ಮಂಗಳವಾರ, ನವೆಂಬರ್ 12, 2019
28 °C

ಮಹಾರಾಷ್ಟ್ರ ರಾಜಕಾರಣ | ಎನ್‌ಸಿಪಿ, ಕಾಂಗ್ರೆಸ್‌ ಪರ ಒಲವು ತೋರಿದ ಶಿವಸೇನೆ

Published:
Updated:

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಗ್ಗಂಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಫಲಿತಾಂಶ ಪ್ರಕಟವಾಗಿ 10 ದಿನಗಳಾದರೂ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಶಿವಸೇನೆಯ ನಡುವೆ ಒಮ್ಮತ ಮೂಡಿಲ್ಲ.

‘ನಮ್ಮ ಬೇಡಿಕೆಗಳಿಗೆ ಬಿಜೆಪಿ ಬೆಲೆ ಕೊಡದಿದ್ದರೆ ಬೇರೆ ಆಯ್ಕೆಗಳತ್ತ ಗಮನ ನೀಡಬೇಕಾಗುತ್ತದೆ’ ಎಂದು ಹೇಳಿರುವ ಶಿವಸೇನೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಸದಸ್ಯರ ಸಂಖ್ಯೆಯನ್ನು ಉಲ್ಲೇಖಿಸಿ ‘ಪಕ್ಷೇತರರ ಬೆಂಬಲದೊಂದಿಗೆ ನಮಗೆ ಬಹುಮತ ಸಾಬೀತುಪಡಿಸುವುದು ಕಷ್ಟವಾಗುವುದಿಲ್ಲ’ ಎಂದು ಹೇಳಿದೆ.

ಇದನ್ನೂ ಓದಿ: ಬಿಜೆಪಿ ಜಸ್ಟ್‌ ಪಾಸ್‌, ವಿಪಕ್ಷಗಳಿಗೆ ಶಕ್ತಿ ಕೊಟ್ಟ ಮತದಾರ

ಮುಖ್ಯಮಂತ್ರಿ ಗಾದಿಯ ಬಗ್ಗೆ ಬಿಜೆಪಿ ಮತ್ತು ಶಿವಸೇನೆ ನಡುವೆ ಬಿಕ್ಕಟ್ಟು ಸೃಷ್ಟಿಯಾದ ನಂತರ ಎರಡೂ ಪಕ್ಷಗಳ ನಾಯಕರು ಪರಸ್ಪರ ಚರ್ಚೆ ಕೈಬಿಟ್ಟಿದ್ದಾರೆ. ಮೌನ ಮುರಿಯುಲು ಯಾರೊಬ್ಬರೂ ಮುಂದಾಗದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಮಾಧ್ಯಮಗಳು ‘ದೃಷ್ಟಿಯುದ್ಧ’ ಎಂದು ವ್ಯಾಖ್ಯಾನಿಸಿವೆ. 

ಇದೇ ಹಿನ್ನೆಲೆಯಲ್ಲಿ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ‘ನಾವು ಮೊದಲು ಕಣ್ಣು ಮಿಟುಕಿಸುವುದಿಲ್ಲ’ ಎಂದು ಹೇಳಿದೆ.

‘ನಿಮ್ಮ ಕೈಲಾದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ ಅಥವಾ ಬಹುಮತ ಸಾಬೀತುಪಡಿಸಿ ನೋಡೋಣ’ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ಸವಾಲು ಹಾಕಿದೆ. ‘ಸದನದಲ್ಲಿ ಬಹುಮತ ಸಾಬೀತುಪಡಿಸಲು ಬಿಜೆಪಿ ವಿಫಲವಾದರೆ ಎರಡನೇ ಅತಿದೊಡ್ಡ ಪಕ್ಷವಾದ ಶಿವಸೇನೆ ಸರ್ಕಾರ ರಚಿಸುವ ಹಕ್ಕು ಮಂಡಿಸುತ್ತದೆ’ ಎಂದು ಶಿವಸೇನೆ ಹೇಳಿದೆ.

‘ಎನ್‌ಸಿಪಿಯ 54, ಕಾಂಗ್ರೆಸ್‌ನ 44 ಮತ್ತು ಕೆಲ ಪಕ್ಷೇತರ ಶಾಸಕರೊಂದಿಗೆ ನಾವು ಬಹುಮತದ ಸಂಖ್ಯೆ ಮುಟ್ಟುತ್ತೇವೆ. ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆ ಅಲಂಕರಿಸಲಿದೆ. ಅದಕ್ಕಾಗಿ ಸ್ವತಂತ್ರ ವಿಚಾರಧಾರೆ ಪ್ರತಿಪಾದಿಸುವ ಮೂರೂ ಪಕ್ಷಗಳು ಎಲ್ಲರಿಗೂ ಒಪ್ಪುವಂಥ ನೀತಿಗಳನ್ನು ರೂಪಿಸಬೇಕಿದೆ’ ಎಂದು ಶಿವಸೇನೆ ಹೇಳಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಗೆ 105 ಮತ್ತು ಶಿವಸೇನೆಗೆ 56 ಸದಸ್ಯಬಲವಿದೆ. ಸರ್ಕಾರ ರಚನೆಗೆ 145 ಸದಸ್ಯರ ಬೆಂಬಲ ಬೇಕಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಸಾಮಾಜಿಕ ಪ್ರಾಮುಖ್ಯತೆ

‘2014ರ ಚುನಾವಣೆಯ ನಂತರವೂ ಯಾರಿಗೂ ಬಹುಮತವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ವಿಧಿಸಿದ್ದ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು ಶಿವಸೇನೆ ಸರ್ಕಾರ ರಚನೆಗೆ ಬೆಂಬಲ ನೀಡಿತ್ತು. ಈ ಬಾರಿಯೂ ಶಿವಸೇನೆ ಹೀಗೆಯೇ ವರ್ತಿಸಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ನಾವು  ಮೊದಲು ಕಣ್ಣುಮಿಟುಕಿಸುವುದಿಲ್ಲ (ಸಂಧಾನಕ್ಕೆ ಮುಂದಾಗುವುದಿಲ್ಲ)’ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.

ಅ.24ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರೂ ಮುಖ್ಯಮಂತ್ರಿ ಹುದ್ದೆ ಮತ್ತು ಅಧಿಕಾರ ಹಂಚಿಕೆ ವಿಚಾರವಾಗಿ ಬಿಜೆಪಿ ಮತ್ತು ಶಿವಸೇನೆ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ.

‘ಬಿಜೆಪಿಯನ್ನು ಹೊರಗಿಟ್ಟು ಶಿವಾಜಿ ಮಹಾರಾಜರ ಆದರ್ಶ ಒಪ್ಪುವ ಸರ್ಕಾರ ರಚಿಸಲು ಶಿವಸೇನೆ ಮುಂದಾದರೆ ನಾವು ಸಕಾರಾತ್ಮಕವಾಗಿ ಆಲೋಚಿಸುತ್ತೇವೆ’ ಎಂದು ಎನ್‌ಸಿಪಿ ಪುನರುಚ್ಚರಿಸಿದ್ದು ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿತ್ತು.

‘ಜನ ನಮಗೆ ವಿರೋಧ ಪಕ್ಷದಲ್ಲಿ ಕೂರುವಂತೆ ಹೇಳಿದ್ದಾರೆ. ನಾವು ಅಲ್ಲಿಯೇ ಇರುತ್ತೇವೆ’ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್ ಇಂಥ ಚರ್ಚೆಗಳಿಗೆ ತಣ್ಣೀರು ಎರಚಿದ್ದರು. ‘ಶಿವಸೇನೆ ಮುಖ್ಯಮಂತ್ರಿ ಹುದ್ದೆ ಕೇಳುವುದರಲ್ಲಿ ತಪ್ಪೇನೂ ಇಲ್ಲ’ ಎನ್ನುವ ಮೂಲಕ ತಾವು ಶಿವಸೇನೆಯ ಪರ ಇರುವ ಇಂಗಿತ ವ್ಯಕ್ತಪಡಿಸಿದ್ದರು.

ಶರದ್‌ ಪವಾರ್ ಅವರನ್ನು ಶಿವಸೇನೆಯ ನಾಯಕ ಸಂಜಯ್‌ ರಾವುತ್‌ ಭೇಟಿಯಾದ ವಿಚಾರವು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ‘ಏನು ಚರ್ಚೆ ನಡೆಯಿತು’ ಎಂಬ ಪ್ರಶ್ನೆಗೆ, ‘ದೀಪಾವಳಿ ಸದ್ಭಾವನೆ’ ಎಂದು ಎರಡೂ ಪಕ್ಷಗಳ ನಾಯಕರು ನಕ್ಕು ಸುಮ್ಮನಾಗಿದ್ದರು.

ಪ್ರತಿಕ್ರಿಯಿಸಿ (+)