ಮಂಗಳವಾರ, ಮೇ 18, 2021
28 °C

ವಿದೇಶಿ ದೇಣಿಗೆ ನಿರಾಕರಣೆ ಜಟಾಪಟಿ: ಕೇಂದ್ರದ ವಿರುದ್ಧ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇರಳ ಪ್ರವಾಹ ಪರಿಹಾರದ ಭಾಗವಾಗಿ ವಿವಿಧ ದೇಶಗಳು ಘೋಷಿಸಿದ್ದ ದೇಣಿಗೆಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ‘ನಮ್ಮ ಸಮಸ್ಯೆಯನ್ನು ನಮ್ಮ ಸಾಮರ್ಥ್ಯದಿಂದಲೇ ಸರಿಪಡಿಸಿಕೊಳ್ಳುತ್ತೇವೆ’ ಎಂದು ಕೇಂದ್ರ ಹೇಳಿದೆ. ಕೇಂದ್ರದ ಈ ನಿಲುವಿನ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಮೋದಿಗೆ ನಾಚಿಕೆಯಾಗಬೇಕು: ಎಸ್.ಸುಧಾಕರ್ ರೆಡ್ಡಿ

‘ಗುಜರಾತ್‌ನಲ್ಲಿ ಭೂಕಂಪವಾಗಿದ್ದಾಗ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿದೇಶಿ ನೆರವನ್ನು ಸ್ವೀಕರಿಸಿದ್ದರು. ಆದರೆ ಇಂದು ಕೇರಳಕ್ಕೆ ವಿದೇಶಿ ನೆರವನ್ನು ನಿರಾಕರಿಸುತ್ತಿರುವ ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು’ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಳೆಯಿಂದ ತತ್ತರಿಸಿರುವ ಕೇರಳದಲ್ಲಿ ₹ 20 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಅಷ್ಟೂ ಹಣವನ್ನೇನು ಅವರು ಕೇಳುತ್ತಿಲ್ಲ. ಕೇವಲ ₹ 2,600 ಕೋಟಿ ನೀಡಿ ಎನ್ನುತ್ತಿದ್ದಾರೆ. ಅದನ್ನು ತಕ್ಷಣವೇ ಕೊಡಿ. ಆಗ ವಿದೇಶಿ ನೆರವಿನ ಅಗತ್ಯವೇ ಇರುವುದಿಲ್ಲ. ‘ನಮ್ಮ ದೇಶದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ’ ಎಂದು ನಂತರ ಹೇಳಿಕೆ ನೀಡಿ’ ಎಂದು ಸುಧಾಕರ್ ಕುಟುಕಿದ್ದಾರೆ.

‘ಹಣ ನೀಡಿ ಎಂದು ನಾವೇನು ಯುಎಇಯನ್ನು ಕೇಳಿಕೊಂಡಿರಲಿಲ್ಲ. ಅವರೇ ₹ 700 ಕೋಟಿ ದೇಣಿಗೆ ಘೋಷಿಸಿದರು. ಅದನ್ನು ಸ್ವೀಕರಿಸಿದರೆ ತನ್ನ ಘನತೆಗೆ ಧಕ್ಕೆಯಾಗುತ್ತದೆ ಎಂಬಂತೆ ಸರ್ಕಾರ ಅದನ್ನು ನಿರಾಕರಿಸಿದೆ. ಕೇಂದ್ರ ಸರ್ಕಾರವೂ ಕೊಡುತ್ತಿಲ್ಲ, ಬೇರೆಯವರು ಕೊಡಲೂ ಬಿಡುತ್ತಿಲ್ಲ’ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. 

‘ಪ್ರಕೃತಿ ವಿಕೋಪಗಳ ಸಂದರ್ಭ ದಲ್ಲಿ ವಿದೇಶಗಳಿಂದ ಹಣಕಾಸು ನೆರವು ಪಡೆಯದೇ ಇರುವ ನೀತಿಯನ್ನು ಹಿಂದಿನ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅನುಷ್ಠಾನಕ್ಕೆ ತಂದಿದ್ದರು. 2004ರಲ್ಲಿ ಸುನಾಮಿ ಸಂಭವಿಸಿದ್ದಾಗ ಅವರು ವಿದೇಶಿ ದೇಣಿಗೆಯನ್ನು ನಿರಾಕರಿಸಿದ್ದರು. 14 ವರ್ಷಗಳ ಹಿಂದಿನ ಆ ನೀತಿಯನ್ನೇ ನಾವು ಈಗ ಪಾಲಿಸುತ್ತಿದ್ದೇವೆ’ ಎಂದು ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ಅವರು ಹೇಳಿದ್ದಾರೆ.

ನೆರವು ಪಡೆಯಬಹುದು: ಯುಪಿಎ ನೀತಿ

ವಿದೇಶಿ ದೇಣಿಗೆಯನ್ನು ಪಡೆಯಲು ಯಾವುದೇ ಅಡ್ಡಿಯಿಲ್ಲ ಎಂದು ಸುನಾಮಿ ದುರಂತದ ಬಗ್ಗೆ ಯುಪಿಎ ಸರ್ಕಾರ 2005ರಲ್ಲಿ ಹೊರತಂದಿದ್ದ ವರದಿಯಲ್ಲಿ ವಿವರಿಸಲಾಗಿದೆ. 

ಸಹಾಯ ಪಡೆಯಲು ಅಡ್ಡಿ ಇಲ್ಲ: ಎನ್‌ಡಿಎ

ವಿದೇಶಿ ದೇಣಿಗೆ ಪಡೆಯಲು ಎನ್‌ಡಿಎ ಸರ್ಕಾರವೇ ರೂಪಿಸಿರುವ ರಾಷ್ಟ್ರೀಯ ಪ್ರಕೃತಿ ವಿಕೋಪ ನೀತಿ-2016ರಲ್ಲೂ ಅವಕಾಶವಿದೆ.

* ಕೇಂದ್ರ ಸರ್ಕಾರಕ್ಕಿಂತ ಯುಎಇ ಸರ್ಕಾರ ಹೆಚ್ಚು ಪರಿಹಾರ ಘೋಷಿಸಿದೆ. ಇದರಿಂದ ಕೇಂದ್ರದ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಹೀಗಾಗಿಯೇ ವಿದೇಶಿ ನೆರವು ನಿರಾಕರಿಸಲಾಗಿದೆ
–ಎಸ್‌.ಸುಧಾಕರ್ ರೆಡ್ಡಿ, ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

* ವಿದೇಶಿ ದೇಣಿಗೆಯನ್ನು ಸ್ವೀಕರಿಸಲು ಯಾವುದೇ ಅಡ್ಡಿಗಳಿಲ್ಲ. 2016ರ ರಾಷ್ಟ್ರೀಯ ವಿಕೋಪ ನಿರ್ವಹಣಾ ನೀತಿಯಲ್ಲಿ ಎನ್‌ಡಿಎ ಸರ್ಕಾರವೇ ಅದನ್ನು ಸ್ಪಷ್ಟಪಡಿಸಿದೆ
–ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ

* ಜನರ ಸಮಸ್ಯೆಗಳನ್ನು ಪರಿಹರಿಸುವುದೇ ಎಲ್ಲ ಕಾನೂನುಗಳ ಉದ್ದೇಶ. ವಿದೇಶಿ ದೇಣಿಗೆ ಸ್ವೀಕರಿಸುವುದರಲ್ಲಿ ಕಾನೂನಿನ ತೊಡಕು ಇದ್ದರೆ, ತಕ್ಷಣವೇ ಅದನ್ನು ಸರಿಪಡಿಸಿ
–ಉಮ್ಮನ್ ಚಾಂಡಿ, ಕೇರಳ ಕಾಂಗ್ರೆಸ್ ನಾಯಕ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು