ಬುಧವಾರ, ಅಕ್ಟೋಬರ್ 16, 2019
21 °C
ಬಿಜೆಪಿ ಟಿಕೆಟ್‌ ಪಡೆದ ‘ಟಿಕ್‌ಟಾಕ್‌’ ನಟಿ l ಖಟ್ಟರ್‌, ಹೂಡ ಅವರನ್ನು ಹಿಂದಿಕ್ಕಿದ ಅಭ್ಯರ್ಥಿ

ಹರಿಯಾಣ ಚುನಾವಣೆ: ಹೆಚ್ಚು ಶೋಧ ನಡೆದಿದ್ದು ಟಿಕ್‌ಟಾಕ್‌ ನಟಿ ‘ಸೊನಾಲಿ’ಗೆ!

Published:
Updated:

ಹಿಸಾರ್‌ (ಹರಿಯಾಣ): ಹರಿಯಾಣದ ಚುನಾವಣಾ ಕಣವು ದಿನದಿಂದ ದಿನಕ್ಕೆ ವರ್ಣಮಯವಾಗುತ್ತಿದೆ. ಇದೇ ಮೊದಲ ಬಾರಿಗೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಹಿಳೆಯೊಬ್ಬರು ಚುನಾವಣಾ ಕಣದಲ್ಲಿ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಭೂಪಿಂದರ್‌ಸಿಂಗ್‌ ಹೂಡ ಅವರಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದಾರೆ.

ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟುಕೊಂಡು, ಹರಿಯಾಣವಿ ಭಾಷೆ ಮಾತನಾಡುತ್ತಾ ಹಿಸಾರ್‌ ಜಿಲ್ಲೆಯ ಆದಂಪುರ ಗ್ರಾಮದ ದೂಳು ತುಂಬಿದ ರಸ್ತೆಗಳಲ್ಲಿ ಸಂಚರಿಸಿ ಮತ ಯಾಚಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸೊನಾಲಿ ಫೋಗಟ್‌ ಹೀಗೆ ಸುದ್ದಿ ಮಾಡುತ್ತಿರುವ ಅಭ್ಯರ್ಥಿ. ಕಳೆದ ಕೆಲವು ದಿನಗಳಲ್ಲಿ ಖಟ್ಟರ್‌ ಹಾಗೂ ಹೂಡ ಅವರಿಗಿಂತ ಹೆಚ್ಚಾಗಿ ಸೊನಾಲಿ ಬಗ್ಗೆಯೇ ಜನರು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.

ಟಿಕ್‌ಟಾಕ್‌ ಆ್ಯಪ್‌ ಮೂಲಕ ಹೆಚ್ಚು ಸುದ್ದಿ ಮಾಡುತ್ತಿದ್ದ ಸೊನಾಲಿಗೆ ಬಿಜೆಪಿ ಟಿಕೆಟ್‌ ಲಭಿಸಿದ್ದೇ ಒಂದು ಅಚ್ಚರಿ. ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್‌ಲಾಲ್‌ ಅವರ ಕುಟುಂಬದ ಕುಡಿ, ಕುಲ್‌ದೀಪ್‌ ಬಿಷ್ಣೋಯಿ ವಿರುದ್ಧ ಬಿಜೆಪಿ ಇವರನ್ನು ಕಣಕ್ಕಿಳಿಸಿದೆ.

ಚುನಾವಣಾ ಪ್ರಚಾರ ಆರಂಭವಾಗುತ್ತಿದ್ದಂತೆಯೇ ಸೊನಾಲಿ ಟಿಕ್‌ಟಾಕ್‌ ಇಮೇಜ್‌ನಿಂದ ಹೊರಬಂದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ‘ಬಿಷ್ಣೋಯಿ ಒಬ್ಬ ಭ್ರಷ್ಟ ರಾಜಕಾರಣಿ, ಆದಂಪುರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ’ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಎಲ್ಲಾ ಪ್ರಯತ್ನಗಳನ್ನೂ ಅವರು ಮಾಡುತ್ತಿದ್ದಾರೆ.

ಪ್ರಚಾರದ ಜೊತೆಗೆ, ವಿವಾದ ಸೃಷ್ಟಿಸುವಲ್ಲಿಯೂ ಸೊನಾಲಿ ಹಿಂದೆ ಬಿದ್ದಿಲ್ಲ. ಇತ್ತೀಚೆಗಷ್ಟೇ ನಡೆದ ಸಾರ್ವಜನಿಕ ರ್‍ಯಾಲಿಯೊಂದರಲ್ಲಿ ಅವರು ಮತದಾರ
ರನ್ನು ಅವಮಾನಿಸಿದ ಪ್ರಸಂಗ ನಡೆದಿತ್ತು. ಅಂದು ತಮ್ಮ ಮಾತಿನ ಕೊನೆಯಲ್ಲಿ ‘ಭಾರತ್‌ ಮಾತಾಕಿ ಜೈ’ ಘೋಷಣೆಕೂಗುವಂತೆ ಅವರು ಜನರನ್ನು ಹುರಿ
ದುಂಬಿಸಿದ್ದರು. ಜನರು  ಅವರು ನಿರೀಕ್ಷಿಸಿದಷ್ಟು ಜೋರಾಗಿ ಕೂಗಿರಲಿಲ್ಲ. ಇದರಿಂದ ಸೊನಾಲಿಗೆ ಮುಜುಗರವಾಯಿತು. ಸಿಟ್ಟಿಗೆದ್ದ ಅವರು, ‘ನೀವೇನು ಪಾಕಿಸ್ತಾನೀಯರೇ? ಭಾರತ್‌ ಮಾತಾಕಿ ಜೈ ಘೋಷಣೆ ಕೂಗದಿರುವ ನಿಮಗೆ ನಾಚಿಕೆಯಾಗಬೇಕು’ ಎಂದರು. ಅವರ ಈ ಮಾತು ವಿವಾದ ಸೃಷ್ಟಿಸಿತು. ಮರು
ದಿನವೇ ಅವರು ಕ್ಷಮೆ ಯಾಚಿಸಿದ್ದರು.

‘ಸೊನಾಲಿಗೆ ರಾಜಕೀಯ ಅನುಭವವಾಗಲೀ ಹಿನ್ನೆಲೆಯಾಗಲೀ ಇಲ್ಲ. ಬಿಜೆಪಿ ಅಲೆ ಮಾತ್ರ ಇವರನ್ನು ಚುನಾವಣೆಯಲ್ಲಿ ದಡಸೇರಿಸಬಲ್ಲದು’ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಸೊನಾಲಿ ಅವರು ತಮಗೆ ಸ್ಪರ್ಧಿಯೇ ಅಲ್ಲ ಎಂಬ ಭಾವವನ್ನು ಕಾಂಗ್ರೆಸ್‌ ಮುಖಂಡ ಬಿಷ್ಣೋಯಿ ವ್ಯಕ್ತಪಡಿಸಿದ್ದಾರೆ. ಆದರೆ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಅಲೆಯ ಕಾರಣದಿಂದಲೇ ರಾಜಕೀಯದ ಗಂಧಗಾಳಿಯೂ ಇಲ್ಲದ ಅನೇಕ ಮಂದಿ ಆಯ್ಕೆಯಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

ಬಂಡಾಯ: 16 ಮಂದಿ ಉಚ್ಚಾಟನೆ

ಚಂಡೀಗಡ (ಪಿಟಿಐ): ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಸ್ಪರ್ಧಿಸಿದ್ದ 16 ಮಂದಿಯನ್ನು ಕಾಂಗ್ರೆಸ್‌ನ ಹರಿಯಾಣ ರಾಜ್ಯ ಘಟಕದ ಅಧ್ಯಕ್ಷೆ ಕುಮಾರಿ ಶೆಲ್ಜಾ ಅವರು ಶನಿವಾರ ಪಕ್ಷದಿಂದ ಉಚ್ಚಾಟಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರಿಂದ ಇವರನ್ನು ಆರು ವರ್ಷಗಳ ಅವಧಿಗೆ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಉಚ್ಚಾಟಿತರಲ್ಲಿ ಮಾಜಿ ಸಂಸದ ರಂಜಿತ್‌ ಸಿಂಗ್‌, ಮಾಜಿ ಸಚಿವ ನಿರ್ಮಲ್‌ ಸಿಂಗ್‌, ಹರಿಯಾಣ ವಿಧಾನಸಭೆಯ ಮಾಜಿ ಡೆಪ‍್ಯುಟಿ ಸ್ಪೀಕರ್‌ ಆಝಾದ್‌ ಮೊಹಮ್ಮದ್‌ ಹಾಗೂ ಸಂಸದೀಯ ಮಾಜಿ ಮುಖ್ಯ ಕಾರ್ಯದರ್ಶಿ ರಾಮ್‌ ಶರ್ಮಾ ಸೇರಿದ್ದಾರೆ’ ಎಂದಿದ್ದಾರೆ.

Post Comments (+)