ಚೌಹಾಣ್‌ ಯಾತ್ರೆ ಮೇಲೆ ಶೂ, ಕಲ್ಲು ತೂರಾಟ

7

ಚೌಹಾಣ್‌ ಯಾತ್ರೆ ಮೇಲೆ ಶೂ, ಕಲ್ಲು ತೂರಾಟ

Published:
Updated:

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ‘ಜನ ಆಶೀರ್ವಾದ ಯಾತ್ರೆ’ ನಡೆಸುತ್ತಿರುವ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಅವರ ಮೇಲೆ ಸೀಧೀ ಜಿಲ್ಲೆಯಲ್ಲಿ ಶೂ ಎಸೆಯಲಾಗಿದೆ. ಚೌಹಾಣ್‌ ಅವರ ಮೇಲೆ ಶೂ ಬಿದ್ದಿಲ್ಲ. ಇದು ಭಾನುವಾರ ರಾತ್ರಿ ನಡೆದಿದೆ. ಅದಕ್ಕೂ ಮೊದಲು, ಸೀಧೀ ಜಿಲ್ಲೆಯ ಚುರ್ಹಾತ್‌ ಪಟ್ಟಣದಲ್ಲಿ ‘ಜನ ಆಶೀರ್ವಾದ ಯಾತ್ರೆ’ಯ ರಥದ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಕಲ್ಲು ತೂರಾಟದಲ್ಲಿ ‘ರಥ’ ಸ್ವಲ್ಪ ಹಾನಿಗೊಂಡಿದೆ. ಈ ಜಿಲ್ಲೆ ಉತ್ತರ ಪ್ರದೇಶದ ಗಡಿ ಪ್ರದೇಶದಲ್ಲಿದೆ.

ಶೂ ಎಸೆದ ಪ್ರಕರಣದ ಬಳಿಕ ಚೌಹಾಣ್‌ ಅವರು ತಮ್ಮ ಪ್ರಚಾರ ಭಾಷಣ ನಿಲ್ಲಿಸಿದರು. ಈ ಎರಡು ಘಟನೆಗಳಿಂದ ಬಿಜೆಪಿ ಕೆರಳಿದೆ. ಕಾಂಗ್ರೆಸ್‌ ಪಕ್ಷವು ತಮ್ಮ ರಕ್ತಕ್ಕಾಗಿ ಕಾತರಿಸುತ್ತಿದೆ. ಆ ಪಕ್ಷವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸ್ಪಷ್ಟಪಡಿಸಬೇಕು ಎಂದು ಚೌಹಾಣ್‌ ಆಗ್ರಹಿಸಿದ್ದಾರೆ. 

ಮುಖ್ಯಮಂತ್ರಿಯನ್ನು ಹತ್ಯೆ ಮಾಡಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ಭೂಪೇಂದ್ರ ಸಿಂಗ್‌ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಇವರೆಲ್ಲರೂ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವರು ಎಂದು ಅವರು ಹೇಳಿದ್ದಾರೆ. 

ವಿರೋಧ ಪಕ್ಷದ ನಾಯಕ ಅಜಯ್‌ ಸಿಂಗ್‌ ಅವರ ಬೆಂಬಲಿಗರೇ ಎರಡೂ ಘಟನೆಗಳ ಹಿಂದೆ ಇದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಆಪಾದಿಸಿದ್ದಾರೆ. ಕಲ್ಲು ತೂರಾಟ ನಡೆದ ಚುರ್ಹಾತ್‌, ಅಜಯ್‌ ಸಿಂಗ್‌ ಅವರು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರ. 

ಇದು ಗುಪ್ತಚರ ವೈಫಲ್ಯದ ಕಣ್ಣಿಗೆ ರಾಚುವ ಪ್ರಕರಣ. ಅದನ್ನು ಮುಚ್ಚಿಡುವುದಕ್ಕಾಗಿ ಕಾಂಗ್ರೆಸ್ಸಿಗರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಅಜಯ್‌ ಸಿಂಗ್‌ ಹೇಳಿದ್ದಾರೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ರಾಜೇ ಯಾತ್ರೆಗೆ ಕಪ್ಪು ಬಾವುಟ
(ಜೈಪುರ ವರದಿ):
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ‘ಗೌರವ ಯಾತ್ರೆ’ಯ ಎರಡನೇ ಹಂತವು ಬಾರ್ಮೇರ್‌ ಜಿಲ್ಲೆಯ ಪಚ್‌ಪದ್ರ ಎಂಬಲ್ಲಿ ಗೊಂದಲದಿಂದಲೇ ಸಮಾರೋಪಗೊಂಡಿತು. ಇಲ್ಲಿ ರ್‍ಯಾಲಿಗೆ ಕಪ್ಪು ಬಾವುಟ ಪ್ರದರ್ಶಿಸಲಾಯಿತು. 

ಯಾತ್ರೆಯ ಮೊದಲನೇ ಹಂತದ ಸಮಾರೋಪದ ಸಂದರ್ಭದಲ್ಲಿಯೂ ಚಿತ್ತೋರಗಡದಲ್ಲಿ ರಜಪೂತ ಸಮುದಾಯದ ಜನರಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಓಸಿಯಂ ಮತ್ತು ಪಿಪರ್‌ ಪ್ರದೇಶಗಳಲ್ಲಿ ಕಲ್ಲು ತೂರಾಟವೂ ನಡೆದಿತ್ತು. ಬಾರ್ಮೇರ್‌ ಜಿಲ್ಲೆಯ ಪರೋವೂ, ಸಿವಾನಾ ಮುಂತಾದ ಪ್ರದೇಶಗಳಲ್ಲಿ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !