ಗುರುವಾರ , ಫೆಬ್ರವರಿ 25, 2021
26 °C

ಪ್ರತಿದಿನ 300 ಶ್ರಮಿಕ್ ವಿಶೇಷ ರೈಲು ಓಡಾಟಕ್ಕೆ ಸಿದ್ಧತೆ: ಪೀಯೂಷ್ ಗೋಯಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

piyush

ನವದೆಹಲಿ: ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವುದಕ್ಕಾಗಿ ಪ್ರತಿದಿನ 300 ವಿಶೇಷ ಶ್ರಮಿಕ್ ರೈಲು ಓಡಾಟ ನಡೆಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ. ಅದೇ ವೇಳೆ ಮುಂದಿನ ಮೂರು ನಾಲ್ಕು ದಿನಗಳಲ್ಲಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಪ್ರಯತ್ನಗಳನ್ನು ಜಾಸ್ತಿ ಮಾಡಬೇಕು ಎಂದು ಸಚಿವರು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ರೈಲ್ವೆ ಸಚಿವಾಲಯದ ಪ್ರಕಾರ ಭಾನುವಾರದವರೆಗೆ ವಿವಿಧ ರಾಜ್ಯಗಳಲ್ಲಿ ಒಟ್ಟು 366 ಶ್ರಮಿಕ್ ವಿಶೇಷ ರೈಲು ಓಡಾಟ ನಡೆಸಿ 3,60,000 ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕರೆದೊಯ್ದಿದೆ. ಇದರಲ್ಲಿ 287 ರೈಲುಗಳು ಈಗಾಗಲೇ ಗಮ್ಯ ತಲುಪಿದ್ದು, 79 ರೈಲುಗಳು ಸಂಚರಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಪ್ರತಿ ದಿನ 300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಸಜ್ಜಾಗಿದೆ. ಹಾಗಾಗಿ ಅವರವರ ರಾಜ್ಯದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅಲ್ಲಿಂದ ಸ್ಥಳಾಂತರಿಸಲು ಅನುಮತಿ ನೀಡಿ 3-4 ದಿನಗಳಲ್ಲಿ ಅವರನ್ನು ಅವರವರ ಮನೆಗೆ ಕಳುಹಿಸಬೇಕು ಎಂದು ಗೋಯಲ್ ಟ್ವೀಟಿಸಿದ್ದಾರೆ.

ಮೇ 1ರಂದು ಆರಂಭ ಮಾಡಿದ ಶ್ರಮಿಕ್ ವಿಶೇಷ ರೈಲು ಯಾವುದೇ ಇತರ ನಿಲ್ದಾಣಗಳಲ್ಲಿ ನಿಲ್ಲದೆ ನೇರವಾಗಿ ಗಮ್ಯ ತಲುಪುತ್ತದೆ. ವಲಸೆ ಕಾರ್ಮಿಕರು ಇರುವ ರಾಜ್ಯಗಳು ಅವರನ್ನು ಕಳುಹಿಸಲು ಮತ್ತು ಅವರು ಹೋಗಲಿರುವ ರಾಜ್ಯಗಳು ಅವರನ್ನು ಸ್ವೀಕರಿಸಲು ಅನುಮತಿ ನೀಡಿದರೆ ಮಾತ್ರ ರೈಲು ಸಂಚಾರ ನಡೆಸಲಿಗೆ ಎಂದು ಸಚಿವಾಲಯ ಹೇಳಿದೆ.

ಇಲ್ಲಿಯವರೆಗೆ ಆಂಧ್ರ ಪ್ರದೇಶ (1), ಬಿಹಾರ (87), ಹಿಮಾಚಲ ಪ್ರದೇಶ  (1), ಜಾರ್ಖಂಡ್ (16), ಮಧ್ಯ ಪ್ರದೇಶ (24), ಮಹಾರಾಷ್ಟ್ರ (3), ಒಡಿಶಾ (20), ರಾಜಸ್ಥಾನ (4), ತೆಲಂಗಾಣ(2) , ಉತ್ತರ  ಪ್ರದೇಶ (127), ಪಶ್ಚಿಮ ಬಂಗಾಳ (2)- ಒಟ್ಟು 287 ರೈಲುಗಳು ಗಮ್ಯ ತಲುಪಿವೆ. ಈ ರೈಲುಗಳು ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಹರ್ಯಾಣ, ಕರ್ನಾಟಕ, ಕೇರಳ, ಪಂಜಾಬ್, ರಾಜಸ್ಥಾನ ಮತ್ತು ತೆಲಂಗಾಣದಿಂದ ಹೊರಟಿತ್ತು.

ರೈಲ್ವೆ ಇಲಾಖೆಯ ಅಂಕಿ ಅಂಶ ಪ್ರಕಾರ ಉತ್ತರ ಪ್ರದೇಶ ಮತ್ತು ಬಿಹಾರ ಅತೀ ಹೆಚ್ಚು ಅಂದರೆ ಸುಮಾರು 80,000ಕ್ಕಿಂತಲೂ ಹೆಚ್ಚು ವಲಸೆ ಕಾರ್ಮಿಕರನ್ನು ವಾಪಸ್ ಕರೆದುಕೊಂಡಿದೆ. ಈ ಎರಡು ರಾಜ್ಯಗಳ ನಂತರ ಮಧ್ಯ ಪ್ರದೇಶ ಮತ್ತು ಜಾರ್ಖಂಡ್‌ ತಮ್ಮ ವಲಸೆ ಕಾರ್ಮಿಕರನ್ನು ವಾಪಸ್ ಕರೆದುಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು ವಲಸೆ ಕಾರ್ಮಿಕರಿದ್ದು, ಎರಡೇ ಎರಡು ರೈಲುಗಳು ಮಾತ್ರ ಅಲ್ಲಿಗೆ ಸಂಚಾರ ನಡೆಸಿವೆ. 
ವಲಸೆ ಕಾರ್ಮಿಕರನ್ನು ಪಶ್ಚಿಮ ಬಂಗಾಳ ಸ್ವೀಕರಿಸುತ್ತಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಂಗಾಳ ಸರ್ಕಾರ ನಾವು ಶನಿವಾರ ಕರ್ನಾಟಕದಿಂದ ಎರಡು, ತಮಿಳುನಾಡಿನಿಂದ 2, ತೆಲಂಗಾಣದಿಂದ ಒಂದು ಮತ್ತು ಪಂಜಾಬ್‌ನಿಂದ 2 ರೈಲುಗಳನ್ನು ಸ್ವೀಕರಿಸಿದ್ದೇವೆ ಎಂದಿದೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು