ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸ್ಫೋಟ: ಕೇರಳ– ತಮಿಳುನಾಡಿನಲ್ಲಿ ನಂಟು, ಮುಂದುವರಿದ ಎನ್‌ಐಎ ಶೋಧ

Last Updated 13 ಜೂನ್ 2019, 18:30 IST
ಅಕ್ಷರ ಗಾತ್ರ

ಕೊಯಮತ್ತೂರು: ಈಸ್ಟರ್ ದಿನದಂದು ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಎರಡನೇ ದಿನವೂ ಶೋಧ ಮುಂದುವರಿಸಿತು.

ಮೊಹಮ್ಮದ್ ಹುಸೇನ್, ಷಹಜಹಾನ್ ಮತ್ತು ಹಯತ್ ಉಲ್ಲಾ ಎಂಬುವರ ಮನೆಗಳಲ್ಲಿಅಧಿಕಾರಿಗಳು ಗುರುವಾರ ಬೆಳಿಗ್ಗೆ 4.30ರ ಹೊತ್ತಿಗೆ ತಪಾಸಣೆ ನಡೆಸಿದರು.

ಬುಧವಾರ ಶೋಧ ನಡೆಸಿದ್ದ ತಂಡ, ಮುಖ್ಯ ಆರೋಪಿ ಮೊಹಮ್ಮದ್ ಅಜುರುದ್ದೀನ್ ಹಾಗೂ ಇತರೆ ಆರು ಮಂದಿಯನ್ನು ಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.ಅಜರುದ್ದೀನ್, ಶೇಕ್ ಹಿದಾಯತುಲ್ಲಾ, ಅಕ್ರಮ್ ಸಿಂಧಾ, ಅಬೂಬಕ್ಕರ್ ಎಂ., ಸದ್ದಾಂ ಹುಸೇನ್ ಹಾಗೂ ಇಬ್ರಾಹಿಂ ಅಲಿಯಾಸ್ ಶಹೀನ್ ಎಂಬುವರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.

ಕೇರಳ ಹಾಗೂ ತಮಿಳುನಾಡಿನಲ್ಲಿ ಯುವಕರನ್ನು ಉಗ್ರಗಾಮಿ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಇವರ ಮೇಲಿದೆ.ಮೊಹಮ್ಮದ್ ಅಜರುದ್ದೀನ್‌ನನ್ನು 2 ವಾರಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿತು.

ಇಬ್ಬರೂ ಫೇಸ್‌ಬುಕ್‌ ಗೆಳೆಯರು

ಅಚ್ಚರಿಯೆಂದರೆ, ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣದ ಸಂಚುಕೋರ ಝೇಹ್ರಾ ಹಶೀಮ್‌ ಹಾಗೂ ಅಜರುದ್ದೀನ್ ಫೇಸ್‌ಬುಕ್ ಗೆಳೆಯರು.

‘ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಐಎಸ್ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುವ ಜವಾಬ್ದಾರಿಯನ್ನು ಬಂಧಿತರಿಗೆ ನೀಡಲಾಗಿತ್ತು. ಈ ತಂಡದ ನಾಯಕತ್ವವನ್ನು ಅಜರುದ್ದೀನ್ ವಹಿಸಿಕೊಂಡಿದ್ದು,KhilafahGFX ಎಂಬ ಫೇಸ್‌ಬುಕ್ ಪೇಜ್ ನಿರ್ವಹಿಸುತ್ತಿದ್ದ. ಇದರ ಮೂಲಕ ಐಎಸ್ ಉಗ್ರಗಾಮಿ ಸಂಘಟನೆಯ ಸಿದ್ಧಾಂತಗಳನ್ನು ಪ್ರಚುರಪಡಿಸುತ್ತಿದ್ದ. ಮೂಲಭೂತವಾದಕ್ಕೆ ಸಂಬಂಧಿಸಿದ ಅಂಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ’ ಎಂದು ಎನ್‌ಐಎ ತಿಳಿಸಿದೆ.ಹೀಗಿದ್ದರೂ, ಲಂಕಾ ಸ್ಫೋಟ ಪ್ರಕರಣಕ್ಕೂ ಅಜುರುದ್ದೀನ್‌ಗೂ ಇರುವ ನಂಟು ಖಚಿತಪಟ್ಟಿಲ್ಲ.

ಕಳೆದ ತಿಂಗಳು ಸೆರೆಸಿಕ್ಕಿದ್ದ ರಿಯಾಸ್ ಅಬೂಬಕ್ಕರ್ ಹಾಗೂಇಬ್ರಾಹಿಂ ಸೇರಿಕೊಂಡು ಐಎಸ್ ಪರವಾಗಿ ಕೇರಳದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಪ್ರಕರಣ ಸಂಬಂಧ ಬಂಧಿತರನ್ನು ಅಧಿಕಾರಿಗಳು ಕೊಚ್ಚಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಏಪ್ರಿಲ್ 12ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದ ಹೊಣೆಯನ್ನು ಐಎಸ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು. ಘಟನೆಯಲ್ಲಿ 200 ಮಂದಿ ಬಲಿಯಾಗಿದ್ದರು.

ಸ್ಫೋಟ ನಡೆಸಿದ್ದು ತಾನೇ ಎಂದು ಶ್ರೀಲಂಕಾದ ‘ನ್ಯಾಷನಲ್ ತೌಹೀದ್‌ ಜಮಾತ್’ (ಎನ್‌ಟಿಜೆ) ಹೇಳಿಕೊಂಡಿತ್ತು. ಇದು ಶ್ರೀಲಂಕಾ ತೌಹೀದ್ ಜಮಾತ್‌ನಿಂದ ವಿಭಜಿತವಾಗಿದ್ದ ಸಂಘಟನೆ. ಇದರ ಬೇರು ಚೆನ್ನೈನಲ್ಲಿರುವ ತಮಿಳುನಾಡು ತೌಹೀದ್‌ ಜಮಾತ್ (ಟಿಎನ್‌ಟಿಜೆ) ಎಂಬ ಸಂಘಟನೆ. ಆದರೆ, ಎನ್‌ಟಿಜೆ ಜೊತೆಗಿನ ನಂಟನ್ನುಟಿಎನ್‌ಟಿಜೆ ಸ್ಪಷ್ಟವಾಗಿ ಅಲ್ಲಗಳೆದಿದ್ದು, ಬಾಂಬ್ ಸ್ಫೋಟವನ್ನು ಖಂಡಿಸಿದೆ.

ಮೊಹಮ್ಮದ್‌ ಆರಿಫ್‌ ವಿಚಾರಣೆ

ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆ ಫಲಹ್‌ –ಎ–ಇನ್ಸಾನಿಯಾತ್‌ (ಎಫ್‌ಐಎಫ್‌) ಸದಸ್ಯ ಮೊಹಮದ್ ಆರಿಫ್‌ ಗುಲಾಂಬಷಿರ್ ಧರ್ಮಪುರಿಯಾನನ್ನು ದೆಹಲಿ ಹೈಕೋರ್ಟ್‌ ಐದು ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ನೀಡಿದೆ.

ಈ ಸಂಘಟನೆಯ ಹಲವು ಸದಸ್ಯರು ಈಗಾಗಲೇ ನ್ಯಾಯಾಂಗ ವಶದಲ್ಲಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷೆನ್ಸ್ ಕೋರ್ಟ್‌ ನ್ಯಾಯಾಧೀಶ ಅನಿಲ್‌ ಅಂತಿಲ್ ಅವರು ವಿಚಾರಣೆ ನಡೆಸಲು ಎನ್‌ಐಎಗೆ ಅನುಮತಿ ನೀಡಿದ್ದಾರೆ.

ತನ್ನ ಸದಸ್ಯರ ಮೂಲಕ ಹವಾಲಾ ದಂಧೆಕೋರರಿಂದ ಎಫ್‌ಐಎಫ್‌ ಸಂಸ್ಥೆಗೆ ನಿಧಿ ಸಂಗ್ರಹಿಸಿ, ಆ ಮೂಲಕ ಭಾರತದಲ್ಲಿ ಅಶಾಂತಿ ಹುಟ್ಟುಹಾಕುವ ಯೋಜನೆ ಹೊಂದಿದ್ದ ಎಂಬ ಪ್ರಕರಣಕ್ಕೆ ಸಂಬಂಧಿಸಿಂತೆ ಧರ್ಮಪುರಿಯಾನನ್ನು ಎನ್ಐಎ ಈಚೆಗೆ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT