ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರ ಬಂಧನ: ದಾಳಿ ಮಾಡಿದ ಪೊಲೀಸರಿಗೆ ಬಿಸಿ ಚಹಾದ ಆತಿಥ್ಯ!

Last Updated 31 ಆಗಸ್ಟ್ 2018, 18:31 IST
ಅಕ್ಷರ ಗಾತ್ರ

ಮುಂಬೈ: ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪುಣೆಯ ಪೊಲೀಸರು ಬಂಧಿಸಿದ್ದ ಮಾನವ ಹಕ್ಕುಗಳ ಹೋರಾಟಗಾರ ವರ್ನಾನ್ ಗೊನ್ಸಾಲ್ವೆಸ್‌ ಅವರ ಪುತ್ರ ಸಾಗರ್‌ ಅಬ್ರಾಹಂ ಗೊನ್ಸಾಲ್ವೆಸ್‌ ತಮ್ಮ ಫೇಸ್‌ಬುಕ್‌ನಲ್ಲಿ ಖಾತೆಯಲ್ಲಿ ಅಸಹಾಯಕ ಸ್ಥಿತಿಯನ್ನು ತೋಡಿಕೊಂಡಿದ್ದಾರೆ. ಅದರ ಪೂರ್ಣ ಪರಿಪಾಠ ಇಲ್ಲಿದೆ.

ಆಗಸ್ಟ್ ನಮ್ಮ ಪಾಳಿಗೆ ಕರಾಳ ತಿಂಗಳ. ಸರಿಯಾಗಿ ಹತ್ತು ವರ್ಷಗಳ ತರುವಾಯ ಪೊಲೀಸರು ಮತ್ತೆ ಮುಂಬೈನ ನಮ್ಮ ಮನೆಯ ಬಾಗಿಲು ತಟ್ಟಿದರು.

ಆಗಸ್ಟ್‌ 28 ರಂದು ಬೆಳಿಗ್ಗೆ 6ಗಂಟೆಗೆ ಮನೆಯ ಕರೆಗಂಟೆ ಸದ್ದಾಯಿತು. ನೋಡಿದಾಗ...ಹತ್ತಕ್ಕೂ ಹೆಚ್ಚು ಪುಣೆಯ ಪೊಲೀಸರು ಬಾಗಿಲು ಬಳಿ ನಿಂತಿದ್ದರು. ಸ್ಥಳೀಯ ಪೊಲೀಸರೂ ಜತೆಗಿದ್ದರು.

ಮನೆಯನ್ನು ಜಾಲಾಡಿ, ಅಪ್ಪನನ್ನು ಬಂಧಿಸಿ ಕರೆದೊಯ್ಯಲು ಅವರು ಬಂದಿದ್ದರು. ಮೊಬೈಲ್‌ ಕಸಿದುಕೊಂಡರು. ಲ್ಯಾಂಡ್‌ಲೈನ್‌ ಫೋನ್‌ ಸಂಪರ್ಕ ಕಡಿತಗೊಳಿಸಿದರು. ಪರ್ಸನಲ್‌ ಕಂಪ್ಯೂಟರ್‌, ಸಿ.ಡಿ., ಪೆನ್‌ಡ್ರೈವ್‌ ಜಾಲಾಡಿದರು.

ಮನೆಯಲ್ಲಿದ್ದ ಕಪಾಟುಗಳಲ್ಲಿದ್ದ ಹಲವು ಪುಸ್ತಕಗಳನ್ನು ತಿರುವಿ ಹಾಕಿದರು. ಮಾವೊ, ನಕ್ಸಲ್‌ ಅಥವಾ ಮಾರ್ಕ್ಸ್‌ ಹೆಸರಿದ್ದ ಎಲ್ಲ ಪುಸ್ತಕಗಳನ್ನು ಸಾಕ್ಷಿಗಾಗಿ ತಮ್ಮೊಂದಿಗೆ ಕೊಂಡೊಯ್ದರು. ಸಾಮಾನ್ಯವಾಗಿ ಎಲ್ಲ ಗ್ರಂಥಾಲಯ ಮತ್ತು ಆನ್‌ಲೈನ್‌ನಲ್ಲಿ ಸುಲಭವಾಗಿ ಸಿಗುವ ಪುಸ್ತಕಗಳವು. ನಾನು ಖರೀದಿಸಿದ್ದ ಇ ಎಚ್‌ ಕಾರ್‌ ಅವರ ಬೊಲ್ಸ್‌ಶೆವಿಕ್‌ ರೆವಲ್ಯೂಷನ್‌ ಸಂಪುಟ–1 ಪುಸ್ತಕವನ್ನೂ ಕೊಂಡೊಯ್ದರು.

ಮಂಗಳವಾರ ಏಳು ತಾಸು ಪುರಾವೆಗಳಿಗಾಗಿ ಮನೆಯ ಮೂಲೆ, ಮೂಲೆಗಳನ್ನೂ ಜಾಲಾಡಿದರೆ, ಇನ್ನೂ ಕೆಲವು ಪೊಲೀಸರು ಮನೆಯ ಗೇಟ್‌ ಬಳಿ ಕಾವಲು ನಿಂತಿದ್ದರು. ಮಧ್ಯಾಹ್ನ 1.45ರವರೆಗೆ ನಮಗೆ ಮನೆಯಿಂದ ಹೊರ ಹೋಗಲು ಅವರಿಕಾಶ ನೀಡಲಿಲ್ಲ.

ಪೊಲೀಸರು ಅಪ್ಪ ಮತ್ತು ಅಮ್ಮನನ್ನು ನೂರೆಂಟು ಪ್ರಶ್ನೆ ಕೇಳುತ್ತಿದ್ದರು. ತಹರೇವಾರಿ ಪ್ರಶ್ನೆಗಳಿಗೆ ಅಪ್ಪ, ಅಮ್ಮ ಅಷ್ಟೇ ಸಹಜವಾಗಿ ಉತ್ತರಿಸುತ್ತಿದ್ದರು. ಅದನೆಲ್ಲ ನೋಡುತ್ತ ನಾನು ಅಸಹಾಯಕನಾಗಿ ನಿಂತಿದ್ದೆ.

ಎಲ್ಲ ತಲೆಬಿಸಿಯ ನಡುವೆಯೇ ಅಮ್ಮ ಬೇಸರಿಸಿಕೊಳ್ಳದೆ ಎಲ್ಲ ಪೊಲೀಸ್‌ ಸಿಬ್ಬಂದಿಗೂ ಬಿಸಿ, ಬಿಸಿ ಚಹಾ ತಯಾರಿಸಿಕೊಟ್ಟರು. ‘ಪೊಲೀಸರು ಕೂಡ ನಮ್ಮ ಅತಿಥಿಗಳು’ ಎಂದಳು.ಅಪ್ಪ ಸೌಜನ್ಯದಿಂದ ಅವರೊಂದಿಗೆ ವರ್ತಿಸುತ್ತಿದ್ದರು.

ಸರ್ವಶಕ್ತವಾದ ಸರ್ಕಾರ ಮತ್ತು ಅದರ ಆಡಳಿತ ಯಂತ್ರದ ವಿರುದ್ಧ ಅಸಹಾಯಕರಾದ ನಾವು ಏನೂ ಮಾಡುವಂತಿರಲಿಲ್ಲ. ಆಗಾಗ ನಗು ಚೆಲ್ಲುತ್ತ ಪೊಲೀಸರೊಂದಿಗೆ ಸಹಕರಿಸುವುದೊಂದನ್ನು ಬಿಟ್ಟು!
**
ಅತಿಥಿ ಸತ್ಕಾರ, ಆಶಾವಾದದ ಪಾಠ ಕಲಿಸಿದ ಕರಾಳ ಘಟನೆ!
2007ರ ಆಗಸ್ಟ್‌ ತಿಂಗಳಲ್ಲಿ ಹಲವಾರು ಸುಳ್ಳು ಆರೋಪಗಳ ಮೇಲೆ ನನ್ನ ಅಪ್ಪನನ್ನು ಬಂಧಿಸಲಾಗಿತ್ತು. ಅಂದು ಮಧ್ಯ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಪೊಲೀಸರು ಮನೆ ಜಾಲಾಡಿದ್ದರು. ನಾನಾಗ ಕೇವಲ 12ರ ಹರೆಯದ ಬಾಲಕ. ಸಹಕಾರ ನೀಡದಿದ್ದರೆ ಅಮ್ಮನನ್ನೂ ಬಂಧಿಸುವುದಾಗಿ ಪೊಲೀಸರು ಆವಾಜ್‌ ಹಾಕಿದ ಕಾರಣ ವಕೀಲರಾಗಿದ್ದುಕೊಂಡು ಅಮ್ಮ ಅಸಹಾಯಕಳಾಗಿದ್ದಳು.

ತನ್ನದಲ್ಲದ ತಪ್ಪಿಗೆ ಜೀವನದ ಅಮೂಲ್ಯ ಐದುವರೆ ವರ್ಷಗಳನ್ನು ಜೈಲಿನಲ್ಲಿ ಕಳೆದ ಅಪ್ಪ ಎಲ್ಲ ಆರೋಪಗಳಿಂದ ಮುಕ್ತರಾಗಿ ಹೊರ ಬಂದರು.
**
ಆಗಸ್ಟ್‌ ಎಂಬ ಅಶುಭ

ಸರಿ ಸುಮಾರು ಹತ್ತು ವರ್ಷಗಳ ನಂತರ ಮತ್ತೆ ಆಗಸ್ಟ್‌ ತಿಂಗಳಲ್ಲಿಯೇ ಮತ್ತದೇ ಪರಿಸ್ಥಿತಿ ಎದುರಾಗಿದೆ. ಆಗಸ್ಟ್ ತಿಂಗಳು ನಮ್ಮ ಕುಟುಂಬಕ್ಕೆ ಶುಭ ಶಕುನವಲ್ಲ! ಆಗ ಮಧ್ಯರಾತ್ರಿ ಮನೆಯ ಬಾಗಿಲನ್ನು ಬಡಿದ ಕಟಕಟ ಶಬ್ದ ಕೇಳಿಸಿತ್ತು. ಈ ಬಾರಿ ಮುಂಜಾನೆ ಮನೆಯ ಕರೆಗಂಟೆ ಬಾರಿಸಿತು.

ಅಪ್ಪನನ್ನು ಪೊಲೀಸರು ಕರೆದೊಯ್ಯುವಾಗ ಬಿಗಿಯಾಗಿ ತಬ್ಬಿಕೊಂಡು ಧೈರ್ಯ ತುಂಬಿದೆ. ಅಸಹಾಯಕತೆಯ ಹೊರತಾಗಿ ನನ್ನಲ್ಲಿ ಏನೂ ಇರಲಿಲ್ಲ. ‘ಏನೂ ಚಿಂತಿಸಬೇಡ. ಜೈಲಿನಲ್ಲಿ ಹಲವು ಸ್ನೇಹಿತರು ಸಿಗುತ್ತಾರೆ’ ಎಂದ ಅಪ್ಪ, ಪೊಲೀಸರೊಂದಿಗೆ ಹೆಜ್ಜೆ ಹಾಕಿದ.

ಮಂಗಳವಾರದ ಆ ಕರಾಳ ಘಟನೆ ಜೀವನದಲ್ಲಿ ನನಗೆ ಎರಡು ಹೊಸ ಪಾಠಗಳನ್ನು ಕಲಿಸಿದೆ. ಅತಿಥಿ ಸತ್ಕಾರ ಮತ್ತು ಆಶಾವಾದ!
**
ಇದನ್ನೂ ಓದಿರಿ
* ನಕ್ಸಲರೊಂದಿಗೆ ಬಂಧಿತ ಹೋರಾಟಗಾರರ ನಂಟು: ಮಹಾರಾಷ್ಟ್ರ ಪೊಲೀಸರ ಸಮರ್ಥನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT