ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಗೆ ನಾರಿ: ದುರ್ಗಮ ದಾರಿ

ಶಬರಿಮಲೆ ದೇವಾಲಯ ಪ್ರವೇಶಿಸುವ ಮಹಿಳೆಯರ ತಡೆಯಲು ಭಕ್ತರ ಪಣ
Last Updated 17 ಅಕ್ಟೋಬರ್ 2018, 2:00 IST
ಅಕ್ಷರ ಗಾತ್ರ

ತಿರುವನಂತಪುರ:ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಸಂಜೆ ಐದು ಗಂಟೆಗೆ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತಿಂಗಳ ಪೂಜೆಗಾಗಿ ತೆರೆಯಲಿದೆ.

ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಮಂಗಳವಾರ ನಡೆಸಿದ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಪ್ರವೇಶಾವಕಾಶದ ವಿರುದ್ಧ ಪ್ರತಿಭಟನೆಗಳು, ಬೆದರಿಕೆಗಳು ಮತ್ತು ರಾಜಕೀಯ ಮೇಲಾಟದ ನಡುವೆಯೇ ಶಬರಿಮಲೆ ಸುತ್ತಲಿನ ಪ್ರದೇಶದಲ್ಲಿ ಬಿಗುವಿನ ವಾತಾವರಣ ನೆಲೆಸಿದೆ.

ಧಾರ್ಮಿಕವಾಗಿ ಅತ್ಯಂತ ಸಂವೇದನಾಶೀಲವಾದ ವಿಚಾರವನ್ನು ನಿಭಾಯಿಸುವ ಕಠಿಣ ಸವಾಲನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಎದುರಿಸುತ್ತಿದ್ದಾರೆ. ಇಡೀ ವಿವಾದ ರಾಜಕೀಯ ಬಣ್ಣವನ್ನೂ ಪಡೆದುಕೊಂಡಿರುವುದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ತಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಪಿಣರಾಯಿ ಕೊಟ್ಟಿದ್ದಾರೆ.

**

ಮಾತುಕತೆ ಯಾಕೆ ವಿಫಲ?

ಶಬರಿಮಲೆ ದೇವಸ್ಥಾನದ ಆಡಳಿತ ನೋಡಿಕೊಳ್ಳುವ ಟಿಡಿಬಿ ಮಂಗಳವಾರ ಸಭೆ ನಡೆಸಿತ್ತು. ಪಂದಳಂ ರಾಜಕುಟುಂಬದ ಪ್ರತಿನಿಧಿಗಳು, ಅರ್ಚಕರು ಮತ್ತು ಭಕ್ತರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ತಕ್ಷಣವೇ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಎಲ್ಲರೂ ಹಟ ಹಿಡಿದರು. ಆದರೆ ಟಿಡಿಬಿ ಇದಕ್ಕೆ ಒಪ್ಪಿಲ್ಲ.

* ಮಹಿಳೆಯರಿಗೆ ಮುಕ್ತ ಪ್ರವೇಶ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಇದೇ ಮೊದಲಿಗೆ ಬುಧವಾರ ಸಂಜೆ ದೇವಾಲಯದ ಬಾಗಿಲು ತೆರೆಯಲಿದೆ

* ಕೆಲವು ಮಹಿಳೆಯರು ದೇವಸ್ಥಾನ ಪ್ರವೇಶಿಸುವುದಾಗಿ ಹೇಳಿದ್ದಾರೆ. ಈ ಹೇಳಿಕೆಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ

* ದೇವಾಲಯದಿಂದ 20 ಕಿ.ಮೀ. ದೂರದ ನಿಲಕ್ಕಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ

* ಶಬರಿಮಲೆಯ ತಳದಲ್ಲಿರುವ ಪಂಪಾ ಶಿಬಿರದಲ್ಲಿದ್ದ ‘ಋತುಸ್ರಾವದ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ’ ಎಂಬ ಫಲಕವನ್ನು ಟಿಡಿಬಿ ಮರೆಮಾಚಿದೆ

* ಸೋಮವಾರ (ಇದೇ 22) ದೇವಾಲಯದ ಬಾಗಿಲು ಮುಚ್ಚಲಾಗುವುದು

**

ಭಕ್ತೆಯರು ಸಜ್ಜು

ದೇವಾಲಯಕ್ಕಿಂತ 20 ಕಿ.ಮೀ. ದೂರದ ನಿಲಕ್ಕಲ್‌ನಲ್ಲಿ ನಿಂತಿರುವ ನೂರಾರು ಅಯ್ಯಪ್ಪ ಭಕ್ತೆಯರು ಶಬರಿಮಲೆಯತ್ತ ಸಾಗುವ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ. ಋತುಸ್ರಾವ ವಯಸ್ಸಿನ ಮಹಿಳೆಯರು ವಾಹನದಲ್ಲಿ ಇದ್ದರೆ ಅವರನ್ನು ವಾಪಸ್‌ ಕಳುಹಿಸುತ್ತಿದ್ದಾರೆ.

*

ಎಲ್ಲರಿಗೂ ರಕ್ಷಣೆ ಕೊಡಲಾಗುವುದು. ಸುಪ್ರೀಂ ಕೋರ್ಟ್‌ ಹೇಳಿದ್ದನ್ನು ಪಾಲಿಸುತ್ತೇವೆ. ಶಬರಿಮಲೆಯ ಹೆಸರಿನಲ್ಲಿ ಹಿಂಸಾಚಾರಕ್ಕೆ ಅವಕಾಶ ಕೊಡುವುದಿಲ್ಲ.

–ಪಿಣರಾಯಿ ವಿಜಯನ್‌, ಕೇರಳ ಸಿ.ಎಂ

*

ತಿಂಗಳ ಪೂಜೆಗಾಗಿ ಬುಧವಾರ ಸಂಜೆ ದೇವಾಲಯದ ಬಾಗಿಲು ತೆರೆದಾಗ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಅಲ್ಲಿ ಹೋಗಿ ಪೂಜೆ ಸಲ್ಲಿಸಲು ಅವಕಾಶ ಕೊಡುವುದಿಲ್ಲ.

–ಪ್ರತಿಭಟನಾನಿರತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT