ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಯಲ್ಲಿ ಮಗು: ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Last Updated 10 ಫೆಬ್ರುವರಿ 2020, 18:21 IST
ಅಕ್ಷರ ಗಾತ್ರ

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆಸುತ್ತಿದ್ದ ಶಾಹೀನ್ ಬಾಗ್ ಪ್ರದೇಶಕ್ಕೆ ಪಾಲಕರು ಮಗುವನ್ನುಕರೆದೊಯ್ದಿದ್ದು, ಮರಳುವಾಗ ಹಸುಳೆ ಸಾವನ್ನಪ್ಪಿದ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಗಂಭೀರವಾಗಿಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.

ಆದರೆ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಕೆಲವು ವಕೀಲರು ವಿರೋಧಿಸಿದ್ದು, ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠವು ಈ ವಕೀಲರ ಕ್ರಮವನ್ನು ಬಲವಾಗಿ ಆಕ್ಷೇಪಿಸಿತು.

"ಇಂತಹಾ ಪ್ರತಿಭಟನೆಗಳಲ್ಲಿ 4 ತಿಂಗಳ ಹಸುಳೆಯನ್ನು ಭಾಗವಹಿಸುವಂತೆ ಮಾಡಬಹುದೇ?" ಎಂದು ನ್ಯಾಯಪೀಠವುಮಹಿಳಾ ವಕೀಲರನ್ನು ಪ್ರಶ್ನಿಸಿತು.

4 ತಿಂಗಳ ಮಗುವಿನಂತಹ ಅಪ್ರಾಪ್ತರನ್ನು ಪ್ರತಿಭಟನಾ ಸ್ಥಳಗಳಿಗೆ ಕರೆದೊಯ್ಯುವುದು ತರವಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತ ಬಾಲಕಿ ಝೆನ್ ಗುಣರತ್ನ ಸದಾವರ್ತೆ ಎಂಬಾಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ವಿಷಯವನ್ನು ಸ್ವಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತು. ಅಪ್ರಾಪ್ತ ವಯಸ್ಕರು ಯಾವುದೇ ರೀತಿಯ ಪ್ರತಿಭಟನೆ, ಆಂದೋಲನಗಳಲ್ಲಿ ಭಾಗವಹಿಸದಂತೆ ತಡೆಯಬೇಕು ಎಂದು ಈ ಬಾಲಕಿ ಕೇಳಿಕೊಂಡಿದ್ದಳು.

ಈ ಕುರಿತು ಪ್ರತಿಕ್ರಿಯೆ ಕೇಳಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಹಾಗೂ ದಿಲ್ಲಿ ಸರ್ಕಾರಗಳಿಗೆ ನೋಟೀಸ್ ನೀಡಿದೆ.

ಇದೇ ವೇಳೆ, ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಮಕ್ಕಳನ್ನು ಅವರ ಶಾಲೆಗಳಲ್ಲಿ "ಪಾಕಿಸ್ತಾನಿ" ಮತ್ತು "ದೇಶದ್ರೋಹಿ" ಎಂದು ಕರೆಯಲಾಗುತ್ತಿದೆ ಎಂದು ಮಹಿಳಾ ವಕೀಲರು ಗಮನಕ್ಕೆ ತಂದಾಗ ನ್ಯಾಯಪೀಠವು ಆತಂಕ ವ್ಯಕ್ತಪಡಿಸಿತು. "ನಾವಿಲ್ಲಿ ಸಿಎಎ ಅಥವಾ ಎನ್‌ಆರ್‌ಸಿ ಬಗ್ಗೆ ಮಾತನಾಡುತ್ತಿಲ್ಲ. ಶಾಲೆಗಳಲ್ಲಿ ನಿಂದನೆ ಮಾಡುವ ವಿಚಾರವೂ ನಮ್ಮೆದುರು ಇಲ್ಲ. ಪ್ರತಿಭಟನೆಯಲ್ಲಿ ಏನೂ ಅರಿಯದ ಮಕ್ಕಳು ಭಾಗವಹಿಸುತ್ತಿರುವ ವಿಷಯವುದಷ್ಟೇ ನಮ್ಮ ಆದ್ಯತೆ" ಎಂದ ನ್ಯಾಯಪೀಠವು, ಯಾವ ಧ್ವನಿಯನ್ನೂ ಅಡಗಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿತು.

ಮುಖ್ಯ ನ್ಯಾಯಮೂರ್ತಿಗೆ ಬರೆದಿರುವ ಪತ್ರದಲ್ಲಿ ಅರ್ಜಿದಾರೆ ಗುಣರತ್ನ ಅವರು, ಈ ಕಂದಮ್ಮನ ಪಾಲಕರು ಹಾಗೂ ಶಾಹೀನ್ ಬಾಗ್‌ನಲ್ಲಿ ಸಿಎಎ-ವಿರೋಧಿ ಹೋರಾಟ ಆಯೋಜಿಸಿದ ಸಂಘಟಕರು ಈ ಪುಟ್ಟ ಮಗುವಿನ ಹಕ್ಕುಗಳನ್ನು ರಕ್ಷಿಸಲು ವಿಫಲವಾಗಿದ್ದು, ಇದರಿಂದಾಗಿಯೇ ಸಾವನ್ನಪ್ಪಿತು ಎಂದು ಉಲ್ಲೇಖಿಸಿದ್ದರು. ಗುಣರತ್ನ ಮುಂಬಯಿಯ 7ನೇ ತರಗತಿ ವಿದ್ಯಾರ್ಥಿನಿ.

ಪ್ರತಿಭಟನೆಯಂತಹಾ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹಸುಳೆಗಳು ಮತ್ತು ಮಕ್ಕಳನ್ನು ಕರೆತಂದಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ನವಜಾತ ಶಿಶುಗಳಿಗೆ ಹೆಚ್ಚಿನ ಗಮನ ಹಾಗೂ ಹೆಚ್ಚಿನ ಕಾಳಜಿಯ ಅಗತ್ಯವಿದೆ ಎಂಬುದನ್ನು ಶಾಹೀನ್ ಬಾಗ್ ಪ್ರತಿಭಟನಕಾರರು ನಿರ್ಲಕ್ಷಿಸಿದರು. ಕಂದಮ್ಮಗಳಿಗೆ ತಮಗಾದ ತೊಂದರೆಯನ್ನು ಹೇಳಿಕೊಳ್ಳುವುದು ಸಾಧ್ಯವಿಲ್ಲ. ಇದು ಮಕ್ಕಳ ಹಕ್ಕುಗಳ ಮತ್ತು ಸಹಜ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಗುಣರತ್ನ, ಇಂಥ ಪ್ರತಿಕೂಲ ವಾತಾವರಣಗಳಲ್ಲಿ ಮಕ್ಕಳು ಭಾಗವಹಿಸದಂತೆ ತಡೆಯುವಲ್ಲಿ ದೆಹಲಿ ಪೊಲೀಸರೂ ವಿಫಲರಾದರು. ಅಲ್ಲದೆ, ಮಗುವಿನ ಮರಣ ಪ್ರಮಾಣಪತ್ರದಲ್ಲಿಯೂ ಸಾವಿಗೆ ಕಾರಣಗಳನ್ನು ಉಲ್ಲೇಖಿಸದಿರುವುದು ಆಘಾತಕಾರಿ ಎಂದು ಈ ಪತ್ರದಲ್ಲಿ ತಿಳಿಸಲಾಗಿತ್ತು.

ಜನವರಿ 30ರಂದು ಶಾಹೀನ್ ಬಾಗ್‌ನಲ್ಲಿ ನಡೆದ ಸಿಎಎ-ವಿರೋಧೀ ಪ್ರತಿಭಟನೆಯಲ್ಲಿ ಈ ಹಸುಳೆಯನ್ನು ಅದರ ಪಾಲಕರು ಕರೆತಂದಿದ್ದು, ಮರಳಿದ ಬಳಿಕ ಅದು ನಿದ್ದೆಯಲ್ಲೇ ಸಾವನ್ನಪ್ಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT