ಭಾನುವಾರ, ಆಗಸ್ಟ್ 18, 2019
22 °C

ದೇಶವೆಂದರೆ ಭೂಮಿಯ ತುಂಡುಗಳಲ್ಲ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

Published:
Updated:

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರೂಪಿಸುವ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮೌನ ಮುರಿದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

‘ಜನರು ನಿಮಗೆ ಕೊಟ್ಟ ಅಧಿಕಾರವನ್ನು ಕೆಟ್ಟದಾಗಿ ಬಳಸಿದ್ದೀರಿ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹರಿದುಹಾಕಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಏಕಪಕ್ಷೀಯವಾಗಿ ಕಾಶ್ಮೀರವನ್ನು ಹರಿದುಹಾಕಿದ್ದರಿಂದ, ಅಲ್ಲಿನ ಚುನಾಯಿತ ಪ್ರತಿನಿಧಿಗಳನ್ನು ಬಂಧಿಸಿದ್ದರಿಂದ, ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದರಿಂದ ರಾಷ್ಟ್ರೀಯ ಏಕತೆ ವೃದ್ಧಿಯಾಗಿಲ್ಲ. ಈ ದೇಶವು ಜನರಿಂದ ರೂಪುಗೊಂಡಿದೆ. ಭೂಮಿಯ ತುಂಡುಗಳಿಂದ ಅಲ್ಲ’ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

‘ಅಧಿಕಾರವನ್ನು ಹೀಗೆ ದುರುಪಯೋಗಪಡಿಸಿಕೊಂಡಿರುವುದು ನಮ್ಮ ದೇಶದ ರಾಷ್ಟ್ರೀಯ ಭದ್ರತೆಯ ಮೇಲೆ ದೂರಗಾಮಿ ದುಷ್ಪರಿಣಾಮಗಳನ್ನು ಉಂಟು ಮಾಡಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ಕಾಶ್ಮೀರ ವಿಭಜನೆ ಮತ್ತು 370ನೇ ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತಲೆದೋರಿದೆ. ಪಕ್ಷದ ಕೆಲ ನಾಯಕರು ಮೋದಿ ಸರ್ಕಾರದ ನಿಲುವಿನ ಪರ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಹತ್ವ ಪಡೆದುಕೊಂಡಿದೆ.

Post Comments (+)