ಬಡ್ತಿ ಮೀಸಲಿಗೆ ‘ಸುಪ್ರೀಂ’ ಅಸ್ತು: ಪರಿಶಿಷ್ಟ ಜಾತಿ ಪಂಗಡಗಳ ನೌಕರರು ನಿರಾಳ

ಶನಿವಾರ, ಮೇ 25, 2019
33 °C
ರಾಜ್ಯ ಸರ್ಕಾರದ ನೂತನ ಕಾಯ್ದೆಗೆ ಮಾನ್ಯತೆ

ಬಡ್ತಿ ಮೀಸಲಿಗೆ ‘ಸುಪ್ರೀಂ’ ಅಸ್ತು: ಪರಿಶಿಷ್ಟ ಜಾತಿ ಪಂಗಡಗಳ ನೌಕರರು ನಿರಾಳ

Published:
Updated:
Prajavani

ನವದೆಹಲಿ: ‘ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ರಾಜ್ಯ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ.

ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಕುರಿತ ತೀರ್ಪನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಶುಕ್ರವಾರ ಪ್ರಕಟಿಸಿದರು.

ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿ, 2017ರ ಫೆಬ್ರುವರಿ 9ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಸೂಚಿಸಿರುವ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡೇ ಶಾಸನಸಭೆಯು ರೂಪಿಸಿರುವ ನೂತನ ಕಾಯ್ದೆಗೆ ರಾಷ್ಟ್ರಪತಿಯವರ ಅಂಕಿತವೂ ದೊರೆತಿದೆ ಎಂದು ಅವರು ಒತ್ತಿ ಹೇಳಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀತಿ ಅನುಸರಿಸುವುದು ಅರ್ಹತೆಯ ತತ್ವಕ್ಕೆ ವಿರೋಧವಾದುದಲ್ಲ. ಇದರಿಂದ ಆಡಳಿತ ದಕ್ಷತೆಯ ಮೇಲೂ ಯಾವುದೇ ರೀತಿಯ ಪರಿಣಾಮ ಉಂಟಾಗದು’ ಎಂದು 135 ಪುಟಗಳಷ್ಟು ಸುದೀರ್ಘವಾದ ತೀರ್ಪು ಅಭಿಪ್ರಾಯಪಟ್ಟಿದೆ.

‘2017ರ ತೀರ್ಪಿನಲ್ಲಿ ಪ್ರಸ್ತಾಪಿಸಿದಂತೆ, ಬಡ್ತಿಯಲ್ಲಿ ಮೀಸಲಾತಿ ನಿಯಮ ಅನುಸರಿಸಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಮೂಲಕ ಸರ್ಕಾರವು ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಂಡಿರುವುದೇ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿಯುವುದಕ್ಕೆ ಪ್ರಮುಖ ಅಂಶವಾಗಿದೆ’ ಎಂದು ತೀರ್ಪು ಒತ್ತಿ ಹೇಳಿದೆ.

ಇದರಿಂದಾಗಿ, ಕಳೆದ ಎರಡು ವರ್ಷಗಳಿಂದ ಹಿಂಬಡ್ತಿಯ ಆತಂಕ ಎದುರಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾವಿರಾರು ಜನ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಳ ಭಾವ ಮೂಡಿದಂತಾಗಿದ್ದು, ರಾಜ್ಯ ಸರ್ಕಾರಕ್ಕೂ ಕಾನೂನಾತ್ಮಕ ಗೆಲುವು ಲಭಿಸಿದಂತಾಗಿದೆ.

‘ಸರ್ಕಾರಿ ಹುದ್ದೆಗಳಲ್ಲಿ ಆಯಾ ಸಮುದಾಯಗಳಿಗೆ ದೊರೆತಿರುವ ಪ್ರಾತಿನಿಧ್ಯ, ಹಿಂದುಳಿದಿರುವಿಕೆ ಮತ್ತು ಆಡಳಿತ ದಕ್ಷತೆಯಂತಹ ಮಾನದಂಡಗಳನ್ನು, ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಅನುಸರಿಸುವುದು ಕಡ್ಡಾಯ ಎಂಬ ಅಂಶವನ್ನು ಸರ್ಕಾರ ಮನಗಂಡಿದೆ. ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ರತ್ನಪ್ರಭಾ ನೇತೃತ್ವದ ಸಮಿತಿಯ ಮೂಲಕ ಅಗತ್ಯ ಮಾಹಿತಿ ಸಂಗ್ರಹಿಸಿದ ಬಳಿಕವೇ ಕಾಯ್ದೆ ರೂಪಿಸಿರುವುದು ಸ್ಪಷ್ಟವಾಗಿದೆ’ ಎಂದು ತೀರ್ಪು ತಿಳಿಸಿದೆ.

‘ಪ್ರಾತಿನಿಧ್ಯದ ಕೊರತೆಯಿಂದ ಬಸವಳಿದಿರುವ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಸಂವಿಧಾನದ 16 (4ಎ) ವಿಧಿಯ ಪಾಲನೆಯ ನಿಟ್ಟಿನಲ್ಲಿ ಈ ಹಿಂದಿನ ತೀರ್ಪು ಯಾವುದೇ ರೀತಿಯ ನಿಯಂತ್ರಣವನ್ನೂ ಹೇರಿರಲಿಲ್ಲ. ಹೊಸ ಕಾಯ್ದೆ ರೂಪಿಸಿರುವ ಶಾಸಕಾಂಗದ ಕ್ರಮವು ನ್ಯಾಯಾಂಗದ ಅಧಿಕಾರವನ್ನು ಮೊಟಕುಗೊಳಿಸುವ ಯತ್ನವಂತೂ ಅಲ್ಲ. ಹಾಗಾಗಿ, ಕಾಯ್ದೆಯ ಸಿಂಧುತ್ವ ಪ್ರಶ್ನಿಸಿದ್ದ ಮೇಲ್ಮನವಿಯಲ್ಲಿ ಹುರುಳಿರಲಿಲ್ಲ ಎಂಬುದು ನಮ್ಮ ತೀರ್ಮಾನ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

2018ರ ಕಾಯ್ದೆಯ ಪ್ರಕಾರ, ಬಡ್ತಿ ಹೊಂದಿದ ನೌಕರರಿಗೆ ರೋಸ್ಟರ್‌ ಪದ್ಧತಿಯ ಅನ್ವಯ ದೊರೆತಿರುವ ತತ್ಪರಿಣಾಮ ಜ್ಯೇಷ್ಠತೆಯನ್ನು ವಿಸ್ತರಿಸುವ ವಿಧಾನಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರಿಗೆ ನೀಡಲಾಗಿರುವ ತತ್ಪರಿಣಾಮ ಜ್ಯೇಷ್ಠತೆಯನ್ನು ಮೀಸಲಾತಿ ಆದೇಶದ ಅನುಗುಣವಾಗಿ 1978ರ ಏಪ್ರಿಲ್ 27ರಿಂದ ಅನ್ವಯಿಸುವಂತೆ ಮಾನ್ಯ ಮಾಡುವುದಕ್ಕೆ ನ್ಯಾಯಪೀಠ ಸಮ್ಮತಿ ಸೂಚಿಸಿದೆ.

‘ಪೂರ್ವಾನ್ವಯದಂತೆಯೇ ಬಡ್ತಿ ಆದೇಶ ಜಾರಿಯಾಗಬೇಕೆಂಬ ಉಲ್ಲೇಖವಿರುವ ಕೆ.ರತ್ನಪ್ರಭಾ ಸಮಿತಿಯ ವರದಿಯು ಅಸಂವಿಧಾನಿಕ’ ಎಂದು ದೂರಿದ್ದ ಸಾಮಾನ್ಯ ವರ್ಗಗಳ ನೌಕರರ ಅರ್ಜಿಯನ್ನೂ ಪೀಠ ಇದೇ ವೇಳೆ ತಿರಸ್ಕರಿಸಿದೆ.

ಇದನ‌್ನೂ ಓದಿ: ಸಾಮಾಜಿಕ ನ್ಯಾಯ.. ಸಮಾನತೆಯ ಸಾರ

ಕೆನೆ ಪದರದ ತತ್ವ: ಬಡ್ತಿಯಲ್ಲಿ ಮೀಸಲಾತಿ ನಿಯಮ ಅನುಸರಿಸುವುದಕ್ಕೆ ಸಂಬಂಧಿಸಿದಂತೆ ಕೆನೆ ಪದರದ ತತ್ವವನ್ನು ಪಾಲಿಸಬೇಕೆಂಬ ಪ್ರಸ್ತಾಪದೊಂದಿಗೆ, ಎಂ.ನಾಗರಾಜ್‌ ಪ್ರಕರಣದ ವಿಚಾರಣೆ ನಡೆಸಿ ಸಾಂವಿಧಾನಿಕ ಪೀಠ ಪ್ರಕಟಿಸಿದ್ದ ತೀರ್ಪಿನ ನಂತರ ಈ ತೀರ್ಪು ಪ್ರಕಟವಾಗಿರುವುದು ವಿಶೇಷವಾಗಿದೆ.

ಕೆನೆಪದರದ ತತ್ವವನ್ನು ಪರಿಶಿಷ್ಟರ ಸೇವಾ ಜ್ಯೇಷ್ಠತೆಗೆ ಸಂಬಂಧಿಸಿದ ಈ ನೂತನ ಕಾಯ್ದೆಯ ಸಿಂಧುತ್ವ ಕುರಿತು ಅನ್ವಯಿಸಕೂಡದು ಎಂದು ತಿಳಿಸಿರುವ ನ್ಯಾಯಪೀಠವು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ವಾದವನ್ನೂ ಮಾನ್ಯ ಮಾಡಿದೆ.

ಈ ಕಾಯ್ದೆಯ ಜಾರಿಯಿಂದ ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತ್ರ ಲಾಭ ದೊರೆಯುವುದರಿಂದ ಕೆನೆಪದರದ ತತ್ವವು ಅನ್ವಯವಾಗದು. ಗ್ರೂಪ್ ‘ಡಿ’ ಹಂತದ ಸಿಬ್ಬಂದಿಗೆ ಮೀಸಲಾತಿ ನೀಡುವಾಗ ಮಾತ್ರ ಕೆನೆಪದರದ ತತ್ವವನ್ನು ಅನ್ವಯಿಸಬಹುದಾಗಿದೆ ಎಂದು ತೀರ್ಪನ್ನು ಓದಿದ ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು.

2018ರ ಅಕ್ಟೋಬರ್‌ 23ರಿಂದ ಸತತ ಐದು ತಿಂಗಳು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರಿದ್ದ ನ್ಯಾಯಪೀಠವು, ಕಳೆದ ಮಾರ್ಚ್‌ 6ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾದಿರಿಸಿತ್ತು.

**

ಸುಪ್ರೀಂಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇನೆ. ನಮ್ಮ ಸರ್ಕಾರ ಸಾಂವಿಧಾನಿಕ ಚೌಕಟ್ಟಿನಲ್ಲಿ ಸರ್ಕಾರಿ ನೌಕರರ ಹಿತರಕ್ಷಣೆಗೆ ಬದ್ಧವಾಗಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

**

ಇದು ಐತಿಹಾಸಿಕ ತೀರ್ಪು. ಲಕ್ಷಾಂತರ ಎಸ್‌ಸಿ/ಎಸ್‌ಟಿ ನೌಕರರಿಗೆ ಇದರಿಂದ ಪ್ರಯೋಜನ ಆಗುತ್ತದೆ. ನಮ್ಮ ತಂಡ ಈ ನಿಟ್ಟಿನಲ್ಲಿ ಮಾಡಿರುವ ಕೆಲಸಕ್ಕೆ ನ್ಯಾಯಾಲಯದ ಮನ್ನಣೆ ನೀಡಿದೆ.
-ಸಿ.ಎಸ್‌.ರತ್ನಪ್ರಭಾ, ನಿವೃತ್ತ ಮುಖ್ಯ ಕಾರ್ಯದರ್ಶಿ

**

ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ನಾವಿಟ್ಟ ಪ್ರಮುಖ ಹೆಜ್ಜೆಗೆ ನ್ಯಾಯಾಲಯದ ಮನ್ನಣೆ ನೀಡಿ ತೀರ್ಪು ನೀಡಿದೆ.
-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

**

ವ್ಯತಿರಿಕ್ತ ತೀರ್ಪಿನಿಂದ ಸಾಮಾನ್ಯ ವರ್ಗದ ನೌಕರರು ಮೊದಲಿದ್ದ ಸ್ಥಿತಿಗೇ ಬಂದು ನಿಂತಿದ್ದೇವೆ. ಏಕಪಕ್ಷೀಯ ತೀರ್ಪು ನೀಡಲಾಗಿದೆ.
-ಬಿ.ಕೆ. ಪವಿತ್ರ, ಅರ್ಜಿದಾರರು 

**

ನ್ಯಾಯಾಲಯದ ತೀರ್ಪಿನಿಂದ ಶೇ 82ರಷ್ಟಿರುವ ‘ಅಹಿಂಸಾ’ ವರ್ಗಕ್ಕೆ ಅನ್ಯಾಯವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನೆ ಅರ್ಜಿ ಸಲ್ಲಿಸುತ್ತೇವೆ.
-ಎಂ.ನಾಗರಾಜ್‌, ಅಧ್ಯಕ್ಷರು, ಅಹಿಂಸಾ ಒಕ್ಕೂಟ

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !