ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದಿ ಕುಟುಂಬದ ‘ಯಾದವೀ ಕಲಹ’?

ಸಮಾಜವಾದಿ ಪಕ್ಷದ ಮೊದಲ ಪಟ್ಟಿ ಬಿಡುಗಡೆ* 9 ಜನರ ಪೈಕಿ ಮುಲಾಯಂ ಕುಟುಂಬದ ನಾಲ್ವರಿಗೆ ಟಿಕೆಟ್‌
Last Updated 8 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಲಖನೌ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಸಮಾಜವಾದಿ ಪಕ್ಷ ಶುಕ್ರವಾರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಸೇರಿದಂತೆ ಮೊದಲ ಪಟ್ಟಿಯಲ್ಲಿ ಒಂಬತ್ತು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ.

ಮುಲಾಯಂ ಸಿಂಗ್‌ ಎಂದಿನಂತೆ ತಮ್ಮ ತವರು ಕ್ಷೇತ್ರ ಮೈನ್‌ಪುರಿಯಿಂದ ಕಣಕ್ಕಿಳಿಯಲಿದ್ದಾರೆ. 2014ರಲ್ಲಿ ಮೈನ್‌ಪುರಿ ಮತ್ತು ಅಜಂಗಡ ಈ ಎರಡೂ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಮುಲಾಯಂ ಸಿಂಗ್‌ ಎರಡೂ ಕಡೆ ಗೆಲುವು ಸಾಧಿಸಿದ್ದರು.

ಅಜಂಗಡ ಉಳಿಸಿಕೊಂಡಿದ್ದ ‘ನೇತಾಜಿ’ ಮೈನ್‌ಪುರಿ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಉಪ ಚುನಾವಣೆಯಲ್ಲಿ ಮುಲಾಯಂ ಅವರ ಸಹೋದರನ ಮೊಮ್ಮಗ ತೇಜ್‌ ಪ್ರತಾಪ್ ಯಾದವ್‌ ಆಯ್ಕೆಯಾಗಿದ್ದರು.

ಕನೌಜ್‌ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಡಿಂಪಲ್‌ ಯಾದವ್‌ ಮತ್ತೆ ಸ್ಪರ್ಧಿಸಲಿದ್ದಾರೆ. ಈ ಬಾರಿ ಡಿಂಪಲ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.

ಫಿರೋಜಾಬಾದ್‌ ಲೋಕಸಭಾ ಕ್ಷೇತ್ರದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್‌ ಯಾದವ್‌ ಅವರ ಪುತ್ರ ಅಕ್ಷಯ್‌ ಯಾದವ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಈ ಕ್ಷೇತ್ರದಲ್ಲಿ ಅಕ್ಷಯ್‌ ತಮ್ಮ ಚಿಕ್ಕಪ್ಪ ಮತ್ತು ಸಮಾಜವಾದಿ ಪಕ್ಷದ ಬಂಡಾಯ ಅಭ್ಯರ್ಥಿ ಶಿವಪಾಲ್‌ ಯಾದವ್‌ ವಿರುದ್ಧ ಸೆಣಸಲಿದ್ದಾರೆ.

ಫಿರೋಜಾಬಾದ್‌ನಿಂದ ಕಣಕ್ಕಿಳಿಯುವುದಾಗಿ ಶಿವಪಾಲ್‌ ಸಿಂಗ್‌ ಯಾದವ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರಿಂದ ಚಿಕ್ಕಪ್ಪ (ಶಿವಪಾಲ್‌ ಯಾದವ್‌) ಮತ್ತು ಸಹೋದರನ ಪುತ್ರನ (ಅಕ್ಷಯ್‌ ) ನಡುವೆ ತುರುಸಿನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಸ್ಥಳೀಯ ಶಾಸಕ ಹರಿಓಂ ಯಾದವ್‌ ಸೇರಿದಂತೆ ಸಮಾಜವಾದಿ ಪಕ್ಷದ ಅನೇಕ ಮುಖಂಡರು ಶಿವಪಾಲ್‌ ಯಾದವ್‌ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ಫಿರೋಜಾಬಾದ್‌ನಲ್ಲಿಯ ಯಾದವೀ ಕಲಹ ಭಾರಿ ತುರುಸಿನಿಂದ ಕೂಡಿದ್ದು, ಯಾರ ಕೈ ಮೇಲಾಗಬಹುದು ಎಂಬ ಕುತೂಹಲ ಮೂಡಿಸಿದೆ.

ಅಖಿಲೇಶ್‌ ಯಾದವ್‌ ಅವರ ಚಿಕ್ಕಪ್ಪನ ಮಗ ಮತ್ತು ಬದಾಯೂ ಕ್ಷೇತ್ರದ ಹಾಲಿ ಸಂಸದ ಧರ್ಮೇಂದ್ರ ಯಾದವ್‌ ಎರಡನೇ ಬಾರಿ ಇದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಇಟಾವಾ ಲೋಕಸಭಾ ಕ್ಷೇತ್ರದಿಂದ ಕಮಲೇಶ್‌ ಕಥೇರಿಯಾ, ರಾಬರ್ಟ್ಸ್‌ಗಂಜ್‌ನಿಂದ ಬೈಲಾಲ್‌ ಕೋಲ್ ಮತ್ತು ಬಹರಾಯಿಚ್‌ನಿಂದ ಶಬೀರ್‌ ವಾಲ್ಮೀಕಿ ಅವರು ಕಣಕ್ಕಿಳಿಯಲಿದ್ದಾರೆ. ಈ ಮೂರು ಮೀಸಲು ಕ್ಷೇತ್ರಗಳಾಗಿವೆ.

ಲಖಿಮ್‌ಪುರ–ಖೇರಿ ಮತ್ತು ಹರ್ದೋಯಿ ಲೋಕಸಭಾ ಕ್ಷೇತ್ರಗಳಿಂದ ಕ್ರಮವಾಗಿ ಪೂರ್ವಿ ವರ್ಮಾ ಮತ್ತು ಉಷಾ ವರ್ಮಾ ಸಮಾಜವಾದಿ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ 37 ಮತ್ತು ಬಹಜನ ಸಮಾಜವಾದಿ ಪಕ್ಷ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಆರ್‌ಎಲ್‌ಡಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಸ್ಪರ್ಧಿಸಲಿರುವ ರಾಯಬರೇಲಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಣಕ್ಕಿಳಿಯಲಿರುವ ಅಮೇಠಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲುಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT