ಸೋಮವಾರ, ಮಾರ್ಚ್ 8, 2021
26 °C

ರಾಜಸ್ಥಾನ: ‘ಬಂಡಾಯಗಾರರ’ ಕೈಯಲ್ಲಿ ಸರ್ಕಾರದ ಕೀಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನ ವಿಧಾನಸಭೆಯಲ್ಲಿ ಯಾವ ಪ‍ಕ್ಷಕ್ಕೂ ಸರಳ ಬಹುಮತ ಇಲ್ಲ ಎಂಬುದು ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ ಇದ್ದ ಚಿತ್ರಣ. 200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ 199 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಹಾಗಾಗಿ ಸರಳ ಬಹುಮತಕ್ಕೆ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಅಗತ್ಯ. 

ರಾಜಸ್ಥಾನದಲ್ಲಿ ಮತ ದೃಢೀಕರಣ ರಶೀದಿ ಚೀಟಿಗಳನ್ನು ಎಣಿಕೆ ಮಾಡಲು ನಿರ್ಧರಿಸಿದ ಕಾರಣ ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟ ಆಗಿರಲಿಲ್ಲ. ಕಾಂಗ್ರೆಸ್‌ ಪಕ್ಷವು 99 ಕ್ಷೇತ್ರಗಳಲ್ಲಿ ಮುನ್ನಡೆ ಅಥವಾ ಗೆಲುವು ಪಡೆದಿದ್ದರೆ ಬಿಜೆಪಿ 73 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ. 

ಅತ್ಯಂತ ದೊಡ್ಡ ಪಕ್ಷವಾಗಿ ಹೊಮ್ಮಿರುವ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಇನ್ನೊಬ್ಬ ಶಾಸಕರ ಬೆಂಬಲ ಬೇಕಿದೆ. ಸಣ್ಣ ಪಕ್ಷಗಳಿಗೆ ಸೇರಿದವರು ಮತ್ತು ಪಕ್ಷೇತರರ ಪೈಕಿ 13 ಮಂದಿ ಗೆದ್ದಿದ್ದಾರೆ ಅಥವಾ ಮುನ್ನಡೆ ಪಡೆದಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಪಕ್ಷವು ಪಕ್ಷೇತರರು ಅಥವಾ ಚುನಾವಣೋತ್ತರ ಮೈತ್ರಿಯ ಮೊರೆ ಹೋಗುವುದು ಅನಿವಾರ್ಯವಾಗಲಿದೆ. 

ಹಿಂದೆ, ಅಶೋಕ್‌ ಗೆಹ್ಲೋಟ್‌ ಸರ್ಕಾರದಲ್ಲಿ ಸಚಿವರಾಗಿದ್ದ ಬಾಬುಲಾಲ್‌ ನಗರ್‌ ಅವರು ಡುಡು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಗಂಗಾನಗರದಿಂದ ಗೆದ್ದಿರುವ ರಾಜ್‌ಕುಮಾರ್‌ ಗೌರ್‌, ಸಿರೋಹಿಯಿಂದ ಗೆದ್ದಿರುವ ಸನ್ಯಂ ಲೋಧಾ ಮತ್ತು ಶಾಹ್‌ಪುರದಿಂದ ಅಲೋಕ್‌ ಬೇನಿವಾಲ್‌ ಅವರು ಗೆದ್ದಿದ್ದಾರೆ. ಇವರೆಲ್ಲವೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು. 

ಬಂಡಾಯ ಅಭ್ಯರ್ಥಿಗಳಾಗಿ ಗೆದ್ದ ಕಾಂಗ್ರೆಸ್ಸಿಗರು ಸರ್ಕಾರ ರಚನೆಗೆ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. 

ಬಿಎಸ್‌ಪಿ ಆರು, ಸಿಪಿಎಂ ಎರಡು ಮತ್ತು ಇತರ ಪಕ್ಷಗಳ ಆರು ಅಭ್ಯರ್ಥಿಗಳು ಗೆದ್ದಿದ್ದಾರೆ. 

ನಿರ್ಗಮಿತ ಸರ್ಕಾರ 19 ಸಚಿವರ ಪೈಕಿ 13 ಮಂದಿ ಸೋಲುಂಡಿದ್ದಾರೆ. 

2013ರ ಚುನಾವಣೆಯಲ್ಲಿ ಕೇವಲ 21 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಹೀನಾಯವಾಗಿ ಕಾಂಗ್ರೆಸ್ ಸೋತಿತ್ತು. 163 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತ ಬಂದಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು