ಗುರುವಾರ , ಜೂನ್ 24, 2021
27 °C

ಲೋಕಪಾಲ: ಕೇಂದ್ರದ ನಡೆಗೆ ‘ಸುಪ್ರೀಂ’ ಗರಂ

ಪಿಟಿಐ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್‌

ನವದೆಹಲಿ: ಲೋಕಪಾಲ ಆಯ್ಕೆಯ ಶೋಧ ಸಮಿತಿ ಸದಸ್ಯರ ನೇಮಕಕ್ಕೆ ಕೇಂದ್ರ ಸರ್ಕಾರ ತೋರುತ್ತಿರುವ ನಿರಾಸಕ್ತಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌, ಆರ್‌.ಭಾನುಮತಿ ಮತ್ತು ನವೀನ್‌ ಸಿನ್ಹಾ ಅವರಿದ್ದ ತ್ರಿಸದಸ್ಯ ಪೀಠ, ಕೇಂದ್ರದ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ಹೊರಹಾಕಿತು.

ಶೋಧ ಸಮಿತಿಯು ಈಗಾಗಲೇ ಸಭೆ ನಡೆಸಿದೆ. ಆದರೆ, ಸಮಿತಿ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿಲ್ಲ. ನೇಮಕಾತಿ ಸಲುವಾಗಿಯೇ ಇನ್ನೊಂದು ಸಭೆ ಶೀಘ್ರದಲ್ಲೇ ನಡೆಯಲಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ವಿಚಾರಣೆ ವೇಳೆ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದರು.

ಲೋಕಪಾಲ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಪರವಾಗಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ಹಾಜರಾಗಿದ್ದರು. ಅವರು ‘ಲೋಕಪಾಲ ನೇಮಕ ಕಾನೂನು ಜಾರಿಯಾಗಿ ಐದು ವರ್ಷ ಕಳೆದಿದೆ. ಆದರೂ ಸರ್ಕಾರ ನೇಮಕ ಪ್ರಕ್ರಿಯೆ ವಿಳಂಬ ಮಾಡುತ್ತಿದೆ. ಅಲ್ಲದೆ, ಮುಂದಿನ ಸಭೆ ನಡೆಯುವ ನಿರ್ದಿಷ್ಟ ದಿನಾಂಕವನ್ನೂ ತಿಳಿಸಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಂಬಂಧಿಸಿದವರ ಮೇಲೆ ನ್ಯಾಯಾಂಗ ನಿಂದನೆಯ ಕ್ರಮ ಜರುಗಿಸಬೇಕು ಅಥವಾ ನ್ಯಾಯಾಲಯವೇ ಸಂವಿಧಾನದತ್ತ ಅಧಿಕಾರ ಚಲಾಯಿಸಿ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕು ಎಂದು ನ್ಯಾಯ ಪೀಠಕ್ಕೆ ಮನವಿ ಮಾಡಿದರು.

ಪ್ರಧಾನಮಂತ್ರಿ ಅಧ್ಯಕ್ಷತೆಯ ಲೋಕಪಾಲ ಆಯ್ಕೆ ಸಮಿತಿ ಸದ್ಯದಲ್ಲೇ ಶೋಧ ಸಮಿತಿ ರಚಿಸಲಿದೆ. ಲೋಕಪಾಲಗೆ ಸೂಕ್ತ ಹೆಸರುಗಳನ್ನೂ ಶಿಫಾರಸು ಮಾಡಲಿದೆ ಎಂದು ಕೇಂದ್ರ ಸರ್ಕಾರ, ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಆಯ್ಕೆ ಸಮಿತಿಯು ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಲೋಕಸಭೆ ಸ್ಪೀಕರ್‌, ಲೋಕಸಭೆಯಲ್ಲಿನ ಅತಿ ದೊಡ್ಡ ವಿರೋಧ ಪಕ್ಷದ ನಾಯಕ ಹಾಗೂ ಖ್ಯಾತ ವಕೀಲರನ್ನು ಒಳಗೊಂಡಿದೆ.

ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮನ್ನು ಆಯ್ಕೆ ಸಮಿತಿ ಸಭೆಗೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿದ್ದನ್ನು ವಿರೋಧಿಸಿ, ಎರಡು ಬಾರಿಯೂ ಸಭೆ ಬಹಿಷ್ಕರಿಸಿದ್ದಾರೆ.

**

ಲೋಕಪಾಲ ಶೋಧ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿಯ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರ ನಾಲ್ಕು ವಾರದ ಗಡುವಿನೊಳಗೆ ಕೋರ್ಟ್‌ಗೆ ಸಲ್ಲಿಸಬೇಕು.

–ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.