ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಳೆಗೆ ₹20 ಕೋಟಿ ನಷ್ಟ

44 ವರ್ಷಗಳ ಬಳಿಕ ಮಂಗಳೂರು ಕಂಡ ಭಾರಿ ಮಳೆ
Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಭಾರಿ ಮಳೆ, ಬುಧವಾರ ವಿರಾಮ ಪಡೆದಿದೆ. ಆದರೆ ಒಂದೇ ದಿನದ ಮಳೆಗೆ ಸುಮಾರು ₹20.74 ಕೋಟಿಯಷ್ಟು ಹಾನಿ ಉಂಟಾಗಿದೆ.

₹16.61 ಕೋಟಿಯಷ್ಟು ರಸ್ತೆ ಮತ್ತು ಸೇತುವೆಗಳಿಗೆ ಹಾನಿಯಾಗಿದೆ. 560 ಮನೆಗಳಿಗೆ ಹಾನಿಯಾಗಿದ್ದು, ಅದರ ನಷ್ಟ ₹4.11 ಕೋಟಿ ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 156.8 ಮಿ.ಮೀ.ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಬುಧವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಮಳೆಯಿಂದಾಗಿ ಇಲ್ಲಿಯ ಉದಯನಗರದ ಮೋಹಿನಿ ಹಾಗೂ ಕೊಡಿಯಾಲ್‌ಬೈಲ್‌ನ ಮುಕ್ತಾಬಾಯಿ ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಹಾ ಮಳೆಗೆ 35 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 42 ಮನೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿವೆ. 483 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ₹3.51 ಕೋಟಿ ಮೊತ್ತದ ರಸ್ತೆ, ₹1 ಕೋಟಿ ಮೊತ್ತದ ಸೇತುವೆ, ₹1.95 ಕೋಟಿ ಮೊತ್ತದ ವಿದ್ಯುತ್‌ ಕಂಬ, ಪರಿವರ್ತಕ, ತಂತಿಗಳು ಹಾನಿಗೀಡಾಗಿವೆ ಎಂದರು.

ವಾಯುಭಾರ ಕುಸಿತದಿಂದ ಒಮ್ಮೆಲೆ ಅಪಾರ ಪ್ರಮಾಣದ ಮಳೆ ಸುರಿದಿದೆ. ಜತೆಗೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಹೀಗಾಗಿ ರಾಜಕಾಲುವೆಯಲ್ಲಿ ಮಳೆಯ ನೀರು ಹರಿದು ಹೋಗಲು ಸಾಧ್ಯವಾಗದೇ, ನಗರದಾದ್ಯಂತ ನೀರು ಸಂಗ್ರಹಗೊಂಡಿತ್ತು ಎಂದು ಹೇಳಿದರು.

1974ರ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಮಳೆಯಾಗಿದೆ. ಇದೊಂದು ಐತಿಹಾಸಿಕ ಮಳೆಯಾಗಿದ್ದು, ಆಡಳಿತಕ್ಕೆ ಒಂದು ಪಾಠ ಕಲಿತಂತಾಗಿದೆ. ಈ ಸಂದರ್ಭವನ್ನು ಗಮನದಲ್ಲಿ ಇಟ್ಟುಕೊಂಡೇ ಮುಂದಿನ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಸಿಡಿಲು ಬಡಿದು 9 ಜಾನುವಾರು ಸಾವು

ಕೊಪ್ಪಳ: ಜಿಲ್ಲೆಯ ಹನುಮಸಾಗರ, ಯಲಬುರ್ಗಾ ಮತ್ತು ಕನಕಗಿರಿಯ ವಿವಿಧೆಡೆ ಮಂಗಳವಾರ ಸಿಡಿಲು ಬಡಿದು 9 ಜಾನುವಾರುಗಳು ಮೃತಪಟ್ಟಿದ್ದು, ಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಮಾವಿನಗಿಡಗಳು ನೆಲಕ್ಕುರುಳಿವೆ.

ಹನುಮಸಾಗರ ಸಮೀಪದ ಜಹಗೀರಗುಡದೂರಿನಲ್ಲಿ ಎರಡು ಎತ್ತುಗಳು, ಕನಕಗಿರಿ ತಾಲ್ಲೂಕಿನ ಹುಲಿಹೈದರದಲ್ಲಿ ಎರಡು ಆಕಳು, ಯಲಬುರ್ಗಾ ತಾಲ್ಲೂಕಿನ ಮರಕಟ್‌ನಲ್ಲಿ ಮೂರು ಎತ್ತುಗಳು, ಕಲಕಬಂಡಿಯಲ್ಲಿ 2 ಎತ್ತು ಬಲಿಯಾಗಿವೆ. ಕುದ್ರಿಕೊಟಗಿಯಲ್ಲಿ ಗಾಳಿಗೆ ಮಾವಿನಗಿಡಗಳು ಧರೆಗುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT