ರಫೇಲ್‌ ಡೀಲ್‌ ಮೋದಿ ನಿರಾಳ

7
ಒಪ್ಪಂದದಲ್ಲಿ ಅನುಮಾನವಿಲ್ಲ: ಸುಪ್ರೀಂ

ರಫೇಲ್‌ ಡೀಲ್‌ ಮೋದಿ ನಿರಾಳ

Published:
Updated:
Deccan Herald

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಕೇಳಿ ಬಂದ ಆರೋ‍ಪಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರಾಳವಾಗಿದೆ. ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನ ಖರೀದಿಸಲು ಭಾರತ ಮಾಡಿಕೊಂಡಿ
ರುವ ಒಪ್ಪಂದವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಈ ಒಪ್ಪಂದಕ್ಕೆ ಸಂಬಂಧಿಸಿ ನಿರ್ಧಾರ ಕೈಗೊಂಡ ಪ್ರಕ್ರಿಯೆಯನ್ನು ಅನುಮಾನದಿಂದ ನೋಡುವ ಅಗತ್ಯ ಕಾಣಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ. ₹58 ಸಾವಿರ ಕೋಟಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಭಾರತೀಯ ವಾಯುಪಡೆಗೆ ಅತ್ಯಾಧುನಿಕ ಯುದ್ಧ ವಿಮಾನಗಳ ಅಗತ್ಯ ಇದೆ. ಎದುರಾಳಿ ದೇಶಗಳು ನಾಲ್ಕು ಮತ್ತು ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ಹೊಂದಿವೆ. ಇಂತಹ ಯುದ್ಧ ವಿಮಾನಗಳು ಭಾರತದಲ್ಲಿ ಇಲ್ಲ. ದೇಶವು ಯಾವುದೇ ಸಿದ್ಧತೆ ಮಾಡದೆ ಹಿಂದುಳಿಯುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಮತ್ತು ಕೆ.ಎಂ. ಜೋಸೆಫ್‌ ಅವರೂ ಇದ್ದ ನ್ಯಾಯ ಪೀಠ ಹೇಳಿತು. 

ಯುದ್ಧ ವಿಮಾನ ಖರೀದಿಯಂತಹ ಸೂಕ್ಷ್ಮ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಿಲ್ಲ ಎಂದೂ ಪೀಠ ಸ್ಪಷ್ಟವಾಗಿ ಹೇಳಿದೆ.

ವ್ಯಕ್ತಿಗಳ ಗ್ರಹಿಕೆಯನ್ನು ಆಧಾರವಾಗಿಟ್ಟುಕೊಂಡು ವಿಚಾರಣೆ ನಡೆಸುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ, 126 ಯುದ್ಧ ವಿಮಾನಗಳ ಬದಲಿಗೆ 36 ಯುದ್ಧ ವಿಮಾನಗಳನ್ನು ಖರೀದಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಗದು. ಒಪ್ಪಂದ ಪ್ರಕ್ರಿಯೆನ್ನು ಅನುಮಾನಿಸಲು ಯಾವುದೇ ಕಾರಣಗಳು ಕಾಣಿಸುತ್ತಿಲ್ಲ. ಸಣ್ಣ ಪುಟ್ಟ ಲೋಪಗಳು ಉಂಟಾಗಿದ್ದರೂ ಅದು ಒಪ್ಪಂದವನ್ನೇ ರದ್ದು ಮಾಡುವ ಮಟ್ಟದಲ್ಲಿ ಇಲ್ಲ. ನ್ಯಾಯಾಲಯವು ಈ ಬಗ್ಗೆ ವಿವರವಾದ ‍ಪರಿಶೀಲನೆ ನಡೆಸುವ ಅಗತ್ಯವೂ ಇಲ್ಲ ಎಂದು ಪೀಠ ತೀರ್ಪಿನಲ್ಲಿ ಹೇಳಿದೆ. 

ಯುದ್ಧ ವಿಮಾನ ಖರೀದಿ ಒಪ್ಪಂದವು 2016ರ ಸೆಪ್ಟೆಂಬರ್‌ 23ರಂದು ಅಂತಿಮಗೊಂಡಿತು. ಆಗ ಯಾರೂ ಪ್ರಶ್ನೆಗಳನ್ನು ಎತ್ತಿಲ್ಲ. ದೇಶೀ ಪಾಲುದಾರ ಸಂಸ್ಥೆಯ ಆಯ್ಕೆಯ ಬಗ್ಗೆ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಅವರು ಹೇಳಿಕೆ ನೀಡಿದ ಬಳಿಕವಷ್ಟೇ ದೂರುಗಳು ಸಲ್ಲಿಕೆಯಾಗಿವೆ ಎಂಬುದನ್ನೂ ಪೀಠವು ಉಲ್ಲೇಖಿಸಿತು. 

ಕೇಂದ್ರದ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ಹಾಗೂ ಸಾಮಾಜಿಕ ಹೋರಾಟಗಾರ, ವಕೀಲ ಪ್ರಶಾಂತ್‌ ಭೂಷಣ್‌ ಅವರು ರಫೇಲ್‌ ಒಪ್ಪಂದದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರಿಗಿಂತಲೂ ಮೊದಲು, ವಕೀಲರಾದ ಎಂ.ಎಲ್‌. ಶರ್ಮಾ, ವಿನೀತ್‌ ದಂಡಾ ಮತ್ತು ಎಎಪಿ ಮುಖಂಡ ಸಂಜಯ್‌ ಸಿಂಗ್‌ ಅವರು ದೂರು ನೀಡಿದ್ದರು. 

ಬೆಲೆ ಹೋಲಿಕೆ ಕೋರ್ಟ್‌ ಕೆಲಸವಲ್ಲ

ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ರಫೇಲ್‌ ಖರೀದಿ ಒಪ್ಪಂದದ ಮಾತುಕತೆ ಆರಂಭವಾಗಿತ್ತು. ಆಗ ನಿಗದಿ ಮಾಡಿದ್ದ ಬೆಲೆಗಿಂತ ಬಹಳ ಹೆಚ್ಚಿನ ಬೆಲೆಗೆ ಎನ್‌ಡಿಎ ಸರ್ಕಾರ ಖರೀದಿ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು. ‘ಯುದ್ಧ ವಿಮಾನದ ಬೆಲೆ ವಿವರಗಳನ್ನು ಹೋಲಿಸಿ ನೋಡುವುದು ನ್ಯಾಯಾಲಯದ ಕೆಲಸ ಅಲ್ಲ. ಇಂತಹ ವಿಚಾರಗಳನ್ನು ಗೋಪ್ಯವಾಗಿಯೇ ಇರಿಸಿಕೊಳ್ಳಬೇಕಾಗುತ್ತದೆ’ ಎಂದು ಈ ಆರೋಪಕ್ಕೆ ಸಂಬಂಧಿಸಿ ಪೀಠ ಹೇಳಿದೆ. 

ಪಕ್ಷಪಾತ ಆಗಿಲ್ಲ

ದೇಶೀ ಪಾಲುದಾರ ಸಂಸ್ಥೆಯಾಗಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಬದಲಿಗೆ ರಿಲಯನ್ಸ್‌ ಡಿಫೆನ್ಸ್‌ ಎಂಬ ಖಾಸಗಿ ಸಂಸ್ಥೆಯನ್ನು ಆಯ್ಕೆ ಮಾಡಿರುವುದರಲ್ಲಿ ಯಾವುದೇ ಪಕ್ಷಪಾತ ಕಾಣಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ದೇಶೀ ಪಾಲುದಾರ ಸಂಸ್ಥೆಯನ್ನು ಆಯ್ಕೆ ಮಾಡುವ ಅಧಿಕಾರ ಭಾರತ ಸರ್ಕಾರಕ್ಕೆ ಇಲ್ಲ ಎಂದು ಪೀಠ ಹೇಳಿದೆ. ಅಲ್ಲದೆ, ತಾಂತ್ರಿಕವಾಗಿ ಯಾವುದು ಹೆಚ್ಚು ಕಾರ್ಯಸಾಧು ಎಂಬುದನ್ನು ನಿರ್ಧರಿಸಲು ನ್ಯಾಯಾಲಯ ಮುಂದಾಗುವುದಿಲ್ಲ. ಅದಕ್ಕೆ ಬೇಕಾದ ಪರಿಣತಿ ಅಥವಾ ಅನುಭವ ನ್ಯಾಯಾಲಯಕ್ಕೆ ಇಲ್ಲ ಎಂದೂ ಪೀಠ ಹೇಳಿದೆ. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !