ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸುಂಧರಾ ರಾಜೆ ವಿರುದ್ಧ ಬಿಜೆಪಿ ತೊರೆದು ಬಂದಿದ್ದ ಮಾನವೇಂದ್ರ ಸ್ಪರ್ಧೆ

Last Updated 17 ನವೆಂಬರ್ 2018, 11:23 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನ ಚುನಾವಣಾ ಕಣ ರಂಗೇರುತ್ತಿದ್ದು, ಕಾಂಗ್ರೆಸ್‌ ಚುನಾವಣೆಗೆ ಸ್ಪರ್ಧಿಸುವ 32 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧಜಾಲಾರಪಟ್ಟಣದಿಂದ ಸ್ಪರ್ಧಿಸಲು ಇತ್ತೀಚೆಗಷ್ಟೇ ಬಿಜೆಪಿ ತೊರೆದು ‘ಕೈ’ ಹಿಡಿದಿದ್ದಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಮಗ ಮಾನವೇಂದ್ರ ಸಿಂಗ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ.

‘ನಾನು ಜಾಲಾರಪಟ್ಟಣದಿಂದ ಸ್ಪರ್ಧಿಸಬೇಕೆಂಬುದು ಪಕ್ಷದ ನಿರ್ಧಾರ. ಎದುರಾಗುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ’ ಎಂದು ಮಾನವೇಂದ್ರ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾರ್ಮರ್‌ ಜಿಲ್ಲೆಯ ಶಿಯೊ ಕ್ಷೇತ್ರದಿಂದ ಮಾನವೇಂದ್ರ ಸಿಂಗ್ ಶಾಸಕರಾಗಿ ಆಯ್ಕೆಯಾಗಿದ್ದರು.‌

ಪಕ್ಷದ ಈ ನಿರ್ಧಾರ ಜಾಲಾರಪಟ್ಟಣದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೈಲಾಶ್‌ ಮೀನಾ ಅವರಿಗೆ ಕೊಂಚ ಅಸಮಾಧಾನ ತಂದಿದ್ದು, ‘ಸ್ಥಳೀಯರನ್ನು ಆಯ್ಕೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಹೈಕಮಾಂಡ್‌ ಎಲ್ಲಾ ಆಯಾಮಗಳಿಂದ ಯೋಚಿಸಿ ಈ ನಿರ್ಧಾರ ಕೈಗೊಂಡಿರುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಡೆಗೆ ಒಲವಿರುವ ರಜಪೂತರ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವ ತಂತ್ರವಾಗಿ ಮಾನವೇಂದ್ರ ಸಿಂಗ್ ಅವರನ್ನು ರಾಜೆ ಅವರ ವಿರದ್ಧ ಕಾಂಗ್ರೆಸ್‌ ಕಣಕ್ಕಿಳಿಸಿದೆ. ವಸುಂಧರಾ ರಾಜೆ ಶನಿವಾರ ಬೆಳಿಗ್ಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. 2003ರಿಂದ ಈ ಕ್ಷೇತ್ರದಿಂದ ಸ್ಪರ್ಧಿಸಿ ಸತತ ಗೆಲುವು ಸಾಧಿಸಿದ್ದಾರೆ.

‌‘ಬಿಜೆಪಿ ಸೇರಿದ್ದು ನಾನು ಮಾಡಿದ ತಪ್ಪು’ ಎಂದು ಸೆಪ್ಟೆಂಬರ್‌ 22ರಂದು ನಡೆದ ‘ಸ್ವಾಭಿಮಾನ ರ್‍ಯಾಲಿ’ಯಲ್ಲಿ ಹೇಳುವ ಮೂಲಕ ಪಕ್ಷಕ್ಕೆ ಶಾಕ್‌ ನೀಡಿದ್ದರು. ‘2014ರಲ್ಲಿ ತಂದೆ ಜಸ್ವಂತ್‌ ಸಿಂಗ್‌ ಅವರಿಗೆ ಲೋಕಸಭಾ ಚುನಾವಣೆಯ ನೀಡಲು ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಇದರಿಂದ ರಜಪೂತರಿಗೆ ಭಾರತೀಯ ಜನತಾ ಪಕ್ಷದ ಬಗ್ಗೆ ಅಸಮಾಧಾನ ಇದೆ’ ಎಂದು ಸಿಂಗ್‌ ಬೇಸರ ವ್ಯಕ್ತಪಡಿಸಿದ್ದರು.

ರಾಜಸ್ಥಾನದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಜಾಗರೂಕತೆಯಿಂದ ಟಿಕೆಟ್‌ ಹಂಚಿಕೆ ಮಾಡಿದ್ದು, ಶನಿವಾರ8 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಡಿಸೆಂಬರ್‌ 7ರಂದು ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದೆ. ಒಟ್ಟು 200 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಣಿಕೆ ಪ್ರಕ್ರಿಯೆ ಡಿಸೆಂಬರ್‌ 11ಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT