ಮಂಗಳವಾರ, ನವೆಂಬರ್ 19, 2019
22 °C
ಬಿಜೆಪಿ ಬಲೆಗೆ ಬೀಳಲಾರೆ ಎಂದು ಸ್ಪಷ್ಟನೆ

ನನಗೆ ಕೇಸರಿ ಬಣ್ಣ ಬಳಿಯಲಾಗದು: ರಜನಿಕಾಂತ್‌

Published:
Updated:
ರಜನಿಕಾಂತ್

ಚೆನ್ನೈ: ‘ನನಗೆ ಬಿಜೆಪಿಯ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ... ತಿರುವಳ್ಳುವರ್‌ಗೆ ಕೇಸರಿ ಬಣ್ಣ ಬಳಿಯಲು ನಡೆದ ಪ್ರಯತ್ನದಂತೆಯೇ ನನಗೂ ಆ ಬಣ್ಣ ಬಳಿಯಲು ಯತ್ನಿಸಲಾಗುತ್ತಿದೆ. ತಿರುವಳ್ಳುವರ್‌ ಆಗಲಿ, ನಾನಾಗಲಿ ಈ ಬಲೆಗೆ ಬೀಳುವುದಿಲ್ಲ’ ಎಂದು ತಮಿಳು ಸಿನಿಮಾದ ಸೂಪರ್‌ ಸ್ಟಾರ್‌ ಮತ್ತು ರಾಜಕಾರಣಿ ರಜನಿಕಾಂತ್‌ ಹೇಳಿದ್ದಾರೆ. 

ಹೀಗೆ ಹೇಳುವ ಮೂಲಕ ತಾವು ಬಿಜೆಪಿ ಸೇರುವ ಸಾಧ್ಯತೆ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ತಿರುವಳ್ಳುವರ್‌ಗೆ ಕಾವಿ ತೊಡಿಸಿದ ಬಿಜೆಪಿ, ಆಕ್ರೋಶ

ಪಕ್ಷಕ್ಕೆ ಸೇರುವಂತೆ ಬಿಜೆಪಿ ತಮಗೆ ಆಹ್ವಾನ ನೀಡಿಲ್ಲ. ಆಹ್ವಾನ ನೀಡಿದರೆ ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ತಮ್ಮದೇ ಆಗಿದೆ ಎಂದೂ ಅವರು ಹೇಳಿದ್ದಾರೆ. 

ರಜನಿಕಾಂತ್‌ ಅವರನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಆದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅಥವಾ 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ, ಇನ್ನಷ್ಟೇ ಸ್ಥಾಪನೆಯಾಗಬೇಕಿರುವ ರಜನಿಕಾಂತ್‌ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ ಎಂಬುದನ್ನು ಪುಷ್ಟೀಕರಿಸುವ  ಬೆಳವಣಿಗೆಗಳು ಈ ಹಿಂದೆ ನಡೆದಿದ್ದವು.

ಇದನ್ನೂ ಓದಿ: ತಿರುವಳ್ಳುವರ್‌ಗೆ ಕೇಸರಿ ಶಾಲು: ಆರೋಪಿ ಬಂಧನ

ಡಿಎಂಕೆ ಮತ್ತು ಇತರ ದ್ರಾವಿಡ ಪಕ್ಷಗಳು ಪ್ರತಿಪಾದಿಸುವಂತೆ ಸಂತ ಕವಿ ತಿರುವಳ್ಳುವರ್‌ ನಾಸ್ತಿಕ ಅಲ್ಲ, ಅವರು ದೈವಭಕ್ತ ಎಂದೂ ರಜನಿಕಾಂತ್‌ ಹೇಳಿದ್ದಾರೆ. ತಮ್ಮ ವಾದಕ್ಕೆ ಸಮರ್ಥನೆಯಾಗಿ ತಿರುವಳ್ಳುವರ್‌ ಅವರ ಕೆಲವು ಪದ್ಯಗಳನ್ನು ರಜನಿಕಾಂತ್‌ ಉದ್ಧರಿಸಿದ್ದಾರೆ. 

ರಾಜಕಾರಣ ಸೇರುವುದಾಗಿ 2017ರಲ್ಲಿ ರಜನಿಕಾಂತ್‌ ಘೋಷಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಬಿಜೆಪಿ ಜತೆ ಸೇರುವುದಿಲ್ಲ ಎಂದು ಸ್ಪಷ್ಟವಾಗಿ ಅವರು ಹೇಳಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಲಿದೆ.

ಇದನ್ನೂ ಓದಿ: ತಿರುವಳ್ಳುವರ್‌ ಪ್ರತಿಮೆಗೆ ಸೆಗಣಿ ಬಳಿದು ಅಪಮಾನ

ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಸುವರ್ಣ ಮಹೋತ್ಸವ ತಾರೆ’ ಎಂದು ರಜನಿಕಾಂತ್‌ ಅವರನ್ನು ಗೌರವಿಸುವುದಾಗಿ ಕೇಂದ್ರ ಸರ್ಕಾರ ವಾರದ ಹಿಂದೆ ಘೋಷಿಸಿತ್ತು. ಅವರನ್ನು ಓಲೈಸುವ ಕ್ರಮ ಎಂದೇ ಇದನ್ನು ವಿಶ್ಲೇಷಿಸಲಾಗಿತ್ತು. 

ತಿರುವಳ್ಳುವರ್‌ಗೆ ಖಾವಿ ವಸ್ತ್ರ ತೊಡಿಸಿದ ಚಿತ್ರವನ್ನು ಬಿಜೆಪಿಯ ತಮಿಳುನಾಡು ಘಟಕವು ಇತ್ತೀಚೆಗೆ ಪ್ರಕಟಿಸಿತ್ತು. ಡಿಎಂಕೆ ಮತ್ತು ಇತರ ವಿರೋಧ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್‌, ಮಾಧ್ಯಮವು ಗಮನ ಹರಿಸಬೇಕಾದ ಜನರಿಗೆ ಸಂಬಂಧಿಸಿದ ಹಲವು ವಿಚಾರಗಳಿವೆ. ಆದರೆ, ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು.

ಸ್ಪರ್ಧೆ ಖಚಿತ

2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಮಾಧ್ಯಮಗೋಷ್ಠಿಯಲ್ಲಿ ರಜನಿಕಾಂತ್‌ ಘೋಷಿಸಿದ್ದಾರೆ. ತಮಿಳುನಾಡಿನಲ್ಲಿ ಸ್ಥಿರ ಮತ್ತು ಪ್ರಬಲ ರಾಜಕೀಯ ನಾಯಕತ್ವದ ಕೊರತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಮತ್ತೆ ಸ್ಪಷ್ಟನೆ

ಬಿಜೆಪಿ ತಮಗೂ ಕೇಸರಿ ಬಣ್ಣ ಬಳಿಯಲು ಯತ್ನಿಸುತ್ತಿದೆ ಎಂದು ರಜನಿಕಾಂತ್‌ ಹೇಳಿದ್ದು ಭಾರಿ ಚರ್ಚೆ ಹುಟ್ಟುಹಾಕಿತು. ಪರಿಣಾಮವಾಗಿ, ಕೆಲವೇ ತಾಸುಗಳಲ್ಲಿ ಮತೊಮ್ಮೆ ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಅಥವಾ ಕೇಂದ್ರದಲ್ಲಿ ಆಡಳಿತದಲ್ಲಿರುವ ಯಾವುದೇ ಪಕ್ಷದ ಜತೆ ಸೇರುವುದಿಲ್ಲ ಎಂದು ಹೇಳಿದರು.

‘ನಾನು ಬಿಜೆಪಿಯವನು ಎಂದು ಬಿಂಬಿಸಲು ಅವರು ಯತ್ನಿಸುತ್ತಿದ್ದಾರೆ. ಅದು ಸತ್ಯವಲ್ಲ’ ಎಂದು ಹೇಳಿದರು. ‘ಅವರು’ ಎಂದರೆ ಯಾರು ಎಂಬ ಪ್ರಶ್ನೆಗೆ ರಜನಿಕಾಂತ್‌ ಉತ್ತರಿಸಲಿಲ್ಲ. 

ಪ್ರತಿಕ್ರಿಯಿಸಿ (+)