ವೈ ನಾಟ್ ರಾಹುಲ್? ಎಂಬ ಪ್ರಶ್ನೆಗೆ ಉತ್ತರಕೊಟ್ಟ ವಯನಾಡು ಜನತೆ

ಮಂಗಳವಾರ, ಜೂನ್ 25, 2019
25 °C

ವೈ ನಾಟ್ ರಾಹುಲ್? ಎಂಬ ಪ್ರಶ್ನೆಗೆ ಉತ್ತರಕೊಟ್ಟ ವಯನಾಡು ಜನತೆ

Published:
Updated:

ವಯನಾಡು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಅಮೇಠಿಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಕೇರಳದ ವಯನಾಡಿನಲ್ಲಿ ಜನರು  ಕೈ ಹಿಡಿದು ಮೇಲೆತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ರಾಹುಲ್ ಸ್ಪರ್ಧೆಗಿಳಿಯುತ್ತಾರೆ ಎಂದಾಗ ಕೇರಳದ ವಯನಾಡು ಜಿಲ್ಲೆ ರಾಹುಲ್ ಅವರನ್ನು ತಮ್ಮ ಕ್ಷೇತ್ರಕ್ಕೆ ಸ್ವಾಗತಿಸಿತ್ತು. ವಯನಾಡು ಕಾಂಗ್ರೆಸ್ ಪ್ರಾಬಲ್ಯವಿರುವ ಚುನಾವಣಾ ಕ್ಷೇತ್ರವಾಗಿರುವುದರಿಂದ ರಾಹುಲ್‌ಗೆ ಸುಲಭ ಜಯ ಇಲ್ಲಿ ನಿಶ್ಚಿತವಾಗಿತ್ತು. ಇದೀಗ 4 ಲಕ್ಷ  ಮತಗಳ ಅಂತರದಲ್ಲಿ ರಾಹುಲ್ ಜಯ ಗಳಿಸಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ಮಟ್ಟದ ವಿಜಯ ಎಂದೇ ಹೇಳಬಹುದಾಗಿದೆ. 

ವಯನಾಡು ಲೋಕಸಭಾ ಕ್ಷೇತ್ರವು ನಿಲಂಬೂರ್, ಎರನಾಡ್, ವಂಡೂರ್, ತಿರುವಂಬಾಡಿ , ಕಲ್ಪಟ್ಟ, ಸುಲ್ತಾನ್ ಬತ್ತೇರಿ, ಮಾನಂದವಾಡಿ ಮೊದಲಾದ  ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ಇಡೀ ದೇಶ ಕುತೂಹಲದಿಂದ ವಯನಾಡು ಲೋಕಸಭಾ ಕ್ಷೇತ್ರದ ಆಗು ಹೋಗುಗಳನ್ನು ಗಮನಿಸಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಈ ಬಾರಿ ಯುಡಿಎಫ್ ಗೆಲುವು ಸಾಧಿಸುವ ಕ್ಷೇತ್ರ ವಯನಾಡು ಎಂದರೂ ಇಲ್ಲಿ ಎಲ್‌ಡಿಎಫ್ ಕೂಡಾ  ಗೆಲುವು ಸಾಧ್ಯತೆ  ಇದೆ ಎಂಬ ಆತ್ಮ ವಿಶ್ವಾಸ ಹೊಂದಿತ್ತು. 2014ರಲ್ಲಿ ಮಾಜಿ ಸಂಸದ ಎಂ.ಐ ಶಾನವಾಜ್  ಕಳೆದ ಬಾರಿ ಗೆದ್ದದ್ದು 20,870 ಮತಗಳಿಂದ. ಆದರೆ 2009ರಲ್ಲಿ ಶಾನವಾಜ್ ಗೆಲವು ಸಾಧಿಸಿದ್ದು 1,53,439 ಮತಗಳಿಗಳಿಂದಾಗಿತ್ತು. ಆದರೆ ರಾಹುಲ್ ಗಾಂಧಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದಾಗ ಕಾಂಗ್ರೆಸ್ ಪರ ಅಲೆ ಅಲ್ಲಿ ಕಾಣಿಸಿಕೊಂಡಿತು.

ವಿಧಾನಸಭಾ ಕ್ಷೇತ್ರಗಳನ್ನು ನೋಡುವುದಾದರೆ ವಯನಾಡು ಜಿಲ್ಲೆಯಲ್ಲಿ ಕಲ್ಪಟ್ಟ, ಸುಲ್ತಾನ ಬತ್ತೇರಿ, ಮಾನಂದವಾಡಿಯಲ್ಲಿ ಎಲ್‌ಡಿಎಫ್ ಅಧಿಕಾರದಲ್ಲಿದೆ. ಎರನಾಡು, ವಂಡೂರ್ , ತಿರುವಂಬಾಡಿ ಕ್ಷೇತ್ರದಲ್ಲಿ  ಯುಡಿಎಫ್ ಅಧಿಕಾರದಲ್ಲಿದೆ. ಈ ಲೆಕ್ಕಾಚಾರದಲ್ಲಿ ಎಲ್ಡಿಎಫ್‌ ಪರ ಒಲವು ಇದ್ದರೂ, ರಾಹುಲ್ ಗಾಂಧಿ ಆಗಮನದೊಂದಿಗೆ  ಲೆಕ್ಕಾಚಾರಗಳು ತಲೆಕೆಳಗಾದವು. ನೆಹರು ಕುಟುಂಬದ ಕುಡಿ ಕೇರಳದಲ್ಲಿ  ಸ್ಪರ್ಧಿಸುತ್ತಿದ್ದಾರೆ ಎಂಬ ಕಾರಣದಿಂದಾಗಿ ನಿಷ್ಪಕ್ಷಪಾತವಾಗಿ ರಾಹುಲ್  ಪರ ಒಲವು ತೋರಿದವರ ಸಂಖ್ಯೆಯೂ ಜಾಸ್ತಿ ಇದೆ.

ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಂ ಲೀಗ್ ಮತ್ತು ಮುಸ್ಲಿಂ ಸಂಘಟನೆಗಳು ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಾಗಿ ರಾಹುಲ್ ಗಾಂಧಿಯನ್ನು ಗೆಲ್ಲಿಸಬೇಕು ಎಂಬ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದವು.  ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರಿಗೆ ಉಳಿಗಾಲವಿಲ್ಲ ಎಂದು ಮಹಿಳಾ ಮತದಾರರಲ್ಲಿ ಯುಡಿಎಫ್ ಗುಟ್ಟಾಗಿಯೇ ಹೇಳಿತ್ತು.  ಈ ಪಿಸುಮಾತಿನ ಪ್ರಚಾರವೂ ಇಲ್ಲಿ ಪ್ರಭಾವ ಬೀರಿದೆ ಎಂದು ಅಲ್ಲಗೆಳೆಯುವಂತಿಲ್ಲ.

ಇದರ ಜತೆಗೆ ಎನ್‌ಡಿಎಗಾಗಿರುವ ಬಿಜೆಪಿ ಮೈತ್ರಿ ಪಕ್ಷವಾದ ಬಿಡಿಜೆಎಸ್ ಈ ಸ್ಪರ್ಧಾ ಕಣದಲ್ಲಿದೆ. ಹೀಗಿದ್ದರೂ ಎನ್‌ಡಿಎಯ ಮುಖ್ಯ ನೇತಾರರು ಯಾರೂ ರಾಹುಲ್ ಗಾಂಧಿ  ಸ್ಪರ್ಧಿಸುತ್ತಿರುವ ವಯನಾಡು ಕ್ಷೇತ್ರಕ್ಕೆ ಪ್ರಚಾರ ಮಾಡಲು ಬಂದಿಲ್ಲ. ಹಾಗಾಗಿ  ಇಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವಿನ ನೇರ ಹಣಾಹಣಿ ನಡೆದಿದೆ.

ಎಲ್‌ಡಿಎಫ್ ಅಭ್ಯರ್ಥಿ ಪಿ.ಪಿ ಸುನೀರ್ ಸಿಪಿಐ ಮಲಪ್ಪುರಂ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ. ಆದರೆ ರಾಹುಲ್ ಮುಂದೆ ಎಡಪಕ್ಷಗಳ ಯಾವ ಕಾರ್ಯತಂತ್ರವೂ ವರ್ಕೌಟ್ ಆಗಿಲ್ಲ. ಇತ್ತ ರಾಹುಲ್ ಕೇರಳದಲ್ಲಿ ಪ್ರಚಾರ ಮಾಡುವಾಗ ಎಡಪಕ್ಷಗಳ ವಿರುದ್ಧ ಮಾತನಾಡಿಲ್ಲ. ಎನ್‌ಡಿಎ ಮೈತ್ರಿಕೂಟಗಳನ್ನು ಸೋಲಿಸುವುದು ಕಾಂಗ್ರೆಸ್ ನೇತೃತ್ವದ ಯಪಿಎಯ ಉದ್ದೇಶವಾಗಿರುವುದರಿಂದ ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿರುವ ಎಲ್‌ಡಿಎಫ್ ಸರ್ಕಾರವನ್ನು ಟೀಕಿಸಿ ಎಡರಂಗಗಳ ಮುನಿಸಿಗೆ ಕಾರಣವಾಗದಂತೆ ರಾಹುಲ್ ಇಲ್ಲಿ ಎಚ್ಚರ ವಹಿಸಿದ್ದರು.

ಇದೆಲ್ಲದರ ನಡುವೆ ರಾಹುಲ್ ಗಾಂಧಿಯೇ ಭಾರತದ ಭರವಸೆ ಎಂಬ ಸ್ಪಷ್ಟವಾದ ಧ್ಯೇಯವನ್ನೇ ಯುಡಿಎಫ್  ಜನರ ಮುಂದಿಟ್ಟಿತ್ತು. ಹಾಗಾಗಿ ಎಲ್‌ಡಿಎಫ್- ಯುಡಿಎಫ್ ಹೊರತು ಪಡಿಸಿ ನಿಷ್ಪಕ್ಷರಾದ ಮತದಾರರೂ ರಾಹುಲ್ ಗಾಂಧಿಯ ಪರವಾಗಿ ನಿಂತಿದ್ದು ಇಲ್ಲಿ ಭರ್ಜರಿ ಗೆಲುವಿಗೆ ಕಾರಣವಾಯಿತು.

ಇದನ್ನೂ ಓದಿ: ವಯನಾಡಿನಲ್ಲಿ ಒಂದೇ ಪ್ರಶ್ನೆ: ವೈ ನಾಟ್‌ ರಾಹುಲ್‌?

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !