ಮಂಗಳವಾರ, ಮೇ 18, 2021
23 °C

ರಾಮ ಮಂದಿರದ ಪರ ತೀರ್ಪು ಬಂತು, ಮುಂದೇನು?

ಸುಧೀಂದ್ರ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಅಯೋಧ್ಯೆ ಪ್ರಕರಣದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಶನಿವಾರ ನೀಡಲಿದೆ ಎಂದು ಗೊತ್ತಾದ ತಕ್ಷಣ ನನ್ನ ಮನಸ್ಸು, ‘ಶನಿವಾರವೇ ಏಕೆ? ಬೇರೆ ದಿನಕ್ಕೆ ಏಕೆ ನಿಗದಿ ಮಾಡಬಾರದಿತ್ತು? ನವೆಂಬರ್‌ 9ನೆಯ ತಾರೀಕು ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಗೆ ಸೇರಿದ್ದು. ಇದರ ಬಗ್ಗೆ ಭಾರತದ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳು, ಮುಸ್ಲಿಮರು ಹಾಗೂ ಸಿಖ್ಖರು ಸಂಭ್ರಮಿಸಬೇಕು’ ಎಂದೆಲ್ಲ ಆಲೋಚಿಸಿತು.

ಆದರೆ, ಈ ಎರಡು ಘಟನೆಗಳು (ಕಾರಿಡಾರ್ ಉದ್ಘಾಟನೆ ಮತ್ತು ಅಯೋಧ್ಯೆ ತೀರ್ಪು) ಒಂದೇ ದಿನ ಆಗಿರುವುದು ಕಾಕತಾಳೀಯ ಮಾತ್ರವೇ ಅಲ್ಲ ಎಂಬುದು ಇನ್ನಷ್ಟು ಆಲೋಚಿಸಿದಾಗ ಗೊತ್ತಾಯಿತು. ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಯಾಗಿದೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸುಪ್ರೀಂ ಕೋರ್ಟ್‌ ಅನುವು ಮಾಡಿಕೊಟ್ಟಿದೆ. ಇವೆರಡರಲ್ಲಿನ ಸಮಾನ ಎಳೆ ಯಾವುದು? ಇದಕ್ಕೆ ಉತ್ತರ: ‘ಸಾಮರಸ್ಯ’.

ಒಂದು ಘಟನೆಯಲ್ಲಿ, ಭಾರತದ ಮತ್ತು ಪಾಕಿಸ್ತಾನದ ನಡುವೆ ಸಾಮರಸ್ಯ ಸಾಧಿಸಲು ಒಂದು ಹೆಜ್ಜೆ ಮುಂದಿರಿಸಲಾಯಿತು. ಇನ್ನೊಂದು ಘಟನೆಯಲ್ಲಿ, ಭಾರತದ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಸಾಮರಸ್ಯ ಸ್ಥಾಪಿಸಲು ಒಂದು ಹೆಜ್ಜೆ ಮುಂದಕ್ಕೆ ಇರಿಸಲಾಯಿತು. ಇಲ್ಲಿ ಇನ್ನೊಂದು ಸಮಾನ ಎಳೆಯೂ ಇದೆ. ಅದು ಗುರು ನಾನಕ್ ಅವರು. ಸಿಖ್ ಧರ್ಮದ ಸಂಸ್ಥಾಪಕರು ಶ್ರೀರಾಮನ ದೊಡ್ಡ ಭಕ್ತ ಆಗಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

ಅಯೋಧ್ಯೆಯ ವಿವಾದವು ಒಂದು ಜಮೀನಿಗೆ ಸಂಬಂಧಿಸಿದಂತೆ ಕಾನೂನಿನ ಅಡಿ ಹಕ್ಕುಸ್ಥಾಪನೆಯದ್ದಷ್ಟೇ ಆಗಿರಲಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕು. ಶ್ರೀರಾಮನು, ರಾಮ ಜನ್ಮಭೂಮಿ ಎಂದು ಹೇಳುವ ಪ್ರದೇಶದಲ್ಲಿ ಜನಿಸಿದ ಎಂದು ಹಿಂದೂ ಸಮುದಾಯದಲ್ಲಿ ಇದ್ದ ನಂಬಿಕೆಗೆ ಸಂಬಂಧಿಸಿದ್ದಾಗಿತ್ತು. ಆದರೆ, ಆ ಜಾಗದಲ್ಲಿ ಇದ್ದ ಬಾಬರಿ ಮಸೀದಿಯು ಮುಸ್ಲಿಂ ಸಮುದಾಯದ ಪಾಲಿಗೆ ಅಷ್ಟೇ ಪ್ರಮಾಣದಲ್ಲಿ ಧಾರ್ಮಿಕವಾಗಿ ಮಹತ್ವದ್ದಾಗಿರಲಿಲ್ಲ. 1992ರ ಡಿಸೆಂಬರ್ 6ರಂದು ನಡೆದ ಮಸೀದಿಯ ಧ್ವಂಸ ಕಾರ್ಯವು ಬಿಜೆಪಿ ಹಾಗೂ ಸಂಘ ಪರಿವಾರದ ಇತರ ಸಂಘಟನೆಗಳು ಆರಂಭಿಸಿದ ಆಂದೋಲನದ ಮೇಲಿನ ಕಪ್ಪು ಚುಕ್ಕೆ – ಈ ಕೃತ್ಯ ‘ಕಾನೂನುಬಾಹಿರ’ ಎಂದು ಕೋರ್ಟ್‌ ಸರಿಯಾಗಿಯೇ ಹೇಳಿದೆ. ಆದರೆ, ಅದು ವಿವಾದಿತ ಸ್ಥಳದ ಮೇಲೆ ಹಿಂದೂ ಸಮುದಾಯ ಹೊಂದಿದ್ದ ಹಕ್ಕನ್ನು ಯಾವುದೇ ರೀತಿಯಲ್ಲೂ ಇಲ್ಲವಾಗಿಸಲಿಲ್ಲ. ಮುಸ್ಲಿಮರ ಪಾಲಿಗೆ ಬಾಬರ ಹೆಸರಿನ ಮಸೀದಿಯು ‘ಇನ್ನೊಂದು ಮಸೀದಿ’ ಅಷ್ಟೇ ಆಗಿದ್ದ ಕಾರಣ, ಹಿಂದೂಗಳು ಹೊಂದಿದ್ದ ಹಕ್ಕಿಗೆ ಹೆಚ್ಚಿನ ಮೌಲ್ಯ ಇತ್ತು.

ಈ ಮೂಲ ಸತ್ಯವನ್ನು ಒಪ್ಪಿಕೊಂಡ ನಂತರ, ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿರುವ ಮಾತುಗಳ ಪ್ರಾಮುಖ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.

1: ರಾಮ್‌ ಛಬೂತರ್‌ನಲ್ಲಿ ದೀರ್ಘಾವಧಿಯಿಂದ, ಅಡೆತಡೆ ಇಲ್ಲದೆ ಪೂಜೆ ಸಲ್ಲಿಸಿಕೊಂಡು ಬರುವ ಮೂಲಕ ಹಿಂದೂಗಳು ಹೊರ ಆವರಣದ ಮೇಲೆ ಸ್ವಾಧೀನಾಧಿಕಾರವನ್ನು ಸ್ಪಷ್ಟವಾಗಿ ತೋರಿಸಿದ್ದಾರೆ. 

2: ಮಸೀದಿಯ ಒಳಗೆ ಹಾಗೂ ಹೊರಗೆ ಹಿಂದೂ ಧಾರ್ಮಿಕ ಮಹತ್ವದ ಸಂಕೇತಗಳು ಇದ್ದಿದ್ದನ್ನು ಮುಸ್ಲಿಂ ಸಾಕ್ಷಿಗಳು ಒಪ್ಪಿಕೊಂಡಿದ್ದಾರೆ.

3: ಅವಧ್ ಪ್ರದೇಶವನ್ನು 1857ರಲ್ಲಿ ಬ್ರಿಟಿಷರು ಆಕ್ರಮಿಸುವ ಮೊದಲು ಒಳ ಆವರಣದಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು ಎಂಬುದನ್ನು ಸಾಬೀತು ಮಾಡುವ ಆಧಾರಗಳು ಇವೆ.

4: ಹದಿನಾರನೆಯ ಶತಮಾನದ ನಂತರ 1857ರವರೆಗೆ ಒಳ ಆವರಣವು ತಮ್ಮದೇ ಸ್ವಾಧೀನದಲ್ಲಿ ಇತ್ತು ಎಂಬುದಕ್ಕೆ ಮುಸ್ಲಿಮರು ಆಧಾರ ಒದಗಿಸಿಲ್ಲ.

ಆದರೆ, ಈ ಮಾತುಗಳನ್ನು ಹಾಗೆಯೇ ಆಲಿಸಿದರೆ ಅವು ಅಷ್ಟೇನೂ ಮುಖ್ಯ ಅನಿಸುವುದಿಲ್ಲ. ರಾಮನಲ್ಲಿ ಹಿಂದೂಗಳು ಶತಮಾನಗಳಿಂದ ಇರಿಸಿರುವ ನಂಬಿಕೆಯನ್ನು ಬದಿಗಿಟ್ಟು ಗಮನಿಸಿದರೆ, ಈ ಮಾತುಗಳು ತೀರ್ಪಿಗೆ ಹೆಚ್ಚಿನ ಮೌಲ್ಯ ತಂದುಕೊಡುವುದೂ ಇಲ್ಲ. ಆದರೆ, ರಾಮ ಭಕ್ತರು ಹೊಂದಿರುವ ಆಳವಾದ ಭಾವನಾತ್ಮಕ ನಂಟು ಹಾಗೂ ಭಾರತದ ಮುಸ್ಲಿಂ ಸಮುದಾಯಕ್ಕೆ ಈ ಜಾಗ ಧಾರ್ಮಿಕವಾಗಿ ಅಷ್ಟೇನೂ ಮಹತ್ವದ್ದಲ್ಲ ಎಂಬುದನ್ನು ಒಟ್ಟಾಗಿರಿಸಿ ನೋಡಿದರೆ, ವಿವಾದವನ್ನು ಹಿಂದೂಗಳ ಪರವಾಗಿ ಇತ್ಯರ್ಥಪಡಿಸಲು ಕೋರ್ಟ್‌ ಲಭ್ಯ ದಾಖಲೆಗಳನ್ನು ಬಳಸಿಕೊಂಡಿತು ಎಂಬುದು ಗೊತ್ತಾಗುತ್ತದೆ.

‘ಸತ್ಯ’ಕ್ಕಿಂತಲೂ ‘ನಂಬಿಕೆ’ಗಳೇ ಜಯ ಸಾಧಿಸಿವೆ ಎಂಬ ವಾದದ ಸುತ್ತ ಈ ತೀರ್ಪಿಗೆ ಸಂಬಂಧಿಸಿದ ಟೀಕೆಗಳು ವ್ಯಕ್ತವಾಗಿವೆ. ಆದರೆ, ಇಂತಹ ಟೀಕೆಗಳಲ್ಲಿ ಹುರುಳಿಲ್ಲ. ವಾದಿ – ಪ್ರತಿವಾದಿಗಳ ‘ನಂಬಿಕೆ’ಯು ಈ ಪ್ರಕರಣದಲ್ಲಿ ಮೂಲಭೂತವಾಗಿ ಪರಿಗಣನೆ ಆಗಿತ್ತು ಎಂಬುದು ನಿಜ. ಆದರೆ, ನ್ಯಾಯಾಲಯವು ಒಬ್ಬರ ನಂಬಿಕೆಗಳಿಗಿಂತ ಇನ್ನೊಬ್ಬರ ನಂಬಿಕೆಗಳಿಗೆ ಹೆಚ್ಚಿನ ಮಹತ್ವ ನೀಡಿತು ಎನ್ನುವುದು ಸರಿಯಲ್ಲ. ಲಭ್ಯ ಆಧಾರಗಳನ್ನು ಪರಿಶೀಲನೆ ನಡೆಸಿದ ಕೋರ್ಟ್‌, ಒಂದು ಗುಂಪಿನ ನಂಬಿಕೆಗಳು ಇನ್ನೊಂದು ಗುಂಪಿನ ನಂಬಿಕೆಗಳಿಗಿಂತಲೂ ಹೆಚ್ಚಿನ ಆಧಾರಗಳನ್ನು ಹೊಂದಿವೆ ಎಂಬ ತೀರ್ಮಾನಕ್ಕೆ ಬಂತು.

ಅಯೋಧ್ಯೆಯ ವಿವಾದಕ್ಕೆ ಅಂತ್ಯ ಹಾಡಿದ್ದಕ್ಕೆ ನಾವು ಸುಪ್ರೀಂ ಕೋರ್ಟ್‌ಗೆ ಕೃತಜ್ಞತೆ ಸಮರ್ಪಿಸಬೇಕು. ಕೆಲವು ಮುಸ್ಲಿಂ ನಾಯಕರ ಆರಂಭಿಕ ಪ್ರತಿಕ್ರಿಯೆ ಗಮನಿಸಿದರೆ, ಅವರು ತೀರ್ಪಿನಿಂದ ಸಮಾಧಾನ ಹೊಂದಿಲ್ಲ ಎಂಬುದು ಗೊತ್ತಾಗುತ್ತದೆ. ಆದರೆ, ತೀರ್ಪು ಒಪ್ಪಿಕೊಳ್ಳುವುದರಲ್ಲೇ ಅವರ ಹಿತ ಅಡಗಿದೆ. ಈ ತೀರ್ಪನ್ನು ತಿರಸ್ಕರಿಸುವುದರಿಂದ ಮುಸ್ಲಿಮರಿಗೆ ಸಿಗುವುದು ಏನೂ ಇಲ್ಲ. ತೀರ್ಪಿನ ಯಾವುದೇ ಅಂಶದ ಬಗ್ಗೆ ತಮ್ಮ ಸೂಕ್ತ ಟೀಕೆಗಳನ್ನು ವ್ಯಕ್ತಪಡಿಸಿಯೂ, ತೀರ್ಪನ್ನು ಸ್ವೀಕರಿಸಿದರೆ ಹಿಂದೂ–ಮುಸ್ಲಿಂ ಸಾಮರಸ್ಯಕ್ಕೆ ದೊಡ್ಡ ಕೊಡುಗೆ ನೀಡಿದಂತೆ ಆಗುತ್ತದೆ.

ಮುಸ್ಲಿಂ ಸಮುದಾಯದ ನಾಯಕರು ಹಿಂದೂಗಳ ಬೇಡಿಕೆಯನ್ನು ವಿರೋಧಿಸುವ ಮೂಲಕ ತಪ್ಪು ಮಾಡಿದರು. ಈಚಿನ ವರ್ಷಗಳಲ್ಲಿ ಅವರು ತೋರಿದ ಸಾಮರಸ್ಯದ ನಡೆಯನ್ನು, 1980 ಅಥವಾ 1990ರ ದಶಕದಲ್ಲಿ ತೋರಿದ್ದರೆ, ಈ ವಿವಾದಕ್ಕೆ ಸೌಹಾರ್ದಯುತ ಪರಿಹಾರವು ಮಾತುಕತೆ ಮೂಲಕವೇ ಸಿಗುತ್ತಿತ್ತು.

ಆದರೆ, ಮಾತುಕತೆಗಳು ವಿಫಲ ಆಗಿದ್ದಕ್ಕೆ ಮುಸ್ಲಿಂ ನಾಯಕರನ್ನು ಮಾತ್ರವೇ ದೂಷಿಸಬೇಕೇ? ಮಂದಿರ ಪರ ಆಂದೋಲನವು ತಾಳಿದ ನಿಲುವು ಕೂಡ ಈ ವಿವಾದ ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಯಿತು. ಬಾಬರಿ ಮಸೀದಿ ಧ್ವಂಸಗೊಳಿಸಿದ್ದನ್ನು ಕೋರ್ಟ್‌ ಮೃದು ಪದಗಳನ್ನು ಬಳಸಿ ಉಲ್ಲೇಖಿಸಿದ್ದು ತಪ್ಪು. ಮಸೀದಿ ಧ್ವಂಸಗೊಳಿಸಿದ ಆ ಕೃತ್ಯವು ಹೀನ ಅಪರಾಧ. ಅಕ್ರಮವಾಗಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದರ ಹೊಣೆಯಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ತಪ್ಪಿಸಿಕೊಳ್ಳುವುದು ಹೇಗೆ ಸಾಧ್ಯ?

ಹಾಗೆಯೇ, ಶುದ್ಧ ಅಂತಃಕರಣ ಇರುವ ಹಿಂದೂ ನಾಯಕರು (ಹಿಂದುತ್ವದ ನಾಯಕರು), ಅಯೋಧ್ಯೆಯ ವಿಚಾರವನ್ನು ತಾವು ರಾಜಕೀಯ ಹಾಗೂ ಚುನಾವಣಾ ಲಾಭಕ್ಕೆ ಬಳಸಿಕೊಳ್ಳಲಿಲ್ಲ ಎನ್ನಲು ಸಾಧ್ಯವೇ? ದೇಶದಲ್ಲಿ ಹಿಂದೂ–ಮುಸ್ಲಿಂ ಸಾಮರಸ್ಯ ವಾಸ್ತವದಲ್ಲಿ ಸಾಧ್ಯವಾಗಲು ಸಂಘ ಪರಿವಾರದ ನಾಯಕರು ತಮ್ಮ ಸಿದ್ಧಾಂತ, ರಾಜಕಾರಣ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕು.


ಸುಧೀಂದ್ರ ಕುಲಕರ್ಣಿ

(ಲೇಖಕ ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು