ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನಶ್ಚೇತನಕ್ಕಾಗಿ ಕಾಂಗ್ರೆಸ್ ನಾಯಕತ್ವದ ಸಮಸ್ಯೆ ಬಗೆಹರಿಸಲೇಬೇಕು: ಶಶಿ ತರೂರ್

Last Updated 23 ಫೆಬ್ರುವರಿ 2020, 11:34 IST
ಅಕ್ಷರ ಗಾತ್ರ

ನವದೆಹಲಿ: ನಾಯಕತ್ವಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವುದನ್ನು ಕಾಂಗ್ರೆಸ್ ಪ್ರಮುಖ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಪಕ್ಷದ ಹಿರಿಯ ನಾಯಕ, ಸಂಸದ ಶಶಿ ತರೂರ್ ಒತ್ತಾಯಿಸಿದ್ದಾರೆ. ಪಕ್ಷದ ಪುನಶ್ಚೇತನಕ್ಕಾಗಿ ಅಧ್ಯಕ್ಷ ಸ್ಥಾನದ ಮೇಲಿನ ಅನಿಶ್ಚಿತತೆಯನ್ನು ಹೋಗಲಾಡಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

‘ಕಾಂಗ್ರೆಸ್ ಮುಖ್ಯಸ್ಥರಾಗಿ ರಾಹುಲ್ ಗಾಂಧಿಯವರು ಮುಂದುವರಿಯಲು ಬಯಸಿದಲ್ಲಿ ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಅವರು ಹಿಂದಿನ ನಿಲುವನ್ನು ಬದಲಾಯಿಸುವುದಿಲ್ಲ ಎಂದಾದರೆ ಪಕ್ಷವು ಪೂರ್ಣಾವಧಿಯ ನಾಯಕತ್ವವನ್ನು ಕಂಡುಕೊಳ್ಳಬೇಕು. ಇದರಿಂದ ದೇಶದ ನಿರೀಕ್ಷೆಗೆ ತಕ್ಕಂತೆ ಮುಂದುವರಿಯಲು ಸಾಧ್ಯ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತರೂರ್ ಹೇಳಿದ್ದಾರೆ.

ಬಿಜೆಪಿಯ ‘ವಿಭಜಕ ನೀತಿ’ಗಳಿಗೆ ಕಾಂಗ್ರೆಸ್ ಪಕ್ಷವೇ ರಾಷ್ಟ್ರೀಯ ಪರ್ಯಾಯ ಎಂದು ಪ್ರತಿಪಾದಿಸಿರುವ ಅವರು, ರಾಜಕೀಯ ಅಸ್ತಿತ್ವಕ್ಕಾಗಿ ನಾವು ಅಲೆಯುತ್ತಿರುವವರು ಎಂಬ ಭಾವನೆ ಸಾರ್ವಜನಕರಲ್ಲಿ ಉಂಟಾಗುತ್ತಿದೆ. ಇದುವೇ ನಮ್ಮಲ್ಲಿ ಅನೇಕರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಈ ಭಾವನೆಯು ಸ್ವಾಭಾವಿಕವಾಗಿ ಕೆಲವು ಮತದಾರರು ಇತರ ಆಯ್ಕೆಗಳನ್ನು ಪರಿಗಣಿಸುವಂತೆ ಮಾಡುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ದೆಹಲಿ ವಿಧಾನಸಭೆ ಚುನಾವಣೆ. ಅಲ್ಲಿ ಮತದಾರರು ಎಎಪಿಯನ್ನು ಮತ್ತು ಸ್ವಲ್ಪ ಮಟ್ಟಿಗೆ ಬಿಜೆಪಿಯನ್ನು ಆಯ್ಕೆ ಮಾಡಿದರು. ಕಾಂಗ್ರೆಸ್‌ಗೆ ಸ್ಥಾನವೇ ದೊರೆಯಲಿಲ್ಲ ಎಂದು ತರೂರ್ ಹೇಳಿದ್ದಾರೆ.

ಹೀಗಾಗಿ ಸಾರ್ವಜನಿಕರ ಗ್ರಹಿಕೆಯನ್ನು ಬದಲಾಯಿಸುವ ಸಲುವಾಗಿ ತುರ್ತು ಕ್ರಮ ಕೈಗೊಳ್ಳಬೇಕಿದೆ. ಜತೆಗೆ, ಪಕ್ಷವನ್ನು ಪದೇಪದೇ ಕಡೆಗಣಿಸಿ ಬರೆಯುತ್ತಿರುವ ಮಾಧ್ಯಮಗಳ ದೃಷ್ಟಿಕೋನವನ್ನೂ ಬದಲಾಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಕಾರ್ಯಕರ್ತರಲ್ಲಿ ಶಕ್ತಿ ತುಂಬಲು ಹಾಗೂ ಮತದಾರರಿಗೆ ಸ್ಫೂರ್ತಿ ನೀಡಲು ಪಕ್ಷದ ನಾಯಕತ್ವ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಶಶಿ ತರೂರ್‌ ಎರಡು ದಿನ ಹಿಂದೆಯಷ್ಟೇ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯನ್ನು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT