ಗುರುವಾರ , ಆಗಸ್ಟ್ 5, 2021
26 °C
ಕೇಂದ್ರ, ರಾಜ್ಯಗಳಿಗೆ ನೋಟಿಸ್‌

ಕೋವಿಡ್‌–19 ನಿರ್ವಹಣೆ: ದೆಹಲಿ ಸರ್ಕಾರದ ವಿರುದ್ಧ ‘ಸುಪ್ರೀಂ’ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19ನಿಂದ ಸಾವನ್ನಪ್ಪಿರುವವರ ಮೃತದೇಹಗಳನ್ನು ರೋಗಿಗಳ ಪಕ್ಕದಲ್ಲೇ ಇರಿಸಲಾಗಿರುವ ದೆಹಲಿ ಆಸ್ಪತ್ರೆಗಳಲ್ಲಿನ ನಿರ್ವಹಣಾ ಸ್ಥಿತಿ ‘ಭಯಾನಕ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. 

ದೆಹಲಿಯಲ್ಲಿ ರೋಗಿಗಳನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಲಾಗುತ್ತಿದೆ ಎಂದು ಆಸ್ಪತ್ರೆಗಳ ಅವ್ಯವಸ್ಥೆ ಕುರಿತು ದೆಹಲಿ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದೆ. 

ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಮೃತದೇಹಗಳ ನಿರ್ವಹಣೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳ ಆರೈಕೆಗೆ ಸಂಬಂಧಿಸಿ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ. 

ವೈದ್ಯರಿಗೆ ಬಾಕಿ ವೇತನ ಪಾವತಿಸುವಂತೆ ಸೂಚನೆ
ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ತೊಡಗಿರುವ ವೈದ್ಯರಿಗೆ ವೇತನ ಬಾಕಿ ಉಳಿಸಿರುವುದು ಹಾಗೂ ವ್ಯವಸ್ಥಿತ ವಸತಿ ಸೌಲಭ್ಯ ನೀಡದಿರುವ ಸರ್ಕಾರದ ಧೋರಣೆ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

‘ಯುದ್ಧಕಾಲದಲ್ಲಿ ಸೈನಿಕರಿಗೆ ಬೇಸರ ಆಗಬಾರದು. ಅವರ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಸಂಪನ್ಮೂಲ ವ್ಯಯಿಸಬೇಕು. ಅದರಂತೆ ವೈದ್ಯರಿಗೂ ಸೌಲಭ್ಯ ಒದಗಿಸಬೇಕು‘ ಎಂದೂ ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿತು. ಆರೋಗ್ಯ ಸೇವಾ ಕಾರ್ಯಕರ್ತರ ವೇತನ ಪಾವತಿ ಕುರಿತಂತೆ ಕೋರ್ಟ್‌ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು. ಸರ್ಕಾರ ಕೂಡಲೇ ಇದನ್ನು ಇತ್ಯರ್ಥಪಡಿಸಬೇಕು ಎಂದು ತಾಕೀತು ಮಾಡಿತು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್‌, ಎಸ್.ಕೆ.ಕೌಲ್‌, ಎಂ.ಆರ್‌.ಶಾ ಅವರಿದ್ದ ನ್ಯಾಯಪೀಠ,  ವೈದ್ಯರಿಗೆ ಸಕಾಲದಲ್ಲಿ ವೇತನ ನೀಡುತ್ತಿಲ್ಲ ಎಂದು ದೂರಿ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು