ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಪೌರತ್ವ ಬಗ್ಗೆ ತನಿಖೆಗೆ ಒತ್ತಾಯಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Last Updated 9 ಮೇ 2019, 17:20 IST
ಅಕ್ಷರ ಗಾತ್ರ

ನವದೆಹಲಿ:ರಾಹುಲ್ ಗಾಂಧಿ ಅವರ ಪೌರತ್ವಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥವಾಗುವವರಗೆ ಚುನಾವಣೆಯಲ್ಲಿ ಅವರ ಸ್ಪರ್ಧೆಗೆ ತಡೆ ನೀಡಿ ಎಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾ ಮಾಡಿದೆ.

ದೆಹಲಿ ನಿವಾಸಿಗಳಾದ ಜೈ ಭಗವಾನ್ ಗೋಯಲ್ ಮತ್ತು ಸಿ.ಪಿ.ತ್ಯಾಗಿ ಈ ಅರ್ಜಿ ಸಲ್ಲಿಸಿದ್ದರು. ‘ರಾಹುಲ್ ಅವರ ಪೌರತ್ವಕ್ಕೆ ಸಂಬಂಧಿಸಿದಂತೆ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ದೂರಿಗೆ ಸರ್ಕಾರವಾಗಲೀ, ಚುನಾವಣಾ ಆಯೋಗವಾಗಲೀ ಸರಿಯಾಗಿ ಸ್ಪಂದಿಸಿಲ್ಲ. ಸರ್ಕಾರದ ಈ ನಡೆಯಿಂದ ನಮಗೆ ಅಸಮಾಧಾನವಾಗಿದೆ’ ಎಂದು ಅರ್ಜಿದಾರರು ತಿಳಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠವು ಈ ಅರ್ಜಿಯ ಪರಿಶೀಲನೆ ನಡೆಸಿತು.

‘ರಾಹುಲ್ ಅವರ ಪೌರತ್ವ ಇತ್ಯರ್ಥವಾಗುವವರೆಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಮತದಾರರ ಪಟ್ಟಿಯಿಂದಲೂ ಅವರ ಹೆಸರನ್ನು ತೆಗೆದುಹಾಕಬೇಕು’ ಎಂದು ಅರ್ಜಿದಾರರು ಕೋರಿದ್ದರು.

‘ರಾಹುಲ್ ಬ್ರಿಟನ್ ಪ್ರಜೆ ಎಂಬುದಕ್ಕೆ ದಾಖಲೆಗಳಿವೆ.ಆ ದಾಖಲೆಗಳನ್ನು ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಆ ದಾಖಲೆಗಳನ್ನು ಸಾಕ್ಷ್ಯಗಳಾಗಿ ಪರಿಗಣಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಅವರ ವಾದವನ್ನು ಪೀಠವು ತಿರಸ್ಕರಿಸಿತು. ‘ಯಾವುದೋ ಒಂದು ಕಂಪನಿ ತನ್ನ ದಾಖಲೆಯಲ್ಲಿ ಹಾಗೆ ಹೇಳಿಕೊಂಡ ಮಾತ್ರಕ್ಕೆ, ರಾಹುಲ್ ಆ ದೇಶದ ಪ್ರಜೆ ಎನ್ನಲು ಸಾಧ್ಯವಿಲ್ಲ’ ಎಂದು ಪೀಠವು ಅರ್ಜಿಯನ್ನು ತಿರಸ್ಕರಿಸಿತು.

ಅರ್ಜಿ ಸಲ್ಲಿಸಲು ಇಷ್ಟು ವರ್ಷ ಬೇಕಾಯಿತೇ?

ಅರ್ಜಿದಾರರ ಪರ ವಕೀಲ:ಎರಡು ದೇಶಗಳ ಪೌರತ್ವ ಪಡೆದವರು ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದಲ್ಲಿ ಅವಕಾಶವಿಲ್ಲ. ಆದರೆ ಎರಡು ದೇಶಗಳ ಪೌರತ್ವ ಹೊಂದಿದ್ದರೂ ರಾಹುಲ್ ಗಾಂಧಿ ರಾಹುಲ್ ಗಾಂಧಿ ಪ್ರಧಾನಿಯಾಗಲು ಬಯಸಿದ್ದಾರೆ

ಸುಪ್ರೀಂ ಕೋರ್ಟ್ ಪೀಠ:ಭಾರತದ ಪ್ರಧಾನಿಯಾಗಬೇಕು ಎಂದು ರಾಹುಲ್ ಗಾಂಧಿ ಬಯಸುತ್ತಿರುವುಂತೆ ಕಾಣುತ್ತಿಲ್ಲ. ಒಂದೊಮ್ಮೆ ಭಾರತದ 126 ಕೋಟಿ ಜನರು ‘ರಾಹುಲ್ ಪ್ರಧಾನಿಯಾಗಲಿ’ ಎಂದು ಬಯಸಿದರೆ, ನಿಮ್ಮಿಂದ ಯಾವುದೇ ಆಕ್ಷೇಪ ಇರುವುದಿಲ್ಲ ತಾನೇ?

ವಕೀಲ:ಬ್ರಿಟನ್‌ನ ಬಾಕ್‌ಆಪ್ಸ್‌ ಲಿಮಿಟೆಡ್‌ನಲ್ಲಿ ರಾಹುಲ್ ಗಾಂಧಿ ನಿರ್ದೇಶಕರಾಗಿದ್ದಾರೆ. ಕಂಪನಿಯ ದಾಖಲೆಗಳಲ್ಲಿ ರಾಹುಲ್ ತಮ್ಮನ್ನು ತಾವು ಬ್ರಿಟನ್ ಪ್ರಜೆ ಎಂದು ಘೋಷಿಸಿಕೊಂಡಿದ್ದಾರೆ

ಪೀಠ:ಯಾವುದೋ ಒಂದು ಕಂಪನಿ, ತನ್ನ ಯಾವುದೋ ಒಂದು ದಾಖಲೆಯಲ್ಲಿ ‘ರಾಹುಲ್ ಬ್ರಿಟನ್ ಪ್ರಜೆ’ ಎಂದು ಹೆಸರಿಸಿದ ಮಾತ್ರಕ್ಕೆ ಅವರು ಬ್ರಿಟನ್‌ನ ಪ್ರಜೆಯಾಗುತ್ತಾರೆಯೇ? ಅದು ಇರಲಿ. ನೀವು (ಅರ್ಜಿದಾರರು) ಯಾರು‌?

ವಕೀಲ:ನಮ್ಮ ಅರ್ಜಿದಾರರು ದೀರ್ಘಕಾಲದಿಂದ ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ

ಪೀಠ:ನೀವು ರಾಜಕಾರಣದಲ್ಲಿ ಇದ್ದೀರಾ? ಇರಲಿ. ನೀವೇ ಹೇಳಿದಂತೆ ರಾಹುಲ್ ಪೌರತ್ವದ ವಿಚಾರ 2005ರಿಂದಲೇ ಚರ್ಚೆಯಲ್ಲಿದೆ. ಹೀಗಿದ್ದೂ ಇಷ್ಟು ವರ್ಷ ನೀವು ಏನು ಮಾಡುತ್ತಿದ್ದಿರಿ?

ವಕೀಲ:ನಮಗೆ ದಾಖಲೆಗಳು ಸಿಕ್ಕಿದ್ದೇ 2015ರಲ್ಲಿ.

ಪೀಠ:2015ರಲ್ಲಿ ದಾಖಲೆ ದೊರೆತರೂ ಅರ್ಜಿ ಸಲ್ಲಿಸಲು ಇಷ್ಟು ಸಮಯ ಹಿಡಿಯಿತೇ?

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT