ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು: ಶಾಂತಿ–ಸಾಮರಸ್ಯಕ್ಕೆ ಕರೆ

ರಾಮಜನ್ಮ ಭೂಮಿ–ಬಾಬ್ರಿ ಮಸೀದಿ ವಿವಾದ
Last Updated 9 ನವೆಂಬರ್ 2019, 5:59 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದ ಬಹುಕಾಲದ ಅನಿಶ್ಚಿತ ಸ್ಥಿತಿ ಕೊನೆಯಾಗಲಿದೆ. ಭಾರಿ ಕುತೂಹಲಕ್ಕೆ ಕಾರಣವಾಗಿರುವ ನಿವೇಶನ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ಶನಿವಾರ ಪ್ರಕಟಿಸಲಿದೆ.

ಬೆಳಿಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನ ಪೀಠವು ಪ್ರಕರಣದ ವಿಚಾರಣೆಯನ್ನು ಸತತ 40 ದಿನ ನಡೆಸಿ, ಅಕ್ಟೋಬರ್‌ 16ರಂದು ತೀರ್ಪು ಕಾಯ್ದಿರಿಸಿತ್ತು.

ತೀರ್ಪಿಗೆ ಮುನ್ನ: ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅಲ್ಲಿನ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯಿಂದ ಶುಕ್ರವಾರವೇ ಮಾಹಿತಿ ಪಡೆದಿದ್ದಾರೆ.

ರಾಜ್ಯಗಳಿಗೆ ಸೂಚನೆ: ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಎಚ್ಚರವಾಗಿರುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರವು ಈಗಾಗಲೇ ಸೂಚನೆ ನೀಡಿದೆ. ಉತ್ತರ ಪ್ರದೇಶಕ್ಕೆ, ವಿಶೇಷವಾಗಿ ಅಯೋಧ್ಯೆಗೆ ಅರೆಸೇನಾಪಡೆಯ 4,000 ಸಿಬ್ಬಂದಿಯನ್ನು ಕಳುಹಿಸಲಾಗಿದೆ. ತೀರ್ಪು ಯಾರ ಪರವಾಗಿದ್ದರೂ ಜನರು ಶಾಂತಿ ಕದಡಬಾರದು ಎಂದು ಎರಡೂ ಧರ್ಮಗಳ ಮುಖಂಡರು ಜನರಿಗೆ ಕರೆ ನೀಡಿದ್ದಾರೆ.

ಬಹುಹಂತದ ಸುರಕ್ಷತಾ ವ್ಯವಸ್ಥೆ
*
ಅಯೋಧ್ಯೆಯಲ್ಲಿ ಬಹು ಹಂತಗಳ ರಕ್ಷಣಾ ವ್ಯವಸ್ಥೆಯನ್ನು ಈಗಾಗಲೇ ಜಾರಿ
*ಪರಿಸ್ಥಿತಿಯ ಅವಲೋಕನ ನಡೆಸಲು ಡ್ರೋನ್‌ಗಳ ಬಳಕೆ
*ಪೊಲೀಸ್‌ ಸಿಬ್ಬಂದಿಗೆ ಒಂದು ತಿಂಗಳಿಂದ ಸತತ ತರಬೇತಿ
*ಭಯೋತ್ಪಾದಕ ನಿಗ್ರಹ ದಳ, ಬಾಂಬ್‌ ನಿಷ್ಕ್ರಿಯ ದಳ, ವಿಧ್ವಂಸಕ ಕೃತ್ಯ ತಡೆ ಮತ್ತು ಕ್ಷಿಪ್ರ ಕಾರ್ಯಪಡೆ ಕಾರ್ಯೋನ್ಮುಖ
*ತುರ್ತು ಸ್ಥಿತಿಯಲ್ಲಿ ಬಳಕೆಗಾಗಿ ಲಖನೌದಲ್ಲಿ ಎರಡು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ
*ಹಿಂದೂ–ಮುಸ್ಲಿಂ ಸಮುದಾಯದ ನಾಯಕರಿಂದ ಶಾಂತಿ ಕಾಯ್ದುಕೊಳ್ಳಲು ಕರೆ

2.77 ಎಕರೆಯ ವಿವಾದ
2.77 ಎಕರೆ ವಿವಾದಿತ ಸ್ಥಳವು ತಮಗೆ ಸೇರಿದ್ದು ಎಂದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡೂ ವಾದಿಸುತ್ತಿವೆ. ಈ ವಿಚಾರವು 1980ರ ಬಳಿಕದ ಭಾರತದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿವಾದಾತ್ಮಕ ಸ್ಥಳದಲ್ಲಿ ಇದ್ದ ಮಸೀದಿಯನ್ನು 1992ರ ಡಿಸೆಂಬರ್‌ನಲ್ಲಿ ಧ್ವಂಸ ಮಾಡಲಾಗಿತ್ತು.ಈ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಹಿಂದುತ್ವವಾದಿ ಕಾರ್ಯಕರ್ತರ ವಾದವಾಗಿದೆ. ಆದರೆ, ದೇವಾಲಯವನ್ನು ಧ್ವಂಸ ಮಾಡಿ, ಆ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಪ್ರಕರಣದ ಮುಸ್ಲಿಂ ಕಕ್ಷಿದಾರರು ವಾದಿಸುತ್ತಿದ್ದಾರೆ.

ಸಾಮರಸ್ಯದ ಮಂತ್ರ
ಮುಖ್ಯ ನ್ಯಾಯಮೂರ್ತಿ ಗೊಗೊಯಿ ಅವರು ಇದೇ 17ರಂದು ನಿವೃತ್ತರಾಗಲಿದ್ದಾರೆ. ಹಾಗಾಗಿ, ಅದಕ್ಕೆ ಮೊದಲು ತೀರ್ಪು ಪ್ರಕಟವಾಗಬಹುದು ಎಂಬ ನಿರೀಕ್ಷೆ ಇತ್ತು. ಹಾಗಾಗಿ, ಎರಡೂ ಸಮುದಾಯಗಳ ನಡುವೆ ಸಾಮರಸ್ಯ ಉಳಿಸಿಕೊಳ್ಳುವ ಹಲವು ಪ್ರಯತ್ನಗಳು ಕೆಲ ದಿನಗಳಿಂದ ನಡೆಯುತ್ತಲೇ ಇವೆ.

ಸಮಾಜಘಾತುಕ ಶಕ್ತಿಗಳು ಸಾಮರಸ್ಯ ಕೆಡಿಸಲು ನಡೆಸುವ ಪ್ರಯತ್ನಗಳಿಗೆ ಯಾರೂ ಬಲಿಬೀಳಬಾರದು ಎಂದು ಎರಡೂ ಸಮುದಾಯಗಳ ಮುಖಂಡರು ಕೆಲವು ದಿನಗಳಿಂದ ಕರೆ ನೀಡುತ್ತಲೇ ಇದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರ ದೆಹಲಿಯ ನಿವಾಸದಲ್ಲಿ ಆರ್‌ಎಸ್‌ಎಸ್‌, ಬಿಜೆಪಿ ಮುಖಂಡರು ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆದಿತ್ತು. ತೀರ್ಪು ಏನೇ ಬಂದರೂ ಸಾಮರಸ್ಯಕ್ಕೆ ಧಕ್ಕೆ ಆಗಬಾರದು ಎಂದು ಎಲ್ಲ ಮುಖಂಡರು ಕರೆ ಕೊಟ್ಟಿದ್ದರು.

ಕೋರ್ಟ್‌ ತೀರ್ಪು ಗೌರವಿಸಿ: ಮುಸ್ಲಿಂ ಸಂಘಟನೆಗಳ ಮನವಿ
ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ಗೌರವಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು’ ಎಂದು 34 ಮುಸ್ಲಿಂ ಸಂಘಟನೆಗಳ ಒಕ್ಕೂಟ ‘ಕರ್ನಾಟಕ ಮುಸ್ಲಿಂ ಮುತ್ತಹಿದ ಮಹಾಜ್’ ಮನವಿ ಮಾಡಿದೆ.

‘ತೀರ್ಪು ನಿಮ್ಮ ಪರ ಬಂದರೆ ಸಂಭ್ರಮಾಚರಣೆ ಮಾಡಬೇಡಿ, ವಿರುದ್ಧವಾಗಿದ್ದರೆ ತಾಳ್ಮೆ ಪ್ರದರ್ಶಿಸಿ, ಅಚಲವಾಗಿರಿ. ಎರಡು ಸಂದರ್ಭಗಳಲ್ಲೂ ಬುದ್ಧವಂತಿಕೆ ಪ್ರದರ್ಶಿಸಿ. ಕೋಮುವಾದಿ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಮುಗ್ಧ ಜನರನ್ನು ದಾರಿ ತಪ್ಪಿಸುವ ಸಂಚು ರೂಪಿಸಲಾಗುತ್ತಿದೆ. ಅವುಗಳಿಗೆ ಕಿವಿಗೊಡಬಾರದು. ಮಾನವ ಮೌಲ್ಯಗಳನ್ನು ಉಳಿಸಬೇಕು’ ಎಂದು ತಿಳಿಸಿದೆ.

ವಿಜಯೋತ್ಸವ ಆಚರಣೆ ಬೇಡ: ಪೇಜಾವರ ಶ್ರೀ
‘ತೀರ್ಪು ಯಾರ ಪರವೇ ಬರಲಿ, ಅದನ್ನು ಸಾರ್ಜಜನಿಕರು ಸಮಾಧಾನಚಿತ್ತದಿಂದ ಸ್ವೀಕರಿಸಬೇಕು. ವಿಜಯೋತ್ಸವ ಆಚರಣೆ ಬೇಡ. ತೀರ್ಪಿಗೆ ಉದ್ರೇಕಗೊಳ್ಳುವ ಅಗತ್ಯವೂ ಇಲ್ಲ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.

‘ಸಂಭ್ರಮಾಚರಣೆ ಮಾಡುವುದಾದರೆ ಮನೆಯಲ್ಲಿ, ದೇವಸ್ಥಾನ ಅಥವಾ ಪ್ರಾರ್ಥನಾ ಮಂದಿರಗಳಲ್ಲಿ ಮಾಡಿ. ಸಮಾಜದ ಶಾಂತಿಗೆ ಭಂಗ ಬರದಂತೆ ನಡೆದುಕೊಳ್ಳಿ’ ಎಂದು ಅವರು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT