ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಬಾರಿಗೆ ಆರ್‌ಬಿಐ ಬಡ್ಡಿ ದರ ಕಡಿತ

ಗೃಹ, ವಾಹನ ಖರೀದಿ, ಕಾರ್ಪೊರೇಟ್‌ ವಲಯದ ಸಾಲ ಅಗ್ಗ ನಿರೀಕ್ಷೆ
Last Updated 4 ಏಪ್ರಿಲ್ 2019, 20:04 IST
ಅಕ್ಷರ ಗಾತ್ರ

ಮುಂಬೈ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಸತತ ಎರಡನೆ ಬಾರಿಗೆ ತನ್ನ ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಕಡಿತಗೊಳಿಸಿದೆ.

ರೆಪೊ ಬಡ್ಡಿ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿ ಶೇ 6ಕ್ಕೆ ಇಳಿಸಿರುವುದರಿಂದ ಗೃಹ, ವಾಹನ, ವೈಯಕ್ತಿಕ ಮತ್ತು ಕಾರ್ಪೊರೇಟ್‌ ವಲಯದ ಸಾಲಗಳ ಬಡ್ಡಿ ದರ, ತಿಂಗಳ ಸಮಾನ ಕಂತು (ಇಎಂಐ) ಕಡಿಮೆಯಾಗುವ ಸಾಧ್ಯತೆ ಇದೆ. ಬ್ಯಾಂಕ್‌ಗಳು ಬಡ್ಡಿ ದರ ಕಡಿತದ ಲಾಭವನ್ನು ತ್ವರಿತವಾಗಿ ಗ್ರಾಹಕರಿಗೆ ವರ್ಗಾಯಿಸಬೇಕು ಎಂದೂ ಆರ್‌ಬಿಐ ಸೂಚಿಸಿದೆ.

ಹಣದುಬ್ಬರ ಕಡಿಮೆ ಆಗಿರುವುದರಿಂದ ಕೇಂದ್ರೀಯ ಬ್ಯಾಂಕ್‌ ಈ ನಿರ್ಧಾರಕ್ಕೆ ಬಂದಿದೆ. ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುವುದು ಈಗ ಅಗ್ಗವಾಗಲಿದೆ. ಬ್ಯಾಂಕ್‌ಗಳು ಇದರ ಲಾಭವನ್ನು ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ ವಲಯಕ್ಕೆ ವರ್ಗಾಯಿಸಲಿವೆ.

ಆದರೆ, ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರ ಒತ್ತಾಯದ ಹೊರತಾಗಿಯೂ ಬಡ್ಡಿ ದರ ಕಡಿತದ ಪ್ರಯೋಜನವನ್ನು ತಕ್ಷಣಕ್ಕೆ ಗ್ರಾಹಕರಿಗೆ ವರ್ಗಾಯಿಸುವ ಬಗ್ಗೆ ಬ್ಯಾಂಕ್‌ಗಳಿಂದ ಯಾವುದೇ ಬದ್ಧತೆ ಪ್ರಕಟವಾಗಿಲ್ಲ.

‘ಹಣದುಬ್ಬರವನ್ನು ಶೇ 4ರ ಹಿತಕರ ಮಟ್ಟದಲ್ಲಿ ಕಾಯ್ದುಕೊಳ್ಳಲು ಮತ್ತು ಆರ್ಥಿಕ ವೃದ್ಧಿಗೆ ಬೆಂಬಲ ನೀಡಲು ಈ ನಿರ್ಧಾರಕ್ಕೆ ಬರಲಾಗಿದೆ. ಮಂದಗತಿಯಲ್ಲಿ ಇರುವ ಖಾಸಗಿ ಬಂಡವಾಳ ಹೂಡಿಕೆ ಪ್ರಮಾಣ ಉತ್ತೇಜಿಸಿ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಅಗತ್ಯ ಇದೆ’ ಎಂದು ದಾಸ್‌ ಹೇಳಿದ್ದಾರೆ.

ಆರ್ಥಿಕ ವೃದ್ಧಿ ದರ ಕಡಿತ: 2019–20ನೆ ಹಣಕಾಸು ವರ್ಷದಲ್ಲಿನ ಆರ್ಥಿಕ ವೃದ್ಧಿ ದರವನ್ನು ಫೆಬ್ರುವರಿಯಲ್ಲಿ ಅಂದಾಜಿಸಿದ್ದ ಶೇ 7.4ಕ್ಕಿಂತ ಶೇ 7.2ಕ್ಕೆ ಇಳಿಸಲಾಗಿದೆ.

ಮೊದಲಾರ್ಧದಲ್ಲಿ ಶೇ 6.8 ರಿಂದ ಶೇ 7.1 ಮತ್ತು ದ್ವಿತೀಯಾರ್ಧದಲ್ಲಿ ಶೇ 7.3ರಿಂದ ಶೇ 7.4ರಷ್ಟು ಜಿಡಿಪಿ ವೃದ್ಧಿ ಸಾಧ್ಯವಾಗಲಿದೆ ಎಂದು ಅಂದಾಜಿಸಿದೆ.

ಶಕ್ತಿಕಾಂತ್‌ ದಾಸ್‌ ಅವರು ಅಧಿಕಾರವಹಿಸಿಕೊಂಡ ನಂತರದ ಎರಡನೆ ದ್ವೈಮಾಸಿಕ ಹಣಕಾಸು ಪರಾಮರ್ಶೆ ಇದಾಗಿದೆ. ಹಣಕಾಸು ನೀತಿ ಸಮಿತಿಯ (ಎಂಪಿಸಿ)ಆರು ಸದಸ್ಯರಲ್ಲಿ ನಾಲ್ವರು ಬಡ್ಡಿ ದರ ಕಡಿತ ಬೆಂಬಲಿಸಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಬೆಂಬಲ ನೀಡುವ ಕ್ರಮಗಳು, ಕೆಲ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕೃಷಿ ಸಾಲ ಮನ್ನಾ ನಿರ್ಧಾರಗಳು, ಕನಿಷ್ಠ ಬೆಂಬಲ ಬೆಲೆ, ನೇರ ತೆರಿಗೆ ಸಂಗ್ರಹದಲ್ಲಿನ ಕುಸಿತ ಮುಂತಾದವು ವಿತ್ತೀಯ ಕೊರತೆ ಹೆಚ್ಚಲು ಕಾರಣವಾಗಿವೆ ಎಂದು ಆರ್‌ಬಿಐ ತಿಳಿಸಿದೆ.

‘ಶೀಘ್ರವೇ ಪರಿಷ್ಕೃತ ಸುತ್ತೋಲೆ’
‘ಸಾಲ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಷ್ಕೃತ ಸುತ್ತೋಲೆ ಹೊರಡಿಸಲಾಗುವುದು’ ಎಂದು ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

‘ಕಠಿಣ ಸ್ವರೂಪದ ‘ಫೆಬ್ರುವರಿ 12ರ ಸುತ್ತೋಲೆ’ಯನ್ನು ರದ್ದುಪಡಿಸಿರುವ ಸುಪ್ರೀಂಕೋರ್ಟ್‌ನ ತೀರ್ಪಿನಿಂದಾಗಿ ಆರ್‌ಬಿಐನ ಅಧಿಕಾರಕ್ಕೆ ಧಕ್ಕೆ ಒದಗಿಲ್ಲ. ಅಧಿಕಾರವನ್ನು ನಿರ್ದಿಷ್ಟ ಸ್ವರೂಪದಲ್ಲಿ ಬಳಸಿಲ್ಲ ಎನ್ನುವುದು ಕೋರ್ಟ್‌ನ ವಿಶ್ಲೇಷಣೆಯಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಹೊಸ ಸುತ್ತೋಲೆ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ವಲಯದ ಒತ್ತಾಯ: ಬಡ್ಡಿ ದರ ಕಡಿತ ನಿರ್ಧಾರವು ಮನೆಗಳ ಮಾರಾಟ ಹೆಚ್ಚಿಸಲಿದ್ದು, ರಿಯಲ್‌ ಎಸ್ಟೇಟ್‌ ವಲಯದಲ್ಲಿ ಉತ್ಸಾಹ ಮೂಡಿಸಲಿದೆ. ಬ್ಯಾಂಕ್‌ಗಳು ಬಡ್ಡಿ ದರ ಕಡಿತದ ಲಾಭವನ್ನು ಕಟ್ಟಡ ನಿರ್ಮಾಣಗಾರರು ಮತ್ತು ಖರೀದಿದಾರರಿಗೆ ವರ್ಗಾಯಿಸಬೇಕು ಎಂದು ರಿಯಲ್‌ ಎಸ್ಟೇಟ್‌ ವಲಯವು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT