ಬುಧವಾರ, ಮಾರ್ಚ್ 3, 2021
19 °C
ರಾಜ್ಯಗಳ ರಾಜಕೀಯದ ಮೇಲೂ ಕಾಂಗ್ರೆಸ್‌ ನಿರ್ವಾತದ ಪರಿಣಾಮ

ಕೇಂದ್ರದಲ್ಲೇ ನಡುಗುತ್ತಿರುವ ‘ಕೈ’ಗೆ ಬಲ ತುಂಬಲಿದೆಯೇ ರಾಹುಲ್ ತಂತ್ರಗಾರಿಕೆ?

ಗಣಪತಿ ಶರ್ಮಾ Updated:

ಅಕ್ಷರ ಗಾತ್ರ : | |

ರಾಜ್ಯ ರಾಜಕಾರಣದಲ್ಲಿ, ಅದರಲ್ಲಿಯೂ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೆ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಬಂದೆರಗಿರುವ ಸಂಚಕಾರಕ್ಕೆ ಕಾಂಗ್ರೆಸ್‌ನ ಉನ್ನತ ಮಟ್ಟದ ನಾಯಕತ್ವವೂ ಕಾರಣವೇ? ಕೇಂದ್ರ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಸದ್ಯ ಉಂಟಾಗಿರುವ ನಿರ್ವಾತ ಈ ಪ್ರಶ್ನೆ ಹುಟ್ಟುಹಾಕಿದೆ.

ಯಾಕೆಂದರೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಹೊಸ ಸರ್ಕಾರ ರಚಿಸಲು ಬಿಜೆಪಿ ಕೈಹಾಕಿದ್ದು ಇದೇ ಮೊದಲಲ್ಲ. ಈ ಹಿಂದೆ ಸುಮಾರು ನಾಲ್ಕೈದು ಬಾರಿ ಯತ್ನಿಸಿದರೂ ಅದರಲ್ಲಿ ಯಶಸ್ವಿಯಾಗಲು ಕಮಲ ಪಡೆಗೆ ಸಾಧ್ಯವಾಗಲಿಲ್ಲ. ಹಾಗಿದ್ದರೆ ಈಗ್ಯಾಕೆ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ?

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ | ಉಳಿಯುತ್ತಾ, ಉರುಳುತ್ತಾ ರಾಜ್ಯದ ಮೈತ್ರಿ ಸರ್ಕಾರ​

ದೇಶದಾದ್ಯಂತ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಸದ್ಯ ಉಳಿದಿರುವ ಪ್ರಮುಖ ಆಸರೆ ಕರ್ನಾಟಕ. ಹೀಗಾಗಿ ಮಿತ್ರ ಪಕ್ಷ ಜೆಡಿಎಸ್‌ ತಾಳಕ್ಕೆ ತಕ್ಕಂತೆ ಕುಣಿಯುತ್ತಲಾದರೂ ಸರ್ಕಾರ ಉಳಿಯಬೇಕು ಎಂಬುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಇಚ್ಛೆಯಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಮಟ್ಟದ ಕೆಲ ಪ್ರಮುಖ ನಾಯಕರಿಗೆ ಮೈತ್ರಿ ಇಷ್ಟವಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಮೈತ್ರಿ ವಿರುದ್ಧದ ಅಪಸ್ವರ ರಾಜ್ಯ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ರಾಜೀನಾಮೆ ವಾಪಸ್ ಪಡೆಯುವಂತೆ ಅವರ ಮನವೊಲಿಸುವುದರಲ್ಲೇ ತಿಂಗಳು ಕಳೆದುಹೋಯಿತು. ಇದರ ಬದಲು ಪರ್ಯಾಯ ಆಯ್ಕೆಯ ಬಗ್ಗೆ ‘ಕೈ’ ನಾಯಕರು ಯೋಚಿಸಲೇ ಇಲ್ಲ. ಯಾವಾಗ ಕೇಂದ್ರದಲ್ಲೇ ಪಕ್ಷದ ಹಿಡಿತ ಸಡಿಲಗೊಳ್ಳತೊಡಗಿತೋ ರಾಜ್ಯದಲ್ಲೂ ಬಣಗಳ ನಡುವಣ ಅಸಮಾಧಾನ ಸ್ಫೋಟವಾಯಿತು. ಸರ್ಕಾರದ ವಿರುದ್ಧವೂ ಅತೃಪ್ತರ ಆಕ್ರೋಶ ಹೆಚ್ಚಾಯಿತು. ಅತ್ತ ಕೇಂದ್ರದಲ್ಲಿ ಬಲಿಷ್ಟ ನಾಯಕತ್ವ ಹೊಂದಿರುವ ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಯಿತು.

ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಾಹುಲ್‌ ಗಾಂಧಿ

ಇದು ಕೇವಲ ಕರ್ನಾಟಕದ ಪರಿಸ್ಥಿತಿಯಲ್ಲ. ಅತ್ತ ಮಧ್ಯ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಬೆಂಬಲದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರವೂ ಪತನದ ಭೀತಿ ಎದುರಿಸುತ್ತಿದೆ. ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಇದೆ. ಆದರೆ, ಪಕ್ಷದೊಳಗಿನ ಅತೃಪ್ತರನ್ನು ಸಮಾಧಾನಪಡಿಸಲು, ಬಿಕ್ಕಟ್ಟನ್ನು ಎದುರಿಸಲು ನಾಯಕತ್ವಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ನ ಶಕ್ತಿ ಕೇಂದ್ರದಲ್ಲಿ ಉಂಟಾಗಿರುವ ನಿರ್ವಾತವೂ ಇದಕ್ಕೆ ಕಾರಣ ಎಂಬುದನ್ನು ಅಲ್ಲಗಳೆಯಲಾಗದು.

‘ರಾಹುಲ್ ಗಾಂಧಿಯವರ ನಿರ್ಧಾರವನ್ನು ಗೌರವಿಸುವ ಬದಲು ಅವರ ಮನವೊಲಿಸುವುದರಲ್ಲೇ ಪಕ್ಷದ ನಾಯಕರು ವೃಥಾ ಕಾಲಹರಣ ಮಾಡಿದ್ದಾರೆ. ಇನ್ನಾದರೂ ತಕ್ಷಣವೇ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಯುವ ನಾಯಕರಿಗೆ ಮನ್ನಣೆ ನೀಡಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕರಣ್ ಸಿಂಗ್ ಸಲಹೆ ನೀಡಿರುವುದೂ ಗಮನಾರ್ಹ.

ಇದನ್ನೂ ಓದಿ: ರಾಹುಲ್‌ ಮನವೊಲಿಕೆಗೆ ಒಂದು ತಿಂಗಳು ವ್ಯರ್ಥಗೊಳಿಸಿದ ಕಾಂಗ್ರೆಸ್: ಕರಣ್ ಸಿಂಗ್

‘ಹೆಚ್ಚಿನ ಸಂಖ್ಯೆಯ ನಾಯಕರು ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದನ್ನು ರಾಹುಲ್ ಗಾಂಧಿ ಬಯಸುತ್ತಿದ್ದಾರೆ. ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜವಾಬ್ದಾರಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯೊಬ್ಬರೇ ಎಲ್ಲವನ್ನೂ ನಿರ್ವಹಿಸಬೇಕಿದೆ. ಕರ್ತವ್ಯಗಳನ್ನು ಹಂಚಿಕೆ ಮಾಡಲು ಅವರು ಬಯಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಎಲ್‌.ಪೂನಿಯಾ ಈಚೆಗೆ ಹೇಳಿದ್ದರು.

ಮುಂದೇನು?

ಸದ್ಯ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಕಾಂಗ್ರೆಸ್ ಮುಂದಿರುವ ಸವಾಲು. ಕನಿಷ್ಠಪಕ್ಷ ಹಂಗಾಮಿ ಅಧ್ಯಕ್ಷರನ್ನಾದರೂ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ‘ಗಾಂಧಿ’ ಕುಟುಂಬಕ್ಕಿಂತ ಹೊರತಾದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅದನ್ನು ದಕ್ಕಿಸಿಕೊಳ್ಳಬಲ್ಲ ಸಾಮರ್ಥ್ಯ ಕಾಂಗ್ರೆಸ್‌ಗಿದೆಯೇ? ತಮ್ಮ ಕುಟುಂಬಕ್ಕೆ ಹೊರತಾದ ವ್ಯಕ್ತಿಯೇ ಪಕ್ಷದ ಪ್ರಮುಖ ಹುದ್ದೆಗಳಲ್ಲಿರಬೇಕು ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರಾದರೂ ಅದು ಸಾಧ್ಯವೇ? ಈ ಹಿಂದಿನ ದೃಷ್ಟಾಂತಗಳನ್ನು ಗಮನಿಸಿದರೆ ‘ಗಾಂಧಿ’ ಕುಟುಂದಬರನ್ನು ಹೊರತುಪಡಿಸಿ ಕಾಂಗ್ರೆಸ್ ಅಧ್ಯಕ್ಷರಾದವರ್‍ಯಾರೂ ಬಹು ಕಾಲ ಹುದ್ದೆಯಲ್ಲಿ ಉಳಿದಿಲ್ಲ. ಪಕ್ಷ, ಕುಟುಂಬಕ್ಕೆ ನಿಷ್ಠರಾದರೂ ಅಷ್ಟೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ನೊಗ ಯಾರ ಹೆಗಲಿಗೆ?​

1967ರಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸೋಲಾದಾಗ ತಮ್ಮ ವಿರುದ್ಧ ಉಂಟಾದ ಆಕ್ರೋಶವನ್ನು ಮಣಿಸುವಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಯಶಸ್ವಿಯಾಗಿದ್ದರು. 1970ರಿಂದ 1977ರವರೆಗೂ ತಮಗೆ ನಿಷ್ಠರಾದವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ ಅವರು 1978ರಲ್ಲಿ ಅಧಿಕೃತವಾಗಿ ಪಕ್ಷದ ಸಾರಥ್ಯ ವಹಿಸಿದರು. ಅದಾದ ಬಳಿಕ 1991ರವರೆಗೂ ಪಕ್ಷದ ಅಧಿಕಾರ ಗಾಂಧಿ ಕುಟುಂಬದ ಕೈಯಲ್ಲೇ ಉಳಿಯಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾದ ಬಳಿಕ ಸೋನಿಯಾ ಗಾಂಧಿಯವರು ಸಕ್ರಿಯ ರಾಜಕಾರಣಕ್ಕೆ ಬರಲು ಹಿಂದೇಟು ಹಾಕಿದರು. ಪರಿಣಾಮವಾಗಿ 1991ರಿಂದ 1998ರವರೆಗೆ ಗಾಂಧಿ ಕುಟುಂಬಕ್ಕೆ ಹೊರತಾದವರು ಪಕ್ಷದ ಅಧ್ಯಕ್ಷರಾದರು.

1991ರಲ್ಲಿ ಪಿ.ವಿ.ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಗಾಂಧಿ ಕುಟುಂಬದ ಸದಸ್ಯರಿಗೆ ನಿಷ್ಠರಾಗಿ ಕಾರ್ಯನಿರ್ವಹಿಸಬಹುದು ಎಂಬ ಯೋಜನೆಯೊಂದಿಗೇ ಅವರನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಆದರೆ, ರಾವ್ ಅವರು ಪಕ್ಷದ ಮೇಲೆ ಸ್ವತಂತ್ರವಾಗಿ ಹಿಡಿತ ಸಾಧಿಸಲಾರಂಭಿಸಿದರು. ಇದು ಭಿನ್ನಮತಕ್ಕೆ ಕಾರಣವಾಯಿತು. ಮಾಧವ ರಾವ್ ಸಿಂಧಿಯಾ, ಅರ್ಜುನ್ ಸಿಂಗ್, ನಾರಾಯಣ್ ದತ್ತಾ ತಿವಾರಿಯಂತಹ ಪ್ರಮುಖ ನಾಯಕರು ಪಕ್ಷ ಬಿಡುವಂತಾಯಿತು. 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದ ಬಳಿಕ ಸೀತಾರಾಮ್ ಕೇಸರಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 1969ರ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಚುನಾವಣೆ ನಡೆಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ರಾವ್ ಮತ್ತು ಕೇಸರಿ ಅವರನ್ನು ಮಾತ್ರ. 1998ರಲ್ಲಿ ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕೀಯ ಪ್ರವೇಶಿಸಲು ಮುಂದಾದಾಗ ಕೇಸರಿ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಯಿತು.

ಅದಾದ ಬಳಿಕ 2017ರವರೆಗೂ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿದರು. ಅವರ ನಂತರ ರಾಹುಲ್ ಗಾಂಧಿ ಅಧ್ಯಕ್ಷರಾದರು. ಇದೀಗ ರಾಹುಲ್ ರಾಜೀನಾಮೆ ಪಕ್ಷವನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸಿದೆ. ಗಾಂಧಿ ಕುಟುಂಬಕ್ಕೆ ನಿಷ್ಠರಾದವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದೂ ಕಾರ್ಯಕಾರಿ ಸಮಿತಿಗೆ ಸವಾಲಾಗಿ ಪರಿಣಮಿಸಿದೆ. 1991ರ ಆಯ್ಕೆಯನ್ನು ಮನದಲ್ಲಿಟ್ಟುಕೊಂಡು ಕಾರ್ಯಕಾರಿ ಸಮಿತಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಆದರೆ ಒಂದಂತೂ ನಿಜ, ಸಾರ್ವತ್ರಿಕ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಗಾಂಧಿ ಕುಟುಂಬದ ವ್ಯಕ್ತಿಯೊಬ್ಬರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ಇದೇ ಮೊದಲಾಗಿದೆ.

ಗಾಂಧಿ ಕುಟುಂಬದ ಅಸ್ತಿತ್ವ ಏನಾಗಲಿದೆ?

1996ರಲ್ಲಿ ನರಸಿಂಹ ರಾವ್ ಮತ್ತು 1998ರಲ್ಲಿ ಕೇಸರಿ ಅವರನ್ನು ಚುನಾವಣೆ ಸೋಲಿಗೆ ಹೊಣೆಗಾರರನ್ನಾಗಿಸಿದ್ದೇನೋ ನಿಜ. ಆದರೆ, 1984ರಲ್ಲಿ ಲೋಕಸಭೆಯಲ್ಲಿ 414 ಸ್ಥಾನ ಗಳಿಸಿದ್ದ ಪಕ್ಷವು ಐದು ವರ್ಷಗಳ ತರುವಾಯ 197 ಸ್ಥಾನಗಳಿಗೆ ಕುಸಿದಿದ್ದರ ಹೊಣೆಯನ್ನು ರಾಜೀವ್ ಗಾಂಧಿ ಹೊತ್ತಿರಲಿಲ್ಲ! 1998ರ ಲೋಕಸಭೆ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತಲೂ ಕಡಿಮೆ ಸ್ಥಾನವನ್ನು 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗಳಿಸಿತ್ತು. ಆದರೆ ಇದಕ್ಕೆ ಸೋನಿಯಾ ಗಾಂಧಿಯವರ ರಾಜೀನಾಮೆಯನ್ನು ಯಾರೂ ಕೇಳಿರಲಿಲ್ಲ. 2014 ಮತ್ತು 2009ರಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಜಯಗಳಿಸಿತು. 2014ರಲ್ಲಿ ಇತಿಹಾಸದಲ್ಲೇ ಹೀನಾಯ ಸೋಲು ಕಂಡರೂ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಸೋನಿಯಾ ಕೆಳಗಿಳಿಯಲಿಲ್ಲ. ಹಿಂದೆ ಇಂದಿರಾ ಗಾಂಧಿಯವರು ತಮ್ಮ ನಿಷ್ಠರ ಕೈಗೇ ಪಕ್ಷದ ಚುಕ್ಕಾಣಿ ನೀಡಿದ್ದರೆ ಸೋನಿಯಾ ಗಾಂಧಿ ಅವರು ಮಗನಿಗೇ ಅಧಿಕಾರ ಬಿಟ್ಟುಕೊಟ್ಟಿದ್ದರು. ಆದರೆ ಇದೀಗ ತಮ್ಮ ಕುಟುಂಕ್ಕೆ ಹೊರತಾದವರೇ ಪಕ್ಷದ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ರಾಹುಲ್ ತಾಕೀತು ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಅಸ್ತಿತ್ವ ಮರೆಗೆ ಸರಿಯಲಿದೆಯೇ? ಇಲ್ಲವೆಂದೇ ಹೇಳಬಹುದು.

ರಾಹುಲ್ ತಂತ್ರಗಾರಿಕೆ

ಪಕ್ಷದ ಸದಸ್ಯನಾಗಿ ಮುಂದುವರಿಯಲಿದ್ದೇನೆ ಎಂದು ರಾಹುಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪಕ್ಷದಲ್ಲಿ ಅವರ ಪ್ರಭಾವ ಮುಂದುವರಿಯುವುದು ನಿಶ್ಚಿತ. ಇನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ತಮ್ಮ ಹೋರಾಟವೂ ಮುಂದುವರಿಯಲಿದೆ ಎಂದೂ ರಾಹುಲ್ ಹೇಳಿದ್ದಾರೆ.

ಹೀಗೆ ಮಾಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರಗಾರಿಕೆ ರಾಹುಲ್ ಅವರದ್ದು ಎಂಬ ವಿಶ್ಲೇಷಣೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಒಂದನೆಯದು, ಪ್ರಧಾನಿ ನರೇಂದ್ರ ಮೋದಿಯವರು ಸದಾ ತಮ್ಮ ಬಗ್ಗೆ ಮಾಡುವ ವಂಶ ರಾಜಕಾರಣದ ಟೀಕೆಯಿಂದ ಹೊರಬರುವುದು (ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ವಿರುದ್ಧ ವಂಶಾಡಳಿತವನ್ನೇ ಪ್ರಮುಖ ಅಸ್ತ್ರವಾಗಿ ಮೋದಿ ಬಳಸಿಕೊಂಡಿದ್ದರು. ಮುಂದಿನ ಬಾರಿ ಅಂತಹ ಟೀಕೆಗಳಿಂದ ತಪ್ಪಿಸಿಕೊಳ್ಳಲು ಈಗಲೇ ಸಿದ್ಧತೆ ನಡೆಸುವುದು ರಾಹುಲ್ ತಂತ್ರವಾಗಿದೆ). ಎರಡನೆಯದ್ದು, ಹುದ್ದೆಗಿಂತಲೂ ಜವಾಬ್ದಾರಿಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂಬ ಸಂದೇಶವನ್ನು ತಮ್ಮದೇ ಪಕ್ಷದ ಹಿರಿಯ ನಾಯಕರಿಗೆ ತಲುಪುವಂತೆ ನೋಡಿಕೊಳ್ಳುವುದು. ಇಬ್ಬರು ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಕಮಲನಾಥ್ ಮತ್ತು ಅಶೋಕ್ ಗೆಹ್ಲೊಟ್, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರರಿಗೆ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದು ರಾಹುಲ್‌ಗೆ ಸುತರಾಂ ಇಷ್ಟವಿರಲಿಲ್ಲ. ಹೀಗಾಗಿ ತಾವೇ ಹುದ್ದೆಯಿಂದ ಕೆಳಗಿಳಿಯುವ ಮೂಲಕ ಸ್ವಜನಪಕ್ಷಪಾತದಿಂದ ದೂರವಿರಿ ಎಂಬ ಸಂದೇಶ ರವಾನಿಸುವುದು ರಾಹುಲ್ ಉದ್ದೇಶ. ಇದನ್ನೇ ಪ್ರಮುಖವಾಗಿಟ್ಟುಕೊಂಡು ರಾಜೀನಾಮೆ ಪತ್ರದಲ್ಲಿ, ‘ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡುವ ಮೂಲಕ, ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸದ ನಾಯಕರು ಹೊಸಬರಿಗೆ ಹುದ್ದೆಗಳನ್ನು ಬಿಟ್ಟು ಬಿಡಿ ಎಂಬ ಸಂದೇಶ ರವಾನಿಸಿದ್ದಾರೆ ರಾಹುಲ್ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ತಂತ್ರಗಾರಿಕೆಯಲ್ಲಿ ರಾಹುಲ್ ಯಶಸ್ಸು ಗಳಿಸುತ್ತಾರೋ ಇಲ್ಲವೋ, ಅವರ ಕುಟುಂಬದವರಂತೂ ಪಕ್ಷದಲ್ಲಿ ಸಾಮಾನ್ಯ ಸದಸ್ಯರಾಗಿ ಇರುವುದು ಅನುಮಾನವೇ. ಪಕ್ಷದ ಉನ್ನತ ಚಟುವಟಿಕೆಗಳಲ್ಲಿ ಅವರ ಪ್ರಬಾವ ಇದ್ದೇ ಇರಲಿದೆ ಎನ್ನುತ್ತವೆ ಮೂಲಗಳು. ರಾಹುಲ್ ಪಕ್ಷದ ಸಾಮಾನ್ಯ ಸದಸ್ಯರಾದರೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತ್ರ ಪ್ರಧಾನ ಕಾರ್ಯದರ್ಶಿ ಸ್ಥಾನ ತ್ಯಜಿಸಿಲ್ಲ. ಒಟ್ಟಿನಲ್ಲಿ, ತಮ್ಮ ಕುಟುಂಬಕ್ಕೆ ನಿಷ್ಠರಾದ ಯಾರನ್ನು ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ರಾಹುಲ್ ನೋಡಿಕೊಳ್ಳಲಿದ್ದಾರೆ? ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆಯಾ? ತಮ್ಮ ಯೋಜನೆಗಳಲ್ಲಿ ರಾಹುಲ್ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದೇ ಸದ್ಯದ ಕುತೂಹಲವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು