳನ್ನು ತಾವೇ ತೀರ್ಮಾನಿಸಿಕೊಳ್ಳುವ ಅಧಿಕಾರವನ್ನು ಕಾಶ್ಮೀರಿಗಳಿಗೆ ನೀಡಬೇಕೆಂಬ ಷರತ್ತಿನ ಮೇರೆಗೆ ಕಾಶ್ಮೀರದ ವಿಲೀನ ಒಪ್ಪಂದಕ್ಕೆ ಮಹಾರಾಜ ಸಹಿ ಹಾಕಿದ. ಭಾರತದ ಸೇನೆ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿತು. ಒಪ್ಪಂದದ ಪ್ರಕಾರ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ಪ್ರದೇಶದಲ್ಲಿ ಒಟ್ಟಾರೆ ಶಾಂತಿ ಸ್ಥಾಪನೆ ಆದ ನಂತರ ಕಾಶ್ಮೀರಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳಲು ಜನಮತಗಣನೆ ನಡೆಸುವ ಆಶ್ವಾಸನೆಯೂ ಭಾರತ ದಿಂದ ಮಹಾರಾಜನಿಗೆ ದೊರೆತಿತ್ತು. ಪ್ರದೇಶದಲ್ಲಿ ಶಾಂತಿ ನೆಲೆಸಲಿಲ್ಲ. ಜನಮತಗಣನೆ ಸತತ ಮುಂದಕ್ಕೆ ಹೋಯಿತು. 1987ರಲ್ಲಿ ಹಲವಾರು ಇಸ್ಲಾಮಿಕ್ ರಾಜಕೀಯ ಪಕ್ಷಗಳ ಒಕ್ಕೂಟವೊಂದರ ಸರ್ಕಾರ ರಚನೆಯ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ತಡೆಯಿತು. ಅಂದು ಹುಟ್ಟಿದ ಸಾಮೂಹಿಕ ಪ್ರತಿರೋಧ ದಿನದಿಂದ ದಿನಕ್ಕೆ ಬಲಿಯುತ್ತ ಪ್ರತ್ಯೇಕವಾದವನ್ನು ಬೆಳೆಸುತ್ತ ಹೋಯಿತು. ಪಾಕಿಸ್ತಾನಿ ಹಿತಾಸಕ್ತಿಗಳು ಕಾಶ್ಮೀರಕ್ಕೆ ಇಸ್ಲಾಮಿಕ್ ಜಿಹಾದಿಗಳನ್ನು ರಫ್ತು ಮಾಡಿ ಬೆಂಕಿ ಆರದಂತೆ ನೋಡಿಕೊಂಡವು.

ಪ್ರತ್ಯೇಕತಾವಾದಿಗಳ ಪ್ರಕಾರ ಜಮ್ಮು-ಕಾಶ್ಮೀರದ ಜನರ ಸ್ವಯಂ ನಿರ್ಧಾರದ ಹಕ್ಕು ಪ್ರಶ್ನಾತೀತ. ಆ ಕುರಿತು ಯಾವುದೇ ಚೌಕಾಶಿ ಸಾಧ್ಯವಿಲ್ಲ. ಕಾಶ್ಮೀರ ಕುರಿತು ವಿಶ್ವಸಂಸ್ಥೆಯ ಗೊತ್ತುವಳಿಗಳು ಸದಾ ಪ್ರಸ್ತುತ. ಅವುಗಳಿಗೆ ತೀರುವಳಿ ತೇದಿ ಎಂಬುದು ಇಲ್ಲವೇ ಇಲ್ಲ. ಜಮ್ಮು-ಕಾಶ್ಮೀರದಲ್ಲಿ ಅನುಗಾಲದ ಶಾಂತಿ ನೆಲೆಸಬೇಕಿದ್ದರೆ ಅವುಗಳನ್ನು ಜಾರಿಗೊಳಿಸುವುದು ಅತ್ಯಗತ್ಯ. ಈ ನಿರ್ಣಯಗಳನ್ನು ಭಾರತ ಜಾರಿಗೊಳಿಸಬೇಕು ಇಲ್ಲವೇ ಭಾರತ-ಪಾಕಿಸ್ತಾನ ಹಾಗೂ ಕಾಶ್ಮೀರಿ ನಾಯಕತ್ವವನ್ನು ಒಳಗೊಂಡ ತ್ರಿಪಕ್ಷೀಯ ಮಾತುಕತೆ ಸಭೆಗಳನ್ನು ಜರುಗಿಸಬೇಕು ಎಂಬುದು ಪ್ರತ್ಯೇಕತಾವಾದಿಗಳ ಹಠ.

ಇಡೀ ದಕ್ಷಿಣ ಏಷ್ಯಾದ ಉದ್ದಗಲಕ್ಕೆ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವುದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕಟ್ಟರ್ ಇಸ್ಲಾಮಿಕ್ ಜಿಹಾದಿ ಸಂಘಟನೆಗಳ ಅಂತಿಮ ಗುರಿ. ಈ ಗುರಿ ಈಡೇರಿಕೆಯ ಆರಂಭಿಕ ಬಿಂದು ಕಾಶ್ಮೀರದ ವಿಮೋಚನೆ.

ಇದನ್ನೂ ಓದಿ... ಕಣಿವೆಗೆ ಸೇನೆ ರವಾನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು