ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಸ್ಯಾಮ್ ಪಿತ್ರೋಡಾ ಹೇಳಿಕೆ ವೈಯಕ್ತಿಕ, ಅದು ಪಕ್ಷದ ಅಭಿಪ್ರಾಯ ಅಲ್ಲ: ಕಾಂಗ್ರೆಸ್ 

Published:
Updated:

ನವದೆಹಲಿ: 1984ರ ಸಿಖ್ ನರಮೇಧದ ಕುರಿತು ಸಾಗರೋತ್ತರ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ಹೇಳಿರುವ ಹೇಳಿಕೆ ವೈಯಕ್ತಿಕ. ಅದು ಪಕ್ಷದ ಅಭಿಪ್ರಾಯ ಅಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಯಾವುದೇ ವ್ಯಕ್ತಿ ಹೇಳಿಕೆ ನೀಡಿದರೆ ಅದು ಅವರ ವೈಯಕ್ತಿಕ ಅಭಿಪ್ರಾಯವೇ ಆಗಿರುತ್ತದೆ ಹೊರತು ಪಕ್ಷದಲ್ಲ. ಈ ರೀತಿ ಹೇಳಿಕೆ ನೀಡುವ ಮುನ್ನ ಎಚ್ಚರವಹಿಸಿ ಎಂದು ಕಾಂಗ್ರೆಸ್ ಪಕ್ಷ ತಮ್ಮ ನಾಯಕರಿಗೆ ಎಚ್ಚರಿಕೆ ನೀಡಿದೆ.

ನಮ್ಮ ಪಕ್ಷದ ಎಲ್ಲ ನಾಯಕರು ಎಚ್ಚರಿಕೆಯಿಂದಿರಿ.1984ರಲ್ಲಿ ಮತ್ತು 2002ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ನ್ಯಾಯ ಒದಗಿಸಲಾಗುವುದು. ನ್ಯಾಯವೊದಗಿಸುವ ವಿಷಯದಲ್ಲಿ ಬಿಜೆಪಿ ಆಸಕ್ತಿ ವಹಿಸಿಕೊಂಡಿಲ್ಲ. ಆದರೆ ಈ ಹಿಂಸಾಚಾರ ವಿಷಯವನ್ನು ಅದು ಮತ ಪಡೆಯಲು ಬಳಸುತ್ತದೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.

1984ರ ಸಿಖ್ ನರಮೇಧದ ಬಗ್ಗೆ ತನಿಖೆ ನಡೆಸಿದ ನಾನಾವತಿ ಕಮಿಷನ್ ಈ  ರೀತಿ ಹತ್ಯೆ ನಡೆಸಲು ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಚೇರಿಯಿಂದಲೇ ನೇರ ಆದೇಶ ಸಿಕ್ಕಿತ್ತು ಎಂದು ಹೇಳಿರುವುದಾಗಿ ಬಿಜೆಪಿ ವಾದಿಸುತ್ತಿದ್ದೆ. ಬಿಜೆಪಿಯ ಈ ವಾದದ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ  ಪಿತ್ರೋಡಾ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಈ ರೀತಿ ಆಗಿದೆ ಎಂದು ನನಗನಿಸುತ್ತಿಲ್ಲ. ಇದೊಂದು ಸುಳ್ಳು.1984ರ ಬಗ್ಗೆ ಏನಂತೀರೀ? 1984ರ ಬಗ್ಗೆ ಯಾಕೆ ಕೇಳುತ್ತೀರಿ? ಕಳೆದ 5 ವರ್ಷಗಳಲ್ಲಿ ನೀವೇನು ಮಾಡಿದಿರಿ ಎಂಬುದನ್ನು ಹೇಳಿ, 1984ರಲ್ಲಿ ಅದು ನಡೆದದ್ದು, ಏನಿವಾಗ?. ಆದದ್ದು ಆಗಿ ಹೋಯ್ತು. ನೀವೇನು ಮಾಡಿದಿರಿ? ಎಂದಿದ್ದರು.

ಪಿತ್ರೋಡಾ ಹೇಳಿಕೆ ಬಗ್ಗೆ ವಾಗ್ದಾಳಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಕಾಂಗ್ರೆಸ್‌ನ ಅಹಂಕಾರವನ್ನು ತೋರಿಸುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಹಲವು ವರ್ಷಗಳ ಕಾಲ ಅಧಿಕಾರ ನಡೆಸಿದೆ. ಅವರಿಗೆ ಸಂವೇದನೆ ಇಲ್ಲ ಎಂಬುದು ಅವರು ನಿನ್ನೆ ಹೇಳಿದ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಈ ರೀತಿ ಸುಖಾಸುಮ್ಮನೆ ಹೇಳಲು ಸಾಧ್ಯವಿಲ್ಲ. ಇದು ಕಾಂಗ್ರೆಸ್‌‌ನ ನಡತೆ, ಮನಸ್ಥಿತಿ ಮತ್ತು ಉದ್ದೇಶವನ್ನು ತೋರಿಸುತ್ತದೆ. ಹುವಾ ತೋ ಹುವಾ (ಆಗಿದ್ದಾಯ್ತು) ಈ ಮೂರು ಪದಗಳು ಅದನ್ನು ವ್ಯಕ್ತ ಪಡಿಸುತ್ತವೆ ಎಂದಿದ್ದಾರೆ ಮೋದಿ.

ಬಿಜೆಪಿ ದೆಹಲಿ ಘಟಕವು ಪಿತ್ರೋಡಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ಒತ್ತಾಯಿಸಿದೆ.

ಕ್ಷಮೆಯಾಚಿಸಿದ ಪಿತ್ರೋಡಾ
1984ರ ಸಿಖ್ ನರಮೇಧದ ಬಗ್ಗೆ ಆಗಿದ್ದು ಆಗಿ ಹೋಯ್ತು ಎಂದು ಪ್ರತಿಕ್ರಿಯೆ ನೀಡಿದ್ದ ಸ್ಯಾಮ್ ಪಿತ್ರೋಡಾ ಈ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಈ ಹೇಳಿಕೆ ಬಗ್ಗೆ  ಸಿಖ್ ಸಂಘಟನೆಗಳು, ಬಿಜೆಪಿ ಮತ್ತು ನರೇಂದ್ರ ಮೋದಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿ ಕ್ಷಮೆಯಾಚನೆಗೆ ಒತ್ತಾಯಿಸಿದ್ದರು. ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಪಿತ್ರೋಡಾ ಶುಕ್ರವಾರ ಕ್ಷಮೆ ಕೇಳಿದ್ದಾರೆ.

ನನ್ನ ಮಾತುಗಳನ್ನು ಸಂಪೂರ್ಣವಾಗಿ ತಿರುಚಲಾಗಿದೆ. ನನಗೆ ಸರಿಯಾಗಿ ಹಿಂದಿ ಮಾತನಾಡಲು ಬರುವುದಿಲ್ಲ,  ಜೋ ಹುವಾ ವೋ ಬುರಾ ಹುವಾ  (ಅಲ್ಲಿ ಏನಾಗಿದೆಯೋ ಅದು ಖಂಡನೀಯ).ಬುರಾ ಎಂಬ ಪದವನ್ನು ಅನುವಾದ ಮಾಡಲು ನನಗೆ ಗೊತ್ತಾಗಿಲ್ಲ ಎಂದು ಪಿತ್ರೋಡಾ ಹೇಳಿದ್ದಾರೆ.

ಇದನ್ನು ಬಿಟ್ಟು ನಾವು ಮುಂದೆ ಹೋಗಬೇಕು. ಬಿಜೆಪಿ ಸರ್ಕಾರ ನೀಡಿದ ಭರವಸೆಗಳನ್ನು ಪೂರೈಸಿಲ್ಲ. ನಮಗೆ ಚರ್ಚೆ ಮಾಡಲು ಸಾಕಷ್ಟು ವಿಷಯಗಳಿವೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಕ್ಷಮೆ ಕೇಳುತ್ತಿದ್ದೇನೆ, ಇದನ್ನುಇಲ್ಲಿಗೆ ಬಿಟ್ಟು ಬಿಡಿ ಎಂದು ಮಾಧ್ಯಮರಲ್ಲಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
 

Post Comments (+)