ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆಯಲ್ಲಿ ರಾಮ ಮಂದಿರ: ವಕೀಲ ಪರಾಶರನ್‌ ನಿವಾಸವೇ ಟ್ರಸ್ಟ್‌ ಕಚೇರಿ

ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಟ್ರಸ್ಟ್‌ನ ನೋಂದಣಿ ವಿಳಾಸ
Last Updated 5 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಬಾಬರಿ ಮಸೀದಿ– ರಾಮಜನ್ಮಭೂಮಿ ನಿವೇಶನ ವಿವಾದ ಕುರಿತು ರಾಮ ಲಲ್ಲಾ ವಿರಾಜಮಾನ್‌ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಪರಾಶರನ್‌ ಅವರ ನಿವಾಸವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಕಚೇರಿಯನ್ನಾಗಿ ಮಾಡಲಾಗಿದೆ.

ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಟ್ರಸ್ಟ್‌ ನೋಂದಣಿ ವಿಳಾಸವು ಆರ್‌–20, ಗ್ರೇಟರ್‌ ಕೈಲಾಶ್‌ ಪಾರ್ಟ್‌–1, ನವದೆಹಲಿ, 110048 ಎಂದು ತಿಳಿಸಲಾಗಿದೆ. ಸುಪ್ರೀಂ ಕೋರ್ಟ್‌ ವಕೀಲರ ಸಂಘದ ವೆಬ್‌ಸೈಟ್‌ ಪ್ರಕಾರಪರಾಶರನ್‌ ಅವರ ನಿವಾಸದ ವಿಳಾಸ ಇದಾಗಿದೆ.

ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಅವರು ಹಿಂದೂ ಪಕ್ಷಗಾರರಿಗೆ ಪ್ರಮುಖ ಸಲಹೆಗಾರರಾಗಿದ್ದರು. ರಾಮ ಲಲ್ಲಾ ವಿರಾಜಮಾನ್‌ ಪರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ಇದರಿಂದಾಗಿಯೇ ವಿವಾದಿತ ಭೂಮಿಯನ್ನು ಸಂಪೂರ್ಣವಾಗಿ ರಾಮ ಮಂದಿರ ನಿರ್ಮಾಣಕ್ಕೆ ನೀಡಲಾಯಿತು.

92 ವರ್ಷ ವಯಸ್ಸಿನ ಪರಾಶರನ್‌ ಅವರು, ‘ಪ್ರಕರಣದ ವಿಚಾರಣೆಯನ್ನು ನಿಗದಿತ ಸಮಯದಲ್ಲಿ ನಡೆಸಿ ಸೂಕ್ತ ನ್ಯಾಯ ನೀಡಬೇಕು. ತಾವು ಸಾಯುವ ಮೊದಲು ಈ ಪ್ರಕರಣ ಇತ್ಯರ್ಥವಾಗಬೇಕು. ಇದು ತಮ್ಮ ಕೊನೆಯ ಆಸೆ’ ಎಂದು ಹೇಳಿದ್ದರು.

‘ಆಯೋಗದ ಒಪ್ಪಿಗೆ ಅಗತ್ಯವಿಲ್ಲ’: ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ ರಚಿಸಿ ಪ್ರಕಟಿಸಿರುವುದಕ್ಕೆ ಚುನಾವಣಾ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಆಯೋಗ ಬುಧವಾರ ಹೇಳಿದೆ.

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಟ್ರಸ್ಟ್‌ ಘೋಷಣೆಗೆ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಆಯೋಗದ ವಕ್ತಾರರು, ಇದರ ಅಗತ್ಯವಿಲ್ಲ ಎಂದುಸ್ಪಷ್ಟಪಡಿಸಿದ್ದಾರೆ.

ದಲಿತರೊಬ್ಬರು ಸೇರಿ 15 ಮಂದಿ ಟ್ರಸ್ಟಿಗಳು: ಶಾ

‘ರಾಮ ಮಂದಿರ ನಿರ್ಮಾಣಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್‌ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಸೇರಿದಂತೆ 15 ಟ್ರಸ್ಟಿಗಳಿರಲಿದ್ದಾರೆ’ ಎಂದು ಗೃಹ ಸಚಿವ ಅಮಿತ್‌ ಶಾ ಬುಧವಾರ ಹೇಳಿದ್ದಾರೆ.

ಟ್ರಸ್ಟ್‌ ರಚನೆ ಕುರಿತು ಪ್ರಧಾನಿ ಮೋದಿ ಪ್ರಕಟಿಸಿದ ನಂತರ ಶಾ ಈ ಹೇಳಿಕೆ ನೀಡಿದ್ದಾರೆ.

‘ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಅಭೂತಪೂರ್ವ ನಿರ್ಧಾರ ಪ್ರಕಟಿಸಿದ್ದಾರೆ’ ಎಂದು ಅವರನ್ನು ಶಾ ಅಭಿನಂದಿಸಿದ್ದಾರೆ.

ಭೂಮಿ ನೀಡಿದ್ದರೆ ಮತ್ತೊಂದು ಮಂದಿರ ನಿರ್ಮಾಣ: ಶಿಯಾ

ಲಖನೌ: ಸುನ್ನಿ ಕೇಂದ್ರೀಯ ವಕ್ಫ್‌ ಮಂಡಳಿಗೆ ನೀಡಿರುವ ಐದು ಎಕರೆ ಭೂಮಿಯನ್ನು ತಮಗೆ ನೀಡಿದ್ದರೆ, ಅಯೋಧ್ಯೆಯಲ್ಲಿ ಮತ್ತೊಂದು ರಾಮ ಮಂದಿರವನ್ನು ನಿರ್ಮಿಸಿತ್ತಿದ್ದೆವು ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್‌ ಮಂಡಳಿ ಬುಧವಾರ ಹೇಳಿದೆ.

‘ನಮಗೆ ಭೂಮಿ ದೊರೆತಿದ್ದರೆ, ಅಲ್ಲಿ ಮತ್ತೊಂದು ರಾಮ ಮಂದಿರ ನಿರ್ಮಿಸುತ್ತಿದ್ದೆವು’ ಎಂದು ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಹೇಳಿದ್ದಾರೆ.

‘ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಹಿಂದೂ ಸಮುದಾಯ ಪಡೆಯಲಿದೆ. ರಾಮ ಮಂದಿರದ ಬಳಿಯ ಮಸೀದಿ ನಿರ್ಮಿಸಿದ್ದು ಶಿಯಾ ಸಮುದಾಯದವರಾಗಿದ್ದರೂ, ಭೂಮಿ ಸುನ್ನಿ ಮಂಡಳಿಗೆ ಹೋಗಿದೆ. ಈ ಬಗ್ಗೆ ಎಂದಿಗೂ ಧ್ವನಿ ಎತ್ತದಿರುವ ಶಿಯಾ ಸಮುದಾಯದವರಿಂದ ದೊಡ್ಡ ತಪ್ಪಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT