ರಫೇಲ್‌: ಬಿಜೆಪಿ–ಕಾಂಗ್ರೆಸ್‌ ಸಮರಕ್ಕಿಲ್ಲ ವಿರಾಮ

7

ರಫೇಲ್‌: ಬಿಜೆಪಿ–ಕಾಂಗ್ರೆಸ್‌ ಸಮರಕ್ಕಿಲ್ಲ ವಿರಾಮ

Published:
Updated:

ರಫೇಲ್‌ ಯುದ್ಧ ವಿಮಾನ ಖರೀದಿ  ಒಪ್ಪಂದದ ವಿಚಾರದಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ವಾಕ್ಸಮರ ಮುಂದುವರಿದಿದೆ. ರಫೇಲ್‌ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರೆ, ಯುಪಿಎ ಅವಧಿಯಲ್ಲಿ ದಲ್ಲಾಳಿಗಳೇ ದರ್ಬಾರ್‌ ನಡೆಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದ್ದಾರೆ.

ಕಾಂಗ್ರೆಸ್‌ ಹೇಳಿದ್ದು...

ಪ್ರಧಾನಿಗೆ ನಾನು ಕೇಳಿದ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಕೇಳಿ: ರಾಹುಲ್‌

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಟ್ವಿಟ್ಟರ್‌ ಮೂಲಕ ವಾಗ್ದಾಳಿ ಮುಂದುವರಿಸಿದ್ದಾರೆ.

‘ರಫೇಲ್‌ ಹಗರಣ ಕುರಿತು ಸಂಸತ್‌ನಲ್ಲಿ ನಾನು ಕೇಳಿದ ಪ್ರಶ್ನೆಗಳನ್ನು ಪ್ರತಿಯೊಬ್ಬ ಭಾರತೀಯನೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವರನ್ನು ಕೇಳಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ.

‘ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಎರಡು ತಾಸು ಸಂಸತ್‌ನಲ್ಲಿ ಮಾತನಾಡಿದರು. ಆದರೆ, ನಾನು ಕೇಳಿದ ಎರಡು ಸರಳ ಪ್ರಶ್ನೆಗಳಿಗೆ ಉತ್ತರಿಸಲು ಅವರಿಂದ ಸಾಧ್ಯವಾಗಲಿಲ್ಲ’ ಎಂದು ಅವರು ಲೇವಡಿ ಮಾಡಿದ್ದಾರೆ.

ಸಂಸತ್‌ನಲ್ಲಿ ರಕ್ಷಣಾ ಸಚಿವರಿಗೆ ತಾವು ಕೇಳಿದ ಎರಡು ಪ್ರಶ್ನೆಗಳ ವಿಡಿಯೊವನ್ನು ಅವರು ಟ್ವೀಟ್‌ ಮಾಡಿದ್ದಾರೆ.

ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಗೆ ಗುತ್ತಿಗೆ ನೀಡಿದವರು ಯಾರು ಮತ್ತು ರಕ್ಷಣಾ ಸಚಿವಾಲಯದ ಗಮನಕ್ಕೂ ತಾರದೆ ಪ್ರಧಾನಿ ಮಾಡಿಕೊಂಡ ಒಪ್ಪಂದದ ಬಗ್ಗೆ ಸಚಿವಾಲಯದ ಯಾರಾದರೂ ಆಕ್ಷೇಪ ಎತ್ತಿದ್ದೀರಾ ಎಂಬ ಪ್ರಶ್ನೆಗಳನ್ನು ರಾಹುಲ್‌ ಕೇಳಿದ್ದರು.

‘ಈ ವಿಡಿಯೊ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳಿ. ಈ ಪ್ರಶ್ನೆಗಳನ್ನು ಪ್ರಧಾನಿ ಮತ್ತು ಅವರ ಸಚಿವರ ಮುಂದಿಡಿ’ ಎಂದು #2 ಸವಾಲ್‌ದೋಜವಾಬ್‌ ಹ್ಯಾಶ್‌ಟ್ಯಾಗ್‌ ಅಡಿ ಅವರು ಟ್ವೀಟ್‌ ಮಾಡಿದ್ದಾರೆ.

ಮೋದಿ ಅವರು ತಮ್ಮ ಮಿತ್ರ ಅನಿಲ್‌ ಅಂಬಾನಿಗೆ ದೇಶದ ಸಂಪತ್ತು ಲೂಟಿ ಹೊಡೆಯಲು ನೆರವು ನೀಡುವ ಬದಲು ಒಂದಿಷ್ಟು ದೇಶಕ್ಕಾಗಿ ದುಡಿದಿದ್ದರೆ ಯುವಕರ ಭವಿಷ್ಯವಾದರೂ ಸುರಕ್ಷಿತವಾಗಿರುತ್ತಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಚ್‌ಎಎಲ್ ಖಜಾನೆ ಖಾಲಿ: ಕಾಂಗ್ರೆಸ್‌

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನಗೆ ಬೇಕಾದ ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿ ಕೊಡಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬಲಿ ಕೊಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೇರಿದ ಬೆಲೆಬಾಳುವ ಆಸ್ತಿಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಟ್ವೀಟ್‌ ಮಾಡಿದ್ದಾರೆ.

ಮೋದಿ ಆಡಳಿತದಲ್ಲಿ ಎಚ್‌ಎಎಲ್‌ ತನ್ನ ನೌಕಕರಿಗೆ ಸಂಬಳ ನೀಡಲು ಹಣವಿಲ್ಲದ ಸ್ಥಿತಿಗೆ ಬಂದು ತಲುಪಿದೆ ಎಂದು ಪಟೇಲ್‌ ತರಾಟೆಗೆ ತೆಗೆದುಕೊಂಡಿದ್ದಾರೆ.ಕೇವಲ ಎಚ್‌ಎಎಲ್‌ ಮಾತ್ರವಲ್ಲ. ಒಎನ್‌ಜಿಸಿ, ಎಲ್‌ಐಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಕೇಂದ್ರದ ಸ್ವಜನ ಪಕ್ಷಪಾತಕ್ಕೆ ಬೆಲೆ ತೆರಬೇಕಾಗಿದೆ ಎಂದು ಆರೋಪಿಸಿದ್ದಾರೆ. 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಎಚ್‌ಎಎಲ್‌ ತನ್ನ ನೌಕರರಿಗೆ ವೇತನ ನೀಡಲು ಹಣವಿಲ್ಲದೆ ₹1,000 ಕೋಟಿ ಸಾಲ ಪಡೆಯುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ವಿಷಾದ ವ್ಯಕ್ತಪಡಿಸಿದ್ದಾರೆ.

***

ಬಿಜೆಪಿ ಹೇಳಿದ್ದು...

ಮಧ್ಯವರ್ತಿಗಳ ದರ್ಬಾರ್‌: ಮೋದಿ

ಬರಿಪದಾ (ಒಡಿಶಾ) (ಪಿಟಿಐ): ದೇಶದಲ್ಲಿ ಇಷ್ಟು ವರ್ಷ ಕಾಂಗ್ರೆಸ್‌ ಪಕ್ಷ ಸರ್ಕಾರ ನಡೆಸಿದೆಯೋ ಅಥವಾ ‘ಮಿಷೆಲ್‌ ಮಾಮಾ’ನ (ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ಶಂಕಿತ ಮಧ್ಯವರ್ತಿ) ದರ್ಬಾರ್‌ ನಡೆಸಿದೆಯೋ ತಿಳಿಯುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಯುಪಿಎ ಅವಧಿಯಲ್ಲಿ ರಕ್ಷಣಾ ಕಡತಗಳ ಬಗ್ಗೆ ಪ್ರಧಾನಿಗಿಂತ ಹೆಚ್ಚಿನ ಮಾಹಿತಿ ಮಧ್ಯವರ್ತಿಗಳಿಗೆ ಇರುತ್ತಿತ್ತು ಎಂದು ಅವರು ಬಿಜೆಪಿ ರ‍್ಯಾಲಿಯಲ್ಲಿ ಹೇಳಿದರು.

ಜನರ ಹಿತ ಕಾಯಬೇಕಿದ್ದ ಯುಪಿಎ ಸರ್ಕಾರ ಮಧ್ಯವರ್ತಿಗಳ ಹಿತ ಕಾಯುವ ಕೆಲಸ ಮಾಡಿದೆ. ಆ ಕೆಲಸದಲ್ಲಿ ಯಾರು ಶಾಮೀಲಾಗಿದ್ದಾರೆ ಎನ್ನುವ ಸತ್ಯವನ್ನು ತನಿಖಾ ಸಂಸ್ಥೆಗಳು ಶೀಘ್ರದಲ್ಲಿ ಬಯಲು ಮಾಡಲಿವೆ ಎಂದರು.

2004–2014ರವರೆಗೆ ದೇಶದ ಭದ್ರತೆ ಮತ್ತು ರಕ್ಷಣೆಯನ್ನು ದುರ್ಬಲಗೊಳಿಸುವ ಕೆಲಸ ನಡೆದಿದೆ. ಆ ಸತ್ಯ ಈಗ ಬಹಿರಂಗವಾಗುತ್ತಲೇ ಕಾಂಗ್ರೆಸ್‌ ನಾಯಕರಿಗೆ ಚೇಳು ಕಡಿದ ಅನುಭವವಾಗುತ್ತಿದೆ ಎಂದು ಮೋದಿ ವ್ಯಂಗ್ಯವಾಡಿದರು.

ತಮ್ಮ ದಾರಿಗೆ ಅಡ್ಡವಾಗಿರುವ ಈ ಚೌಕಿದಾರನನ್ನು ತೆಗೆಯಲು ಕಾಂಗ್ರೆಸ್‌ ನಾಯಕರು ಯತ್ನಿಸುತ್ತಿದ್ದಾರೆ. ಕಾರ್ಖಾನೆಯೇ ಇರಲಿ, ಸಮಾಜವೇ ಇರಲಿ ಕಾವಲುಗಾರ ಇದ್ದರೆ ಕಳ್ಳರ ಕೆಲಸಕ್ಕೆ ಅಡ್ಡಿಯಾಗುತ್ತಾನೆ. ಹೀಗಾಗಿ ಕಾವಲುಗಾರರನ್ನು ತೆಗೆಯಲು ಕಳ್ಳರು ಷಡ್ಯಂತ್ರ ರೂಪಿಸುತ್ತಾರೆ ಎಂದರು.

ಎನ್‌ಡಿಎ ಅವಧಿಯಲ್ಲಿ ದೇಶದ ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ವಿಷಯವೇ ಉದ್ಭವಿಸಲಿಲ್ಲ. ರಕ್ಷಣಾ ವಲಯದಲ್ಲಿ ಮಧ್ಯವರ್ತಿಗಳ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದು 
ತಿಳಿಸಿದರು.

ಸಾಲಮನ್ನಾ: ರೈತರ ದಾರಿತಪ್ಪಿಸುವ ಯತ್ನ’

ಡಾಲ್ಟನ್‌ಗಂಜ್‌ (ಜಾರ್ಖಂಡ್‌) (ಪಿಟಿಐ): ಸಾಲಮನ್ನಾ ಹೆಸರಿನಲ್ಲಿ ಕಾಂಗ್ರೆಸ್‌ ಪಕ್ಷ ದೇಶದ ರೈತರ ದಾರಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಶನಿವಾರ ನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರವು ರೈತರನ್ನು ಸಾಲ ಪಡೆಯುವ ಸ್ಥಿತಿಗೆ ತಂದಿತ್ತು. ಈಗ ಅದೇ ಪಕ್ಷ ಸಾಲಮನ್ನಾ ಭರವಸೆ ನೀಡುವ ಮೂಲಕ ಮತ್ತೆ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ರೈತರನ್ನು ಕೇವಲ ಮತಬ್ಯಾಂಕ್‌ ಎಂದು ಪರಿಗಣಿಸಿದ್ದರೆ ನಾನು ಕೂಡ ಈಗಾಗಲೇ ಅವರ ಸಾಲಮನ್ನಾ ಮಾಡಿರುತ್ತಿದ್ದೆ. ಆದರೆ, ರೈತರ ಆದಾಯವನ್ನು ದ್ವಿಗುಣಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮೋದಿ ತಿರುಗೇಟು ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !