ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo ಆಯ್ತು ಇದೀಗ #WhyOnlyMe: ದಲಿತ ಬಾಲಕಿ ಶಿರಚ್ಛೇದ ಪ್ರಕರಣ ಮುನ್ನೆಲೆಗೆ

Last Updated 31 ಅಕ್ಟೋಬರ್ 2018, 15:51 IST
ಅಕ್ಷರ ಗಾತ್ರ

ಚೆನ್ನೈ: ಸೇಲಂನ ಅತ್ತೂರು ಪಟ್ಟಣದಿಂದ 14 ಕಿ.ಮೀ ದೂರದಲ್ಲಿರುವ ತಾಲವಟ್ಟಿ ಎಂಬ ಹಳ್ಳಿಯಲ್ಲಿ ಪ್ರಬಲ ಸಮುದಾಯದ ದುಷ್ಕರ್ಮಿ ದಿನೇಶ್‌ ಕುಮಾರ್‌ ಎಂಬಾತ ದಲಿತ ಬಾಲಕಿ ರಾಜಲಕ್ಷ್ಮೀ ತಲೆ ಕಡಿದು ರಸ್ತೆಗೆ ಬಿಸಾಡಿದ್ದ ಪ್ರಕರಣ ತಡವಾಗಿ ಮುನ್ನಲೆಗೆ ಬಂದಿದೆ. #MeToo ಅಭಿಯಾನದಲ್ಲಿ ಬ್ಯುಸಿಯಾಗಿದ್ದ ತಮಿಳುನಾಡು ಇದೀಗ ಅಕ್ಟೋಬರ್‌ 23ರಂದು ಘಟಿಸಿದ್ದ ಪ್ರಕರಣದತ್ತ ಕಣ್ಣಾಯಿಸಿದೆ.ದಲಿತ ಹೋರಾಟಗಾರರು ರಾಜಲಕ್ಷ್ಮೀ ಸಾವಿನ ವಿರುದ್ಧ ಜಾಗೃತ ದನಿ ಎತ್ತಿದ್ದಾರೆ.

ಬಾಲಕಿಯ ಹಳ್ಳಿಗೆ ತೆರಳಿ ಕೊಲೆ ಪ್ರಕರಣ ವಿರುದ್ಧ ಮೊದಲಿಗರಾಗಿ ದನಿ ಎತ್ತಿದ ದಲಿತರ ಹಕ್ಕುಗಳ ಹೋರಾಟ ಸಂಸ್ಥೆ ಎವಿಡೆನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎ.ಕತೀರ್‌, ‘ಇದೂ ಒಂದು ರೀತಿಯ #MeToo ಅಪರಾಧ. ದಿನೇಶ್‌ ವರ್ತನೆಯನ್ನು ರಾಜಲಕ್ಷ್ಮೀ ವಿರೋಧಿಸಿದ್ದಳು. ಬಾಲಕಿಯನ್ನು ಕೊಲೆ ಮಾಡಿರುವುದು ಜಾತಿ ಹಾಗೂ ಲೈಂಗಿಕ ಅಪರಾಧವಾಗಿದೆ. ಹೀಗಾಗಿ ಇದನ್ನು ಎರಡೂ ದೃಷ್ಟಿಯಿಂದ ಪರಿಗಣಿಸಬೇಕು’ ಎಂದಿದ್ದಾರೆ.

‘ರಾಜಲಕ್ಷ್ಮೀ ಹಾಗೂ ತಾಯಿ ಚಿನ್ನಪೊಣ್ಣು ಅವರು ಮನೆಯಲ್ಲಿ ಹೂ ಕಟ್ಟುತ್ತಿದ್ದ ವೇಳೆ ಬಂದ ದಿನೇಶ್‌ ಕುಮಾರ್‌ ಜಾತಿ ಆಧಾರದಲ್ಲಿ ನಿಂದಿಸಲು ಆರಂಭಿಸಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತಿದ್ದಂತೆ ಚಿನ್ನಪೊಣ್ಣು ಭಯಗೊಂಡಿದ್ದಾರೆ. ಈ ವೇಳೆ ಏಕಾಏಕಿ ರಾಜಲಕ್ಷ್ಮೀಯ ತಲೆ ಕತ್ತರಿಸಿದ ಆತ, ತಲೆಯನ್ನು ಹೊರಗೆ ತೆಗೆದುಕೊಂಡು ಮನೆಯಿಂದ ತೆರಳಿದ್ದಾನೆ. ಆತ ತನ್ನ ಮನೆಗೆ ತೆರಳಿದಾಗ ಹೆದರಿದ ಆತನ ಪತ್ನಿ ಶಾರದಾ, ತಲೆಯನ್ನು ಎಲ್ಲಿಯಾದರೂ ಬಿಸಾಡುವಂತೆ ಸಲಹೆ ನೀಡಿದ್ದಾಳೆ. ನಂತರ ಅವರಿಬ್ಬರೂ ಠಾಣೆಗೆ ತೆರಳಿದ್ದಾರೆ’ ಎಂದು ಹೇಳಿದರು.

ಠಾಣೆಯಲ್ಲಿ ಶಾರದಾ ಅವರು ತಮ್ಮ ಪತಿಯನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೊಂಡಿದ್ದಾರೆ. ಇದನ್ನು ಅಲ್ಲಗಳೆಯುವ ಕತೀರ್‌, ‘ಅವರು ತಮ್ಮ ಪತಿಯನ್ನು ಪಾರುಮಾಡಲು ಹೀಗೆ ಹೇಳುತ್ತಿದ್ದು, ತನಿಖೆ ನಡೆದರೆ ಆತ ದೈಹಿಕವಾಗಿ ಮತ್ತುಮಾನಸಿಕವಾಗಿ ಸ್ವಸ್ಥನಾಗಿರುವುದು ತಿಳಿಯುತ್ತದೆ’ ಎಂದಿದ್ದಾರೆ.

‘ಬಾಲಕಿಯ ತಂದೆ ಸ್ಮಶಾನದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಹೀಗಾಗಿ ರಾತ್ರಿ ಘಟನೆ ನಡೆದ ಸಂದರ್ಭ ಅವರು ಮನೆಯಲ್ಲಿ ಇರಲಿಲ್ಲ. ರಾಜಲಕ್ಷ್ಮೀ ಹಾಗೂ ಚಿನ್ನಪೊಣ್ಣು ಮಾತ್ರವೇ ಇದ್ದರು. ಘಟನೆ ನಡೆದ ಮೂರು ದಿನಗಳ ಬಳಿಕ ನಾನು ಅವರ ಮನೆಗೆ ಭೇಟಿ ನೀಡಿದೆ. ಚಿನ್ನಪೊಣ್ಣು ತಮ್ಮ ಮಗಳ ತಲೆಯಿಲ್ಲದ ದೇಹವನ್ನು ಅವರ ಕೈಗಳಲ್ಲಿ ಹೇಗೆ ಹಿಡಿದುಕೊಂಡಿದ್ದರು ಎಂಬುದನ್ನು ಹೇಳಿದರು. ದಿನೇಶ್‌ ಕುಮಾರ್‌ ತನ್ನನ್ನುಚುಡಾಯಿಸುತ್ತಿದ್ದ ಬಗ್ಗೆರಾಜಲಕ್ಷ್ಮೀ ತಂದೆ–ತಾಯಿಗೆ ತಿಳಿಸಿದ್ದರು. ಆದಾಗ್ಯೂ ದಿನೇಶ್‌ನನ್ನು ಎದುರಿಸುವುದು ಸುಲಭವಲ್ಲ ಎಂಬ ಕಾರಣಕ್ಕೆ ಕುಟುಂಬ ಮೌನ ತಳೆದಿತ್ತು’ ಎಂದು ಹೇಳಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಜಾತಿಯ ಹಿನ್ನಲೆಯಲ್ಲಿ ತೆಗೆದುಕೊಂಡಿದ್ದಾರೆ. ಆದರೆ ಸಮಾಜ ಈ ಪ್ರಕರಣವನ್ನು ಲೈಂಗಿಕ ದೌರ್ಜನ್ಯದ ದೃಷ್ಟಿಯಿಂದ ಪರಿಗಣಿಸಿದ್ದು, ಜಾತಿಯ ದೃಷ್ಟಿಯಿಂದ ಪರಿಗಣಿಸುತ್ತಿಲ್ಲ ಎಂದೂ ಅವರು ಉಲ್ಲೇಖಿಸಿದ್ದಾರೆ.

ರಾಜಲಕ್ಷ್ಮೀ ಅವರ ಸೋದರ ಸಂಬಂಧಿ ಪಿ. ಜಗದೀಶ್‌, ‘ಪ್ರಕರಣವು ಎರಡೂ ರೀತಿಯ ಅಪರಾಧದಿಂದ ಕೂಡಿದೆ. ನಮ್ಮ ದೂರೂ ಅದನ್ನೇ ಹೇಳುತ್ತದೆ. ಆರಂಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಬಳಿಕ ಜಾತಿಯನ್ನು ಗುರಿಯಾಗಿಸಿ ನಿಂದಿಸಿದ್ದ. ಆತನನ್ನು ಜೈಲಿನಿಂದ ಬಿಡುಗಡೆ ಮಾಡದಂತೆ ಒತ್ತಾಯಿಸುತ್ತಿದ್ದೇವೆ. ಈ ಪ್ರಕರಣವನ್ನು ಪೋಕ್ಸೋ ಕಾಯಿದೆ ಅಡಿಯಲ್ಲಿಯೂ ದಾಖಲಿಸಿಕೊಳ್ಳಬೇಕು’ ಎಂದರು.

ಮರ್ಯಾದೆಗೇಡು ಹತ್ಯೆಯಾಗಿರುವ ಶಂಕರ್‌ ಎಂಬುವವರ ಪತ್ನಿಕೌಶಲ್ಯಾ ಅವರುಕತೀರ್‌ ಹೋರಾಟಕ್ಕೆ ಬೆಂಬಲಿಸಿದ್ದು, ಪ್ರಕರಣವು ಲೈಂಗಿಕ ಅಪರಾಧವೂ.. ಜಾತಿಆಧಾರದ ಅಪರಾಧವೂ ಹೌದು ಎಂದಿದ್ದಾರೆ. ಶಂಕರ್‌ ಅವರನ್ನು 2016ರಲ್ಲಿ ಕೊಲೆ ಮಾಡಲಾಗಿತ್ತು.

‘ನಾನು ಹೋರಾಟಗಾರ್ತಿ ವಳರ್‌ಮತಿ ಅವರೊಡನೆ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾಗ, ಮಾಧ್ಯಮದವರು ಸಂವೇದನಾರಹಿತ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇಂತಹ ಪ್ರಶ್ನೆಗಳನ್ನು ಅಪರಾಧಿಗಳಲ್ಲಿ ಏಕೆ ಯಾರೂ ಕೇಳುವುದಿಲ್ಲ ಎಂದು ಅಚ್ಚರಿಯಾಗುತ್ತದೆ’ ಎಂದು ಕತೀರ್‌ ಹೇಳಿದರು.

#MeToo ಆಂದೋಲನದತ್ತ ಎಲ್ಲರೂ ಎಚ್ಚರದಿಂದ ಇದ್ದಾಗಲೇಇಂತಹದೊಂದು ಭೀಬತ್ಸ ಕೃತ್ಯ ಬೆಳಕಿಗೆ ಬಂದಿಲ್ಲ.ಒಂದುವೇಳೆ #MeToo ಪ್ರಕರಣವೊಂದು ಕೊಳಗೇರಿಯಂತಹ ಪ್ರದೇಶದಲ್ಲಿದ್ದರೆ ಅದು ಅಂತ್ಯ ಕಾಣುವುದು ಕೊಲೆಯಲ್ಲೇ. ಸಂತ್ರಸ್ತರು ದನಿ ಎತ್ತುವುದಕ್ಕೆ, ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಅಲ್ಲಿ ಅವಕಾಶವೇ ಇರುವುದಿಲ್ಲ. ನಾಗರಿಕ ಸಮಾಜದಮೌನಇಂತಹ ಪ್ರಕರಣಗಳನ್ನು ಜಟಿಲಗೊಳಿಸುತ್ತದೆ. ನಾಗರಿಕ ಸಮಾಜವು ಸುಮ್ಮನೆ ಇದ್ದು ಬಿಡುವುದು, ತನ್ನಿಂತಾನೆ ಅಪರಾಧಹೆಚ್ಚುವುದಕ್ಕೆ ದಾರಿಯೇ ಹೊರತು ಬೇರೇನೂ ಅಲ್ಲ’ ಎಂದು ಅಭಿಪ್ರಾಯಪಟ್ಟರು.

ಇಂತಹ ನಿಶಬ್ದವನ್ನು ಮುರಿದು ಮುನ್ನಡೆಯುವ ಸಂಬಂಧ ಚೆನ್ನೈನಲ್ಲಿ ಬುಧವಾರ ಸಭೆ ನಡೆದಿತ್ತು. ಸಭೆಯಲ್ಲಿ ಭಾಗವಹಿಸಿದ್ದ ದಲಿತ ಚಳುವಳಿಗಾರ ಚೆಮ್ಮಲಾರ್‌ ಜೆಬರಾಜ್‌, ‘ಪ್ರಬಲ ಸಮುದಾಯದವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿರುವದಲಿತ ಹೆಣ್ಣು ಮಕ್ಕಳು, ಮಹಿಳೆಯರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು #ನನಗೆಮಾತ್ರವೇಏಕೆ?(Why Only Me)ಮಾದರಿಯಲ್ಲಿ ದನಿ ಎತ್ತಲು ನಿರ್ಧರಿಸಬೇಕು. ಇದು ಕೇವಲ #MeToo ಅಲ್ಲ. ಇಲ್ಲಿರುವವರೆಲ್ಲರೂ ಏಕಾಂಗಿಗಳು. ನಾಗರಿಕ ಸಮಾಜ ಮೌನವಾಗಿದೆ. ರಾಜಕಾರಣಿಗಳು–ಪ್ರಗತಿಪರ ಹೋರಾಟಗಾರರು ಸುಮ್ಮನಿದ್ದಾರೆ. ಮಾಧ್ಯಮಗಳೂ ಸುಮ್ಮನಿವೆ. ನಾವು ಅದನ್ನು ಮೀರಿ ನಿಲ್ಲಬೇಕು’ ಎಂದು ಕರೆ ನೀಡಿದರು.

‘#MeToo ಪ್ರಕರಣಗಳು ಕೆಲಸದ ಸ್ಥಳಗಳು ಇಲ್ಲವೇ ಸಾರ್ವಜನಿಕ ಪ್ರದೇಶದಲ್ಲಿ ನಡೆಯುತ್ತವೆ. ಆದರೆ ರಾಜಲಕ್ಷ್ಮೀ ಕೊಲೆಯಾಗಿರುವುದು ಅವಳದೇ ನೆಲೆಯಲ್ಲಿ. ದಲಿತರು ತಮ್ಮ ಸ್ವಂತ ಸ್ಥಳದಲ್ಲಿದ್ದರೂ ಸುರಕ್ಷಿತವಾಗಿಲ್ಲ. ದಿನೇಶ್‌ ಕುಮಾರ್‌ ಕೇವಲ ರಾಜಲಕ್ಷ್ಮೀ ಅವರನ್ನು ಕೊಲೆಮಾಡಿ ಸುಮ್ಮನಾಗಿಲ್ಲ. ಆಕೆಯ ತಲೆಯನ್ನು ಕತ್ತರಿಸಿ ತನ್ನೊಡನೆ ತೆಗೆದುಕೊಂಡು ಹೋಗಿದ್ದಾನೆ. ಅವನೆಂತಹ ಜಾತಿವಾದಿ ಎಂಬುದನ್ನುಇದೇ ಹೇಳುತ್ತದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ನಮ್ಮ ಹೋರಾಟದ ದನಿ ಪ್ರಬಲವಾಗಬೇಕು. ಅದು ಕೇವಲ ಲೈಂಗಿಕ ದೌರ್ಜನ್ಯ ಕೊನೆಗಾಣಿಸಲಿಕ್ಕಾಗಿ ಅಲ್ಲ. ಜಾತೀಯತೆಯನ್ನು ತೊಡೆಯಲಿಕ್ಕೆ.ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆಯಂತಹ ‌ಸಂದರ್ಭಗಳಲ್ಲಿ ತಮಟೆ ಬಡಿಯುತ್ತೇವೆ. ಅಥವಾ ಶುಭ ಸಂದರ್ಭಗಳಲ್ಲಿ ನಾದಸ್ವರಗಳನ್ನು ನುಡಿಸಲಾಗುತ್ತದೆ. ಬುಧವಾರದ ನಮ್ಮ ಸಭೆಯಲ್ಲಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಸಲುವಾಗಿ ನಾದಸ್ವರಗಳನ್ನು ನುಡಿಸಿದೆವು’ ಎಂದರು.

ಅಲ‌್ಫಾನ್ಸೋ ರತ್ನಾ ಹಾಗೂ ಕಾರ್ಯಕ್ರಮದಕೆಲವು ಸಂಘಟಕರು ರಾಜಲಕ್ಷ್ಮೀ ಸಾವಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಚಿಸಿದ್ದ ಕವಿತೆಯನ್ನು ವಾಚಿಸಿದರು.

ನನಗೆ ಮಾತ್ರವೇ ಯಾಕೆ?

ಜಾತಿಯ ಹೆಸರಿನಲ್ಲಿ ಏಕೆ ನನ್ನನ್ನು ಸಂತ್ರಸ್ತೆಯನ್ನಾಗಿಸಲಾಗುತ್ತಿದೆ?

ಸತ್ಯವನ್ನು ಕೊಂದ ಮಾತ್ರಕ್ಕೆ

ಅಥವಾ ಜಾತಿಯನ್ನು ಬೆಂಬಲಿಸಿದ ಮಾತ್ರಕ್ಕೆ

ಗುಲಾಮಗಿರಿ ಉಳಿಯದು

ಇದು ಪ್ರತಿರೋಧಿಸುವ ಸಮಯ

ರಾಜಲಕ್ಷ್ಮೀ ಹಲವು ಕನಸುಗಳನ್ನು ಹೊಂದಿದ್ದಳು

ಅವಳು ಇನ್ನೂ ಮಗು ಎಂಬುದನ್ನೂ ಲೆಕ್ಕಿಸದೆ

ನೀವು ಅವಳನ್ನೇ ಕೊಂದಿದ್ದೀರಿ

ಜಾತಿಯನ್ನು ನಾಶಪಡಿಸಲಿಕ್ಕಾಗಿ

ಅವಳು ಮತ್ತೆ ಹುಟ್ಟಲಿದ್ದಾಳೆ.

ನಾವು ಸಂಘಟಿತರಾಗಲು ಬಿಡಿ

ಬದಲಾವಣೆಯತ್ತ ಮುನ್ನಡೆಯಲು ನಮ್ಮನ್ನು ಬಿಡಿ

ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ನಮ್ಮನ್ನು ಬಿಡಿ

ದೌರ್ಜನ್ಯದ ವಿರುದ್ಧ

ನಮ್ಮ ಮೌನವನ್ನು ಮುರಿಯಲು ಬಿಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT