ಲೈಂಗಿಕ ಕಿರುಕುಳ: ಮತ್ತಷ್ಟು ಪ್ರಕರಣಗಳಿಗೆ ಮರುಜೀವ

7
ತೀವ್ರಗೊಂಡ ‘ಮಿ–ಟೂ’ ಚಳವಳಿ l ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ l ನಟ ರಜತ್‌ ಕಪೂರ್‌ ಕ್ಷಮೆಯಾಚನೆ

ಲೈಂಗಿಕ ಕಿರುಕುಳ: ಮತ್ತಷ್ಟು ಪ್ರಕರಣಗಳಿಗೆ ಮರುಜೀವ

Published:
Updated:
Deccan Herald

ಮುಂಬೈ: ಲೈಂಗಿಕ ಕಿರುಕುಳ, ದೌರ್ಜನ್ಯದ ವಿರುದ್ಧ ಭಾರತದಲ್ಲಿ ಸಂತ್ರಸ್ತ ಮಹಿಳೆಯರು ಆರಂಭಿಸಿರುವ ‘ಮಿ–ಟೂ’ ಆನ್‌ಲೈನ್‌ ಚಳ
ವಳಿಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆಯುತ್ತಿದ್ದು ಸೋಮವಾರ ಮತ್ತಷ್ಟು ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರು ಜೀವ ಪಡೆದುಕೊಂಡಿವೆ.

ಪತ್ರಕರ್ತೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಬೆನ್ನಲ್ಲೇ ನಟ ಹಾಗೂ ನಿರ್ದೇಶಕ ರಜತ್‌ ಕಪೂರ್‌ ಕ್ಷಮೆಯಾಚಿಸಿದ್ದಾರೆ. ಇಂಗ್ಲಿಷ್‌ ದೈನಿಕವೊಂದರ ರಾಜಕೀಯ ಸಂಪಾದಕ ಪ್ರಶಾಂತ್‌ ಝಾ ರಾಜೀನಾಮೆ ನೀಡಿದ್ದಾರೆ.

ನಟಿ ತನುಶ್ರೀ ದತ್ತಾ ತಮ್ಮ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಸ್ಪಷ್ಟನೆ ನೀಡಲು ನಟ ನಾನಾ ಪಾಟೇಕರ್‌ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ್ದಾರೆ.

ತನುಶ್ರೀ ದತ್ತಾ ಅವರು ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಪ್ರಕರಣ ಬೆಳಕಿಗೆ ಬಂದ ನಂತರ ಇಂತಹ ಮತ್ತಷ್ಟು ಪ್ರಕರಣಗಳು ಜೀವ ಪಡೆಯುತ್ತಿವೆ.

ಪತ್ರಕರ್ತೆ ಜತೆ ಅನುಚಿತ ವರ್ತನೆ: 2007ರಲ್ಲಿ ರಜತ್‌ ಕಪೂರ್‌ ಅವರ ಸಂದರ್ಶನಕ್ಕೆ ತೆರಳಿದ್ದ ವೇಳೆ ಅನುಚಿತವಾಗಿ ವರ್ತಿಸಿದ್ದರು ಎಂದು ಪತ್ರಕರ್ತೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಬಹಿರಂಗಪಡಿಸಿದ್ದರು. 

ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ ರಜತ್‌ ಕಪೂರ್‌ ಕ್ಷಮೆಯಾಚಿಸಿದ್ದಾರೆ. ‘ನಾನು ಮೊದಲಿನಿಂದಲೂ ಒಳ್ಳೆಯ ಮನುಷ್ಯನಾಗಿ ಇರಲು ಯತ್ನಿಸಿದ್ದೇನೆ. ನನ್ನ ನಡವಳಿಕೆ ಹಾಗೂ ಮಾತಿನಿಂದ ಇತರರಿಗೆ ನೋವಾಗಿದ್ದರೆ, ಹೃದಯಾಂತರಾಳದಿಂದ ಕ್ಷಮೆಯಾಚಿಸುತ್ತೇನೆ’ ಎಂದು ತಿಳಿಸಿದ್ದಾರೆ.

ನಾನಾ ಪತ್ರಿಕಾಗೋಷ್ಠಿ ರದ್ದು: ತನುಶ್ರೀ ದತ್ತಾ ಹೊರಿಸಿದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ, ಸ್ಪಷ್ಟನೆ ನೀಡಲು ಮುಂಬೈನಲ್ಲಿ ಸೋಮವಾರ ಮುಂಜಾನೆ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ನಾನಾ ಪಾಟೇಕರ್‌  ರದ್ದುಗೊಳಿಸಿದ್ದಾರೆ. 

ನಾನಾ ಅವರ ಮಗ ಮಲ್ಹಾರ್‌ ಭಾನುವಾರ ರಾತ್ರಿ ಎಲ್ಲ ಪತ್ರಕರ್ತರಿಗೆ ಸಂದೇಶ ಕಳುಹಿಸಿ ಪತ್ರಿಕಾಗೋಷ್ಠಿ ರದ್ದುಗೊಳಿಸಿರುವ ವಿಷಯ ತಿಳಿಸಿದರು.

‘ಕೊನೇಕ್ಷಣದಲ್ಲಿ ಪತ್ರಿಕಾಗೋಷ್ಠಿ ರದ್ದುಗೊಳಿಸಲಾಗಿದೆ. ಈ ವಿಚಾರವನ್ನು ಬೇರೆಯವರಿಗೂ ತಿಳಿಸಿ, ಮುಂದಿನ ಬೆಳವಣಿಗೆಯನ್ನು ಆದಷ್ಟು ಬೇಗ ತಿಳಿಸಲಾಗುವುದು’ ಎಂದು ಪತ್ರಕರ್ತರಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಲಾಗಿದೆ.

‘ವಕೀಲರ ಸಲಹೆ ಮೇರೆಗೆ ಈ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಗಿದೆ. ಅವರ ಮಾತನ್ನು ಕೇಳಬೇಕಿದೆ. 10 ವರ್ಷದ ಹಿಂದೆ ಹೇಳಿದ್ದ ಮಾತನ್ನೇ ಈಗಲೂ ಹೇಳುತ್ತೇನೆ, ಸತ್ಯ ಬದಲಾಗುವುದಿಲ್ಲ’ ಎಂದು ನಾನಾ ಪಾಟೇಕರ್‌ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನಾನಾ ವಕೀಲರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರೋಪ ನಿರಾಕರಣೆ: ‘ಹಾರ್ನ್‌ ಓಕೆ ಪ್ಲೀಸ್‌’ ಸಿನಿಮಾ ಚಿತ್ರೀಕರಣ ಸ್ಥಳದಲ್ಲಿ ತನುಶ್ರೀ ದತ್ತಾ ಮೇಲೆ ಯಾವುದೇ ಲೈಂಗಿಕ ಕಿರುಕುಳ ನಡೆದಿಲ್ಲ’ ಎಂದು ನಿರ್ಮಾಪಕ ಸಮಿ ಸಿದ್ಧಿಕಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ನಾನಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ನಟಿ ತನುಶ್ರೀ ದತ್ತಾ ಅವರು ಒಶಿವಾರಾ ‍ಪೊಲೀಸ್‌ ಠಾಣೆಯಲ್ಲಿ ಶನಿವಾರ  ದೂರು ಸಲ್ಲಿಸಿದ್ದರು.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ಧಿಕಿ ಅವರು ವಿವರವಾದ ಮಾಹಿತಿಯನ್ನು ಸೋಮವಾರ ಠಾಣೆಗೆ ಸಲ್ಲಿಸಿದ್ದಾರೆ’ ಎಂದು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್‌ ಮುಖ್ಯಸ್ಥ ಮನೋಜ್‌ ಕುಮಾರ್‌ ಶರ್ಮಾ ತಿಳಿಸಿದ್ದಾರೆ.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ಗೋರೆಗಾಂವ್‌ ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದಾರೆ. ಯಾವುದೇ ಕಿರುಕುಳ ನೀಡಿಲ್ಲ, ಕೇವಲ ಪ್ರಚಾರಕ್ಕಾಗಿ ಈ ರೀತಿ  ಆರೋಪಿಸಿದ್ದಾರೆ’ ಎಂದು ಸಿದ್ಧಿಕಿ ಸ್ಪಷ್ಟಪಡಿಸಿದ್ದಾರೆ.

ಎಐಬಿಯಿಂದ ಹೊರ ನಡೆದ ತನ್ಮಯ್
ಜನಪ್ರಿಯ ಕಾಮಿಡಿ ಗ್ರೂಪ್‍ ಎಐಬಿಯ ಪ್ರಮುಖ ಹಾಸ್ಯಗಾರರೊಬ್ಬರಾದ ತನ್ಮಯ್ ಭಟ್ ಈ ಗ್ರೂಪ್‌‍ನಿಂದ ಹೊರ ನಡೆದಿದ್ದಾರೆ. ಎಐಬಿ ಗ್ರೂಪ್‍ನ ಉತ್ಸವ್ ಚಕ್ರಬೊರ್ತಿ ಎಂಬಾತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಇದು ತಿಳಿದಿದ್ದರೂ ತನ್ಮಯ್ ಅವರು ಉತ್ಸವ್ ಚಕ್ರವರ್ತಿಯನ್ನು ತಮ್ಮ ಗ್ರೂಪ್‍ನಲ್ಲಿರಿಸಿಕೊಂಡಿದ್ದರು.

ಅದೇ ವೇಳೆ ಎಐಬಿ ಗ್ರೂಪ್‍ನ ಇನ್ನೋರ್ವ ಸದಸ್ಯ ಗುರ್‌ಸಿಮ್ರಾನ್ ಖಂಬಾ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಖಂಬಾ ಅವರು ರಜೆಯಲ್ಲಿ ತೆರಳಿದ್ದಾರೆ.

‘ಎಐಬಿ ಮತ್ತು ನಮ್ಮ ಸಹ ಸಂಸ್ಥಾಪಕ, ಸಿಇಒ ತನ್ಮಯ್ ಭಟ್ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ನಾವು ನಿಗಾ ಇರಿಸುತ್ತಾ ಬಂದಿದ್ದೇವೆ. ತನ್ಮಯ್ ಅವರು ಮುಂದಿನ ಸೂಚನೆ ಸಿಗುವವರೆಗೆ ಎಐಬಿಯಿಂದ ದೂರ ಸರಿಯಲಿದ್ದಾರೆ. ಅಂದರೆ ಇನ್ನು ಮಂದೆ  ಎಐಬಿಯ ಯಾವುದೇ ಕಾರ್ಯಕ್ರಮದಲ್ಲಿ ತನ್ಮಯ್ ಭಾಗವಹಿಸುವುದಿಲ್ಲ’ ಎಂದು ಎಐಬಿ ಹೇಳಿಕೆ ನೀಡಿದೆ.

ಸ್ಥಾನ ತೊರೆದ ಝಾ
ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದ ಕಾರಣ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ಬ್ಯೂರೊ ಮುಖ್ಯಸ್ಥ, ರಾಜಕೀಯ ಸಂಪಾದಕ ಪ್ರಶಾಂತ್ ಝಾ ತಮ್ಮ ಸ್ಥಾನ ತೊರೆದಿದ್ದಾರೆ. ಈ ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಪ್ರಧಾನ ಸಂಪಾದಕ ಸುಕುಮಾರನ್ ಅವರಿಗೆ ಸಂಸ್ಥೆ ಆದೇಶಿಸಿದೆ.

ಪ್ರಸ್ತುತ ಪತ್ರಿಕೆಯಲ್ಲಿ ವರದಿಗಾರನಾಗಿ ಮುಂದುವರಿಯಲಿರುವ ಝಾ ಅವರಿಗೆ ವ್ಯವಸ್ಥಾಪಕ ಮಂಡಳಿಯಲ್ಲಿ ಯಾವುದೇ ಜವಾಬ್ದಾರಿ ಇರುವುದಿಲ್ಲ. ಪ್ರಕರಣ ಬಗ್ಗೆ ಐಸಿಸಿ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

*
‘ಸೂಪರ್‌ 30 ನಿರ್ದೇಶಕ ವಿಕಾಸ್‌ ಬಹ್ಲ್‌ ತಪ್ಪು ಮಾಡಿದ್ದರೆ, ನಿರ್ಮಾಪಕರು ಕಠಿಣ ನಿಲುವು ತೆಗೆದುಕೊಳ್ಳಬೇಕು. ಅನುಚಿತ ವರ್ತನೆ ತೋರಿದವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ.
-ಹೃತಿಕ್‌ ರೋಷನ್‌, ನಟ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !