ಶನಿವಾರ, ಫೆಬ್ರವರಿ 27, 2021
19 °C

ಭಾರತ ಬಯಲು ಶೌಚಮುಕ್ತ: ಸಾಬರಮತಿಯಲ್ಲಿ ಪ್ರಧಾನಿ ಮೋದಿ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌ : ‘ಭಾರತ ಈಗ ಬಯಲು ಶೌಚಮುಕ್ತ ರಾಷ್ಟ್ರವಾಗಿದೆ. ‘ನಮ್ಮದು ಬಯಲುಶೌಚಮುಕ್ತ ಗ್ರಾಮ’ ಎಂದು ಭಾರತದ ಗ್ರಾಮಗಳು ತಾವಾಗಿಯೇ ಘೋಷಿಸಿಕೊಂಡಿವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮತ್ತು ಸ್ವಚ್ಛತೆಯ ಪ್ರತೀಕವಾಗಿದ್ದ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಸಂದರ್ಭದಲ್ಲಿ ಇದು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

ಮಹಾತ್ಮ ಗಾಂಧಿಯ 150ನೇ ಜನ್ಮದಿನದ ಅಂಗವಾಗಿ ಇಲ್ಲಿನ ಸಾಬರಮತಿ ಆಶ್ರಮದಲ್ಲಿ ಆಯೋಜಿಸಿದ್ದ ‘ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವಚ್ಛ ಭಾರತ’ ಅಭಿಯಾನದಿಂದ ಪ್ರೇರಣೆ ಪಡೆದು ದೇಶದ ಗ್ರಾಮೀಣ ಪ್ರದೇಶಗಳ ಜನರು ತಮ್ಮ ಗ್ರಾಮವನ್ನು ಬಯಲುಶೌಚದಿಂದ ಮುಕ್ತಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ನೈರ್ಮಲ್ಯಕ್ಕೆ ಸಂಬಂಧಿಸಿದಂಥ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಇದ್ದ ಹಿಂಜರಿಕೆಯು ಈಗ ಮಾಯವಾಗಿದೆ. ನೈರ್ಮಲ್ಯದ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಈಗ ಜನರ ಚಿಂತನಾ ಕ್ರಮವಾಗಿದೆ ಎಂದು ಮೋದಿ ವಿಶ್ಲೇಷಿಸಿದರು.

‘60 ತಿಂಗಳಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ನಾವು ದೇಶದ ಸುಮಾರು 60 ಕೋಟಿ ಜನರಿಗೆ ಶೌಚಾಲಯದ ಸೌಲಭ್ಯ ಒದಗಿಸಿದ್ದೇವೆ. ನಮ್ಮ ಈ ಯಶಸ್ಸನ್ನು ಕಂಡು ವಿಶ್ವವೇ ಬೆರಗಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛತಾ ಯೋಜನೆಯು 75 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ’ ಎಂದು ಮೋದಿ ಹೇಳಿದರು.

ಪ್ರಧಾನಿ ಹೇಳಿದ್ದು

* ಇದೊಂದು ಮೈಲಿಗಲ್ಲು, ನಾವು ಸಾಗಬೇಕಾದ ಹಾದಿ ಇನ್ನೂ ದೂರವಿದೆ. ಅಭಿಯಾನ ಮುಂದುವರಿಯಬೇಕು

* 2022ರ ವೇಳೆಗೆ ಒಂದೇ ಬಾರಿ ಬಳಸಿ ಎಸೆಯ ಬಹುದಾದ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ
ವಾಗಿ ಸ್ಥಗಿತಗೊಳಿಸಬೇಕು

* ಪರಿಸರ ಮತ್ತು ಪ್ರಾಣಿಗಳು ಗಾಂಧಿಗೆ ಪ್ರಿಯ ವಿಷಯ ಗಳಾಗಿದ್ದವು. ಇವುಗಳ ಉಳಿವಿಗೆ ಪ್ಲಾಸ್ಟಿಕ್‌ ನಿಷೇಧ ಅತ್ಯಗತ್ಯ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು