ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಸುಳ್ಳು ಮಾಹಿತಿಯೇ ಪ್ರಕರಣ ವಜಾಗೊಳ್ಳಲು ಕಾರಣ: ಅರ್ಜಿದಾರರು

ರಫೇಲ್‌ ಮಾಹಿತಿ ಮುಚ್ಚಿಟ್ಟಿಲ್ಲ: ಕೇಂದ್ರ

Published:
Updated:
Prajavani

ನವದೆಹಲಿ: ರಫೇಲ್‌ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಅರ್ಜಿದಾರರಿಂದ ಸುಪ್ರೀಂ ಕೋರ್ಟ್‌ಗೆ ವ್ಯತಿರಿಕ್ತವಾದ ಪ್ರಮಾಣಪತ್ರಗಳು ಸಲ್ಲಿಕೆಯಾಗಿವೆ.

ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ, ದೇಶಿ ಪಾಲುದಾರರ ಆಯ್ಕೆ ಮತ್ತು 36 ರಫೇಲ್‌ ವಿಮಾನಗಳ ಬೆಲೆ ನಿಗದಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ ಮತ್ತು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಅರ್ಜಿದಾರರ ವಾದ ಆಧಾರರಹಿತ ಎಂದು ಕೇಂದ್ರ ಸರ್ಕಾರವು ಪ್ರಮಾಣಪತ್ರ ನೀಡಿದೆ. 

ಮಾತುಕತೆ ಪ್ರಕ್ರಿಯೆಯ ಮೇಲೆ ಪ್ರಧಾನಿ ಕಾರ್ಯಾಲಯವು ನಿಗಾ ಇರಿಸುವುದನ್ನು ‘ಸಮಾನಾಂತರ ಮಾತುಕತೆ’ ಎಂದು ಹೇಳಲಾಗದು. ರಫೇಲ್‌ ಒಪ್ಪಂದಕ್ಕೆ ಫ್ರಾನ್ಸ್‌ ಸರ್ಕಾರದ ಖಾತರಿ ಇಲ್ಲ ಎಂಬ ಆರೋಪಕ್ಕೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ರಷ್ಯಾ ಮತ್ತು ಅಮೆರಿಕದ ಜತೆಗೆ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳಲ್ಲಿಯೂ ಸರ್ಕಾರದ ಖಾತರಿಯ ವಿಚಾರವನ್ನು ಕೈಬಿಡಲಾಗಿತ್ತು ಎಂದು ಹೇಳಿದೆ.

ಆದರೆ, ರಫೇಲ್‌ ಪ್ರಕರಣದಲ್ಲಿ ತನ್ನ ಪರವಾದ ಆದೇಶ ಪಡೆದುಕೊಳ್ಳುವುದಕ್ಕಾಗಿ ಕೇಂದ್ರವು ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದೆ ಎಂದು ಕೇಂದ್ರದ ಮಾಜಿ ಸಚಿವರಾದ ಯಶವಂತ ಸಿನ್ಹಾ, ಅರುಣ್‌ ಶೌರಿ ಮತ್ತು ವಕೀಲ ಪ್ರಶಾಂತ್‌ ಭೂಷಣ್‌ ಅವರು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ. 

ಸುಳ್ಳು ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಮುಚ್ಚಿಟ್ಟಿದ್ದೇ ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಲು ಕಾರಣ ಎಂದು ಪ್ರಮಾಣಪತ್ರದಲ್ಲಿ ವಾದಿಸಿದ್ದಾರೆ.

Post Comments (+)