ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೋಕ್ಸಿಯ ಆ್ಯಂಟಿಗುವಾ ಪೌರತ್ವಕ್ಕೆ ಕುತ್ತು?

ಪಿಎನ್‌ಬಿ ಹಗರಣ ಆರೋಪಿಯ ಪೌರತ್ವ ವಾಪಸ್‌ ಪಡೆದು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ: ಗಸ್ಟೊನ್‌ ಬ್ರೌನ್‌
Last Updated 25 ಜೂನ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹ 13,400 ಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ಮೆಹುಲ್‌ ಚೋಕ್ಸಿಯ ಪೌರತ್ವವನ್ನು ಆ್ಯಂಟಿಗುವಾ ಸರ್ಕಾರ ರದ್ದುಪಡಿಸುವ ಸಾಧ್ಯತೆ ಇದೆ. ಆ ಪ್ರಕ್ರಿಯೆ ಮುಗಿಯುವವರೆಗೆ ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

‘ಚೋಕ್ಸಿ ಅವರ ಆ್ಯಂಟಿಗುವಾ ಪೌರತ್ವವನ್ನು ರದ್ದುಪಡಿಸುವುದಾಗಿ ಈಚೆಗೆ ಆ ರಾಷ್ಟ್ರದ ಪ್ರಧಾನಿ ಹೇಳಿಕೆ ನೀಡಿದ್ದಾರೆ. ಅದಾದ ನಂತರವೇ ಅವರನ್ನು ಭಾರತಕ್ಕೆ ಕರೆತಂದು ತನಿಖೆ ನಡೆಸಲು ಸಾಧ್ಯವಾಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಪೌರತ್ವ ರದ್ದುಪಡಿಸುವ ವಿಚಾರವಾಗಿ ಆ್ಯಂಟಿಗುವಾದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಚೋಕ್ಸಿ ಮತ್ತು ಅವರ ಜತೆಗಾರ ನೀರವ್‌ ಮೋದಿ ಅವರು ಪಿಎನ್‌ಬಿ ವಂಚನೆ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಕಳೆದ ವರ್ಷ ಬೆಳಕಿಗೆ ಬಂದಿದ್ದ ಈ ಹಗರಣವು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು.

ಆ್ಯಂಟಿಗುವಾದ ಪೌರತ್ವ ಪಡೆದಿದ್ದ ಚೋಕ್ಸಿ, ಪಿಎನ್‌ಬಿ ವಂಚನೆ ಹಗರಣ ಬಯಲಾಗುವ ಮುನ್ನಾದಿನ ಆ್ಯಂಟಿಗುವಾಕ್ಕೆ ಪರಾರಿಯಾಗಿದ್ದರು. ಚೋಕ್ಸಿ ಅವರ ಪೌರತ್ವವನ್ನು ರದ್ದುಗೊಳಿಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರವು ಆ್ಯಂಟಿಗುವಾ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ.

‘ಚೋಕ್ಸಿ ಅವರ ಪೌರತ್ವವನ್ನು ಶೀಘ್ರದಲ್ಲೇ ಹಿಂಪಡೆಯುವುದಾಗಿ ಪ್ರಧಾನಿ ಗಸ್ಟೊನ್‌ ಬ್ರೌನ್‌ ಅವರು ಹೇಳಿದ್ದಾರೆ’ ಎಂದು ಆ್ಯಂಟಿಗುವಾದ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ಆದರೆ, ‘ಆರೋಪಿಯಾಗಿದ್ದರೂ, ಕಾನೂನಿನ ಪ್ರಕಾರ ಹೋರಾಟ ನಡೆಸುವ ಅಧಿಕಾರ ಚೋಕ್ಸಿಗೆ ಇದೆ’ ಎಂದೂ ಬ್ರೌನ್‌ ಹೇಳಿದ್ದಾರೆ ಎಂದು ವರದಿಯಾಗಿದೆ.

‘ಆರ್ಥಿಕ ಅಪರಾಧಿಗಳಿಗೆ ರಕ್ಷಣೆ ಒದಗಿಸಲು ನಮ್ಮ ದೇಶ ಮುಂದಾಗುವುದಿಲ್ಲ. ಆದರೆ ಚೋಕ್ಸಿ ಅವರು ನ್ಯಾಯಾಲಯದ ಮೊರೆಹೋಗಿದ್ದಾರೆ. ತಮ್ಮ ವಾದವನ್ನು ಮಂಡಿಸುವ ಮೂಲಭೂತ ಹಕ್ಕು ಆರೋಪಿಗೂ ಇರುತ್ತದೆ. ಚೋಕ್ಸಿಗೂ ತನ್ನ ವಾದ ಮಂಡಿಸಲು ಅವಕಾಶ ನೀಡಲಾಗುವುದು ಎಂಬುದನ್ನು ನಾವು ಭಾರತ ಸರ್ಕಾರಕ್ಕೆ ತಿಳಿಸಿದ್ದೇವೆ. ಕಾನೂನು ಹೋರಾಟಗಳೆಲ್ಲವೂ ಮುಗಿದ ನಂತರ, ಅವರ ಪೌರತ್ವ ರದ್ದುಪಡಿಸಿ, ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂಬ ಭರವಸೆಯನ್ನು ನಾನು ನೀಡಬಲ್ಲೆ’ ಎಂದು ಬ್ರೌನ್‌ ಹೇಳಿದ್ದಾರೆ. ಚೋಕ್ಸಿ ಅವರ ಹಸ್ತಾಂತರ ಪ್ರಕ್ರಿಯೆಗೆ 2019ರ ಮಾರ್ಚ್‌ನಲ್ಲೇ ಚಾಲನೆ ನೀಡಲಾಗಿತ್ತು.

‘ಆ್ಯಂಟಿಗುವಾ ಸರ್ಕಾರವು ಚೋಕ್ಸಿ ಅವರ ಪೌರತ್ವ ರದ್ದತಿ ಕುರಿತ ಆಂತರಿಕ ಪ್ರಕ್ರಿಯೆ ಮುಗಿಸುವುದನ್ನು ನಾವು ಕಾಯುತ್ತಿದ್ದೇವೆ. ಇದಾದ ನಂತರವೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗುವುದು. ನಾವು ಸತತ ಸಂಪರ್ಕದಲ್ಲಿದ್ದೇವೆ. ಪೌರತ್ವ ರದ್ದುಮಾಡಿರುವ ಬಗ್ಗೆ ನಮಗಿನ್ನೂ ಅಧಿಕೃತ ಮಾಹಿತಿ ಬಂದಿಲ್ಲ’ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ವಿದೇಶಾಂಗ ಖಾತೆ ಸಚಿವ ಎಸ್‌. ಜೈಶಂಕರ್‌ ನಿರಾಕರಿಸಿದರು.

ವಂಚನೆಯ ಹಾದಿ

* ಸಿಟಿಜನ್‌ಶಿಪ್‌ ಬೈ ಇನ್ವೆಸ್ಟ್‌ಮೆಂಟ್‌ ಪ್ರೋಗ್ರಾಂ (ಸಿಐಪಿ) ಯೋಜನೆಯಡಿ 2017ರ ನವೆಂಬರ್‌ನಲ್ಲಿ ಚೋಕ್ಸಿ ಅವರು ಆ್ಯಂಟಿಗುವಾ ಮತ್ತು ಬಾರ್ಬಡಾ ದ್ವೀಪರಾಷ್ಟ್ರದ ಪೌರತ್ವ ಪಡೆದಿದ್ದರು

* ಸಿಪಿಐ ಯೋಜನೆಯಡಿ ಈ ದ್ವೀಪರಾಷ್ಟ್ರದಲ್ಲಿ ಕನಿಷ್ಠ 1 ಲಕ್ಷ ಡಾಲರ್‌ (ಸುಮಾರು ₹ 69 ಲಕ್ಷ) ಹೂಡಿಕೆ ಮಾಡುವ ಮೂಲಕ ದೇಶದ ಪೌರತ್ವ ಪಡೆಯಬಹುದು

* ಪಿಎನ್‌ಬಿ ವಂಚನೆ ಹಗರಣ ಬಯಲಾಗುವ ಹಿಂದಿನ ದಿನ, 2018ರ ಜನವರಿ 4ರಂದು ಅವರು ಭಾರತದಿಂದ ಪರಾರಿಯಾದರು

* ಜನವರಿ 15ರಂದು ಆ್ಯಂಟಿಗುವಾದಲ್ಲಿ ರಾಷ್ಟ್ರನಿಷ್ಠೆಯ ಪ್ರಮಾಣವಚನ ಸ್ವೀಕರಿಸಿದರು

* ಹಗರಣದ ಇನ್ನೊಬ್ಬ ಆರೋಪಿ ನೀರವ್‌ ಮೋದಿ ಲಂಡನ್‌ನಲ್ಲಿ ನೆಲೆಸಿದ್ದಾರೆ

* ‘ತನಿಖೆಯಿಂದ ತಪ್ಪಿಸಲು ಅಲ್ಲ, ಚಿಕಿತ್ಸೆಗಾಗಿ ಆ್ಯಂಟಿಗುವಾಗೆ ಬಂದಿದ್ದೇನೆ, ಚೇತರಿಸಿಕೊಂಡ ಕೂಡಲೇ ಭಾರತಕ್ಕೆ ಮರಳುತ್ತೇನೆ’ ಎಂದು ಇತ್ತೀಚೆಗೆ ಚೋಕ್ಸಿ ಹೇಳಿದ್ದರು

* ‘ಚೋಕ್ಸಿಯನ್ನು ಭಾರತಕ್ಕೆ ತರಲು ಅಗತ್ಯವಿದ್ದರೆ ಏರ್‌ ಆಂಬುಲೆನ್ಸ್‌ ನೀಡಲೂ ಸಿದ್ಧ’ ಎಂದು ಜಾರಿ ನಿರ್ದೇಶನಾಲಯವು ಬಾಂಬೆ ಹೈಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT