ಬಿಎಸ್‌ವೈ ಒಪ್ಪಿಗೆ ಪಡೆದೇ ವಿಶ್ವಾಸ ಮತಕ್ಕೆ ದಿನ ನಿಗದಿ

ಶುಕ್ರವಾರ, ಜೂಲೈ 19, 2019
23 °C
ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿಕೆ

ಬಿಎಸ್‌ವೈ ಒಪ್ಪಿಗೆ ಪಡೆದೇ ವಿಶ್ವಾಸ ಮತಕ್ಕೆ ದಿನ ನಿಗದಿ

Published:
Updated:

ಬೆಂಗಳೂರು: ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಮಾತನಾಡಿ  ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿ ಮಾಡುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ಕುಮಾರಸ್ವಾಮಿ ಬುಧವಾರ (ಜು.17) ವಿಶ್ವಾಸ ಮತ ಯಾಚಿಸಲು ನಿರ್ಧಾರಿಸಿದ್ದಾರೆ. ಆದರೆ, ಆ ದಿನಾಂಕಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಯಡಿಯೂರಪ್ಪ ಅವರನ್ನು ಕೇಳಿಯೇ ದಿನಾಂಕ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಸಭಾಧ್ಯಕ್ಷ ರಮೇಶ್‌ ಕುಮಾರ್ ಅವರು ಸಂಜೆ ಕರೆದಿದ್ದ ಕಲಾಪ ಸಲಹಾ ಸಮಿತಿ ಸಭೆಗೆ ಯಡಿಯೂರಪ್ಪ ಹಾಜರಾಗಿರಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ರಮೇಶ್‌ ಕುಮಾರ್‌, ‘ವಿಶ್ವಾಸ ಮತ ನಿರ್ಣಯ ಮಂಡಿಸುವುದಕ್ಕೆ ಮುನ್ನ ವಿರೋಧ ಪಕ್ಷಕ್ಕೆ ಮಾಹಿತಿ ನೀಡಬೇಕು. ಆಡಳಿತ ಮತ್ತು ವಿರೋಧ ಪಕ್ಷದವರು ಸೇರಿ ನಿರ್ಣಯ ಮಂಡಿಸಲು ಒಪ್ಪಿಗೆ ನೀಡಬೇಕು. ಏಕಪಕ್ಷೀಯವಾಗಿ ಗೊತ್ತುವಳಿ ಮಂಡಿಸುವುದಕ್ಕೆ ಆಗುವುದಿಲ್ಲ’ ಎಂದರು.

‘ಶಾಸಕರ ಅನರ್ಹತೆ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮತ್ತು ಅತೃಪ್ತ ಶಾಸಕರ ವಿಚಾರಣೆ ನಡೆಸಲಿಲ್ಲ. ಮಂಗಳವಾರ ಸುಪ್ರೀಂಕೋರ್ಟ್‌ನ ತೀರ್ಮಾನ ಪ್ರಕಟವಾಗುವವರೆಗೆ ಕಾಯುತ್ತೇನೆ.  ಅಲ್ಲದೆ, ಇಂದು ಮೂವರು ಶಾಸಕರಿಗೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದೆ. ವಿಚಾರಣೆ ಮುಂದೂಡಿರುವುದಾಗಿ ಅವರಿಗೆ ಮಾಹಿತಿ ನೀಡಲಾಗಿದೆ’ ಎಂದು ರಮೇಶ್‌ ಕುಮಾರ್‌ ತಿಳಿಸಿದರು.

‘ವಿಶ್ವಾಸ ಮತ ಕೇಳುವ ಸಂಬಂಧ ಮುಖ್ಯಮಂತ್ರಿಯವರಿಂದ ಸಭಾಧ್ಯಕ್ಷರ ಕಚೇರಿಗೆ ಇನ್ನೂ ನೋಟಿಸ್‌ ತಲುಪಿಲ್ಲ. ವಿಶ್ವಾಸ ಮತ ಯಾಚನೆಗೆ ನೋಟಿಸ್‌ ನೀಡಬೇಕು. ವಿರೋಧ ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸಿದ ಬಳಿಕವೇ ದಿನಾಂಕ ಅಂತಿಮಗೊಳಿಸಲಾಗುವುದು’ ಎಂದು ಸಭಾಧ್ಯಕ್ಷರ ಕಚೇರಿ ಮೂಲಗಳು ತಿಳಿಸಿವೆ.

‘ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರು ವಿಶ್ವಾಸ ಮತ ಕೇಳುವುದಾಗಿ ಹೇಳಿದ್ದರೂ, ಅದನ್ನು ನಾವು ಸ್ವಯಂ ಪ್ರೇರಣೆಯಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ. ದಿನಾಂಕ ನಿಗದಿ ಮಾಡಲು ಮತ್ತೊಮ್ಮೆ ಕಲಾಪ ಸಲಹಾ ಸಮಿತಿ ಸಭೆ ಸೇರಬೇಕು. ಮುಖ್ಯಮಂತ್ರಿ ಕಚೇರಿಯಿಂದ ನೋಟಿಸ್‌ ತಲುಪಿದ ಬಳಿಕ ಸಲಹಾ ಸಮಿತಿ ಸಭೆ ಕರೆಯಲಿದ್ದಾರೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !