ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರಸಂಪರ್ಕ ಸಂಸ್ಥೆಗಳ ಅರ್ಜಿ ವಜಾ

ಜ. 23ರೊಳಗೆ ₹ 1.47ಲಕ್ಷ ಕೋಟಿ ಮೊತ್ತ ಪಾವತಿಸಲು ಸೂಚನೆ
Last Updated 16 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ : ಭಾರ್ತಿ ಏರ್‌ಟೆಲ್, ವೊಡಾಫೋನ್–ಐಡಿಯಾ, ಬಿಎಸ್‌ಎನ್‌ಎಲ್‌ ಸೇರಿದಂತೆ ವಿವಿಧ ಟೆಲಿಕಾಂ ಕಂಪನಿಗಳು ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಪಾವತಿಗೆ ಸಂಬಂಧಿಸಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಹೀಗಾಗಿ, ಎಜಿಆರ್‌ಗೆ ಸಂಬಂಧಿಸಿ ₹ 1.47 ಲಕ್ಷ ಕೋಟಿ ಮೊತ್ತವನ್ನು ಈ ಕಂಪನಿಗಳು ಸರ್ಕಾರಕ್ಕೆ ಪಾವತಿಸಬೇಕಿದೆ. ಇದಕ್ಕೆ ಜ.23 ಕೊನೆಯ ದಿನವಾಗಿದೆ.

ದೂರ ಸಂಪರ್ಕ ಕಂಪನಿಗಳ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಎಂದು ಕರೆಯಲಾಗುವ ಟೆಲಿಕಾಂ ಅಲ್ಲದ ಆದಾಯವನ್ನು ಸೇರಿಸುವ ಮೂಲಕ ಕಾನೂನುಬದ್ಧವಾಗಿ ಬಾಕಿ ಹಣವನ್ನು ಲೆಕ್ಕಹಾಕುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅ. 24ರಂದು ತೀರ್ಪು ನೀಡಿತ್ತು. ಅಲ್ಲದೆ, ಒಟ್ಟು ವರಮಾನ (ಎಜಿಆರ್‌) ಅಂದಾಜು ₹ 92,000 ಕೋಟಿ ವಸೂಲಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಅನುಮತಿಯನ್ನೂ ನೀಡಿತ್ತು.

ಈ ಕುರಿತು ದೂರಸಂಪರ್ಕ ಕಂಪನಿಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದವು.ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್.ಎ. ನಜೀರ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ನ್ಯಾಯಪೀಠವು ಮ್ಯಾಜಿಸ್ಟ್ರೇಟ್ ಕೊಠಡಿಯೊಳಗೆ ವಿಚಾರಣೆ ನಡೆಸಿ, ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು.

ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಇತರ ದೂರ ಸಂಪರ್ಕ ಕಂಪನಿಗಳು ಕಾನೂನು ಪ್ರಕಾರ ₹1.47 ಲಕ್ಷ ಕೋಟಿಯನ್ನ ಸರ್ಕಾರಕ್ಕೆ ಪಾವತಿಸಬೇಕಿದೆ. ಅಂತೆಯೇ ಈ ಕಂಪನಿಗಳ ಬಾಕಿ ಮೇಲಿನ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡುವ ಪ್ರಸ್ತಾಪವಿಲ್ಲ ಎಂದು ನವೆಂಬರ್‌ನಲ್ಲಿ ಸಂಸತ್ತಿನಲ್ಲಿ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT