ಬುಧವಾರ, ಮೇ 25, 2022
23 °C

ಚೌಕೀದಾರ್ ಚೋರ್ ಹೈ: ಬೇಷರತ್ ಕ್ಷಮೆಯಾಚಿಸಿದ ರಾಹುಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:‘ಚೌಕೀದಾರ್‌ ಚೋರ್‌ ಹೈ’ ಎಂದು ಸುಪ್ರೀಂಕೋರ್ಟ್‌ ಕೂಡ ಹೇಳಿದೆ ಎಂಬುದಾಗಿ ತಾನು ತಪ್ಪಾಗಿ ಹೇಳಿರುವುದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ರಾಹುಲ್‌ ಹೇಳಿಕೆ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಕೊನೆಗೊಳಿಸಬೇಕೆಂದು ರಾಹುಲ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಸುಪ್ರೀಂಕೋರ್ಟಿಗೆ ರಾಹುಲ್‌ ಗಾಂಧಿ ಸಲ್ಲಿಸಿದ ಮೂರು ಪುಟಗಳ ಹೊಸ ಅಫಿಡವಿಟ್‍ನಲ್ಲಿ ಸುಪ್ರೀಂಕೋರ್ಟ್‌ ಬಗ್ಗೆ ನನಗೆ ಅತೀವ ಗೌರವವಿದೆ. ರಫೇಲ್‌ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಚೌಕೀದಾರ್‌ ಚೋರ್‌ ಹೈ ಎಂದು ಹೇಳಿದೆ ಎಂಬುದಾಗಿ ತಪ್ಪಾಗಿ ಹೇಳಿರುವುದಕ್ಕೆ ಉನ್ನತ ನ್ಯಾಯಪೀಠದ ಮುಂದೆ ನಾನು ಕ್ಷಮೆ ಕೋರುತ್ತೇನೆ ಎಂದು ರಾಹುಲ್‌ ಗಾಂಧಿ  ಹೇಳಿದ್ದಾರೆ.

ಏನಿದು ಪ್ರಕರಣ?

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸುವಂತೆ ಸಿಬಿಐಗೆ ಸೂಚಿಸಬೇಕು ಎಂದು ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 14ರಂದು ತಿರಸ್ಕರಿಸಿತ್ತು.
ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯದ ಕಣ್ಗಾವಲಿನಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿ ಈ ತೀರ್ಪು ನೀಡಿತ್ತು.

ಈ ತೀರ್ಪು ಹೊರಬಿದ್ದ ನಂತರ ಉತ್ತರಪ್ರದೇಶದ ಅಮೇಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಸುಪ್ರೀಂಕೋರ್ಟ್​​ಗೆ ನಾನು ಧನ್ಯವಾದ ಹೇಳುತ್ತೇನೆ. ಇಡೀ ದೇಶ ಚೌಕೀದಾರ್​ ಚೋರ್​​ ಹೈ ಎಂದು ಹೇಳುತ್ತಿದೆ.  ಚೌಕೀದಾರ್​ ಕಳ್ಳತನ ಮಾಡಿದ್ದಾನೆ ಅಂತ ಸುಪ್ರೀಂಕೋರ್ಟ್​ ಒಪ್ಪಿಕೊಂಡಿದೆ ಎಂದಿದ್ದರು.

‘ನರೇಂದ್ರ ಮೋದಿ ಕಳ್ಳ (ಚೌಕೀದಾರ್‌ ನರೇಂದ್ರ ಮೋದಿ ಚೋರ್‌ ಹೈ) ಎಂದು ಇದೇ 10ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ರಾಹುಲ್‌ ಹೇಳಿದ್ದಾರೆ ಎಂದು ತಮ್ಮ ದೂರಿನಲ್ಲಿ ಲೇಖಿ ಉಲ್ಲೇಖಿಸಿದ್ದರು. 

ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ರಾಹುಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. 

‘ಯಾವುದೇ ನ್ಯಾಯಾಲಯ ಈ ರೀತಿ ಹೇಳುವುದಿಲ್ಲ ಎಂಬುದು ಸ್ಪಷ್ಟ. ನ್ಯಾಯಾಲಯದ ಆದೇಶವನ್ನು ರಾಜಕೀಯ ಘೋಷಣೆಯ ಜತೆಗೆ ಇರಿಸಿದ್ದು ದುರದೃಷ್ಟಕರ. ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಚುನಾವಣಾ ಪ್ರಚಾರದ ಭರದಲ್ಲಿ ಆಡಿದ ಮಾತನ್ನು ನ್ಯಾಯಾಲಯವು ಯಾವುದೇ ತೀರ್ಮಾನಕ್ಕೆ ಬಂದಿದೆ ಎಂಬ ಅರ್ಥದಲ್ಲಿ ತೆಗೆದುಕೊಳ್ಳಬಾರದು’ ಎಂದು ರಾಹುಲ್ ಸುಪ್ರೀಂ ಕೋರ್ಟ್‌ನಲ್ಲಿ  ಏಪ್ರಿಲ್ 22ರಂದು ವಿಷಾದ ವ್ಯಕ್ತ ಪಡಿಸಿದ್ದರು.

ಇದನ್ನೂ ಓದಿ: 

'ಚೌಕೀದಾರ್ ಚೋರ್ ಹೈ' ಹೇಳಿಕೆಗೆ ವಿಷಾದ ವ್ಯಕ್ತ ಪಡಿಸಿದ ರಾಹುಲ್ ಗಾಂಧಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು