ಶನಿವಾರ, ಮಾರ್ಚ್ 6, 2021
32 °C
ಪ್ರಧಾನಿ ವಿರುದ್ಧ ಶಿವಸೇನಾ ಟೀಕಾ ಪ್ರಹಾರ

ಉದ್ಯಮಿಗಾಗಿ ರಫೇಲ್‌ ಒಪ್ಪಂದವೇ: ಶಿವಸೇನಾ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರಫೇಲ್‌ ಒಪ್ಪಂದ ಕುರಿತು ಶಿವಸೇನಾ ಕಿಡಿಕಾರಿದ್ದು, ಸ್ಪಷ್ಟನೆ ನೀಡುವಂತೆ ಪ್ರಧಾನಿ ಅವರನ್ನು ಒತ್ತಾಯಿಸಿದೆ.

‘ಭಾರತೀಯ ವಾಯು ಪಡೆ ಬಲಪಡಿಸುವ ಉದ್ದೇಶಕ್ಕಾಗಿಯೋ  ಅಥವಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಉದ್ಯಮಿಯೊಬ್ಬರ ಹಿತಾಸಕ್ತಿ ಕಾಪಾಡಲು ರಫೇಲ್‌ ಒಪ್ಪಂದ ಮಾಡಿಕೊಳ್ಳಲಾಗಿದೆಯೋ ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು’ ಎಂದು ಆಗ್ರಹಿಸಿದೆ.

ರಫೇಲ್‌ ಒಪ್ಪಂದ ಕುರಿತು ಫ್ರಾನ್ಸ್‌ ಜತೆ ಪ್ರಧಾನಿ ಕಚೇರಿಯೂ ಏಕಕಾಲಕ್ಕೆ ಚರ್ಚೆ ನಡೆಸುತ್ತಿರುವುದಕ್ಕೆ ರಕ್ಷಣಾ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ’ ಹಿಂದೂ’ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಪ್ರಸ್ತಾಪಿಸಿ ಶಿವಸೇನಾ ಈ ಪ್ರಶ್ನೆಯನ್ನು ಕೇಳಿದೆ.

‘ಸಂಸತ್‌ನಲ್ಲಿ ಗುರುವಾರ ಪ‍್ರಧಾನಿ ನರೇಂದ್ರ ಮೋದಿ ದೇಶಭಕ್ತಿ ಬಗ್ಗೆ ಭಾಷಣ ಮಾಡಿ ರಫೇಲ್‌ ಒಪ್ಪಂದವನ್ನು  ಸಮರ್ಥಿಸಿಕೊಂಡರು. ಆದರೆ, ಮರುದಿನವೇ ‘‘ಕಪ್ಪು ಪುಟ‘‘ದ ದಾಖಲೆ ಹೊರಬಿತ್ತು. ಇದರಿಂದ, ದೇಶಭಕ್ತಿ ಘೋಷಣೆಗಳನ್ನು ಹಾಕುವವರು ಮತ್ತು ಸದನದಲ್ಲಿ ಮೇಜುಕುಟ್ಟಿದವರು ಮೌನವಹಿಸಿದರು’ ಎಂದು ಶಿವಸೇನಾದ ಮುಖವಾಣಿ ’ಸಾಮ್ನಾ’ ಸಂಪಾದಕೀಯದಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ.

‘ರಕ್ಷಣಾ ಇಲಾಖೆಯನ್ನು ಬಲಪಡಿಸುವ ಉದ್ದೇಶವೇ ಕಾಂಗ್ರೆಸ್‌ಗೆ ಇಲ್ಲ ಎಂದು ಪ್ರಧಾನಿ ಸಂಸತ್ತಿನಲ್ಲಿ ಆರೋಪಿಸಿದ್ದಾರೆ. ಈ ಆರೋಪ ಮಾಡಿದ ಮರುದಿನವೇ, ಒಪ್ಪಂದದಲ್ಲಿ ಮೋದಿ ಅವರ ವೈಯಕ್ತಿಕ ಹಿತಾಸಕ್ತಿ ಕುರಿತ ದಾಖಲೆಗಳು ಹೊರಬಿದ್ದವು’ ಎಂದು ಟೀಕಿಸಿದೆ.

 ‘ರಫೇಲ್‌ ಯುದ್ಧ ವಿಮಾನಗಳ ದರಗಳ ಕುರಿತು ಮತ್ತು ಯಾರಿಗೆ ಗುತ್ತಿಗೆ ನೀಡಬೇಕು ಎನ್ನುವ ಬಗ್ಗೆ ಮೋದಿ ಅವರೇ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ, ಎಲ್ಲ ಆರೋಪ ಮತ್ತು ಟೀಕೆಗಳನ್ನು ಅವರೇ ಎದುರಿಸಬೇಕು’ ಎಂದು ಶಿವಸೇನಾ ಹೇಳಿದೆ.

‘ರಾಷ್ಟ್ರೀಯ ಭದ್ರತೆಯಂತಹ ವಿಷಯಗಳ ಬಗ್ಗೆ ವಿವರಣೆ ಕೋರುವುದು ಟೀಕೆ ಹೇಗಾಗುತ್ತದೆ. ವಿರೋಧ ಪಕ್ಷಗಳನ್ನು ಈ ವಿಷಯದಲ್ಲಿ ನಿಂದಿಸುವುದರಲ್ಲಿ ಅರ್ಥವಿಲ್ಲ. ವಿರೋಧ ಪಕ್ಷಗಳು ಸಹ ನಾಶವಾಗಬಹುದು. ಆದರೆ, ಸತ್ಯ ಮಾತ್ರ ಜೀವಂತವಾಗಿರುತ್ತದೆ’ ಎಂದು ಹೇಳಿದೆ.

****

ರಫೇಲ್‌ ಒಪ್ಪಂದದ ವಹಿವಾಟನ್ನು ಮೋದಿ ಅವರೇ ನೇರವಾಗಿ ನಡೆಸಿದ್ದಾರೆ. ರಕ್ಷಣಾ ಸಚಿವರು ಮತ್ತು ರಕ್ಷಣಾ ಕಾರ್ಯದರ್ಶಿ ಅವರನ್ನು ದೂರವಿಡಲಾಗಿದೆ.

– ಶಿವಸೇನಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು