ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Rafale Deal | ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಲಿ: ಬಿಜೆಪಿ

ಪ್ರಧಾನಿ ಮೋದಿಗೆ 'ಕಳ್ಳ' ಹಣೆಪಟ್ಟಿ ಹಚ್ಚಿದ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ರವಿಶಂಕರ್ ಪ್ರಸಾದ್ ಕಿಡಿ
Last Updated 14 ನವೆಂಬರ್ 2019, 9:11 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್ ಯುದ್ಧವಿಮಾನ ಪೂರೈಕೆ ಒಪ್ಪಂದದ ಕುರಿತಾಗಿ ತನಿಖೆ ಅನಗತ್ಯ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದ್ದಲ್ಲದೆ, ಸರ್ವೋಚ್ಚ ನ್ಯಾಯಾಲಯದಿಂದ ಎಚ್ಚರಿಕೆಯ ಮಾತುಗಳನ್ನು ಕೇಳಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ.

ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಂಕರ್ ಪ್ರಸಾದ್, ರಫೇಲ್ ಒಪ್ಪಂದದ ವಿರುದ್ಧ ಕೇಂದ್ರವನ್ನು ಮತ್ತು ನರೇಂದ್ರ ಮೋದಿಯವರನ್ನು ಗುರಿಯಾಗಿರಿಸಿ ಹೋದಲ್ಲೆಲ್ಲಾ ಅಪಪ್ರಚಾರ ಮಾಡಿರುವುದರ ಹಿಂದೆ ಯಾರ ಹುನ್ನಾರವಿದೆ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿಯವರೇ ಕಳ್ಳ (ಚೋರ್) ಎಂಬುದನ್ನು ಸುಪ್ರೀಂ ಕೋರ್ಟೇ ಒಪ್ಪಿದೆ ಎಂದು ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದು, ಇದಕ್ಕಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ದಾವೆಯನ್ನೂ ಹೂಡಲಾಗಿತ್ತು. "ಸುಪ್ರೀಂ ಕೋರ್ಟೇ ಮೋದಿಯನ್ನು ಕಳ್ಳ ಅಂತ ಹೇಳಿರುವುದಾಗಿ ರಾಹುಲ್ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಸುಳ್ಳು ಬೇರೆ ಇಲ್ಲ. ಇದನ್ನು ಸುಪ್ರೀಂ ಕೋರ್ಟೇ ಇಂದು ಸಾಬೀತುಪಡಿಸಿದೆ" ಎಂದು ಪ್ರಸಾದ್ ಹೇಳಿದ್ದಾರೆ.

ರಫೇಲ್ ಯುದ್ಧ ವಿಮಾನಗಳ ವಿರುದ್ಧ ರಾಹುಲ್ ಗಾಂಧಿ ಅಪಪ್ರಚಾರ ಮಾಡಿರುವುದರ ಹಿಂದೆ ಯಾರಿದ್ದಾರೆ? ಅವರ ಈ ಅಭಿಯಾನವು ಆಳವಾದ ಸಂದೇಹಕ್ಕೆ ಎಡೆ ಮಾಡಿಕೊಡುತ್ತಿದೆ ಎಂದ ಅವರು, ಒಪ್ಪಂದದ ಟೆಂಡರ್ ಕೈತಪ್ಪಿದವರಿಗೆ ಸಹಾಯ ಮಾಡುವುದಕ್ಕಾಗಿ ರಾಹುಲ್ ಗಾಂಧಿ ಈ ರೀತಿ ಅಪಪ್ರಚಾರ ಕೈಗೊಂಡಿದ್ದರು ಎಂದರಲ್ಲದೆ, ರಕ್ಷಣಾ ಸಲಕರಣೆಗಳ ಪೂರೈಕೆಯ ಗುತ್ತಿಗೆಯಲ್ಲಿ ಉಪ-ಗುತ್ತಿಗೆ ಪಡೆಯುವುದರಲ್ಲಿ ಕಾಂಗ್ರೆಸ್ ನಿಸ್ಸೀಮವಾಗಿತ್ತು ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರು ಈ ಒಪ್ಪಂದದ ಕುರಿತಾಗಿ ಇಡೀ ದೇಶದ ಜನರ ದಾರಿತಪ್ಪಿಸಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರೋನ್ ಅವರೇ ಈ ಒಪ್ಪಂದ ಬಗ್ಗೆ ತನ್ನಲ್ಲಿ ಬಾಯಿಬಿಟ್ಟಿದ್ದಾರೆಂದು ರಾಹುಲ್ ಗಾಂಧಿ ಸಂಸತ್ತಿನಲ್ಲೇ ಸುಳ್ಳು ಹೇಳಿದರು. ಆದರೆ, ಈ ಒಪ್ಪಂದವು ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಬಂದಿರುವುದರಿಂದ ಗೌಪ್ಯತೆ ಕಾಯ್ದುಕೊಳ್ಳುವ ಕುರಿತಾಗಿಯೂ ಒಪ್ಪಂದವಾಗಿದೆ. ಕೊನೆಗೆ ರಾಹುಲ್ ಹೇಳಿಕೆ ಸರಿಯಲ್ಲ ಎಂದು ಫ್ರೆಂಚ್ ಸರಕಾರವೇ ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು ಎಂದು ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದರು.

ರಿಲಯನ್ಸ್ ಕಂಪನಿಗೆ ಪ್ರಧಾನಿ ಮೋದಿ ಅವರೇ ಡೀಲ್ ಮಾಡಿಸಿಕೊಟ್ಟರು ಅಂತ ಮೊದಲು ರಾಹುಲ್ ಹೇಳಿದರು. ಆದರೆ, ಈ ನಿರ್ಧಾರ ಕೈಗೊಂಡಿದ್ದು ಭಾರತ ಸರಕಾರವಲ್ಲ, ನಾವೇ ಅಂತ ಡಸಾಲ್ಟ್ ಕಂಪನಿಯು ಹೇಳಿತು. ರಾಹುಲ್ ಅವರ ಮುಂದಿನ ಸುಳ್ಳು ಎಂದರೆ, 'ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಅವರೇ ಪ್ರಧಾನಿ ಮೋದಿಯನ್ನು ಕಳ್ಳ ಎಂದರು' ಎಂಬುದು. ಅದಕ್ಕೆ ಫ್ರೆಂಚ್ ಅಧ್ಯಕ್ಷರೇ ಸ್ಪಷ್ಟನೆ ನೀಡಬೇಕಾಯಿತು ಎಂದು ಪ್ರಸಾದ್ ವಿವರಿಸಿದರು.

ಮೋದಿಯವರಿಗೇ ಚೋರ್ ಅಂತ ಹೇಳಲು ರಾಹುಲ್ ಗಾಂಧಿಯವರು ಕೀಳುಮಟ್ಟಕ್ಕಿಳಿದು ಸುಪ್ರೀಂ ಕೋರ್ಟ್ ಅನ್ನೇ ಬಳಸಿರುವುದು ನಾಚಿಕೆಗೇಡು ಎಂದ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ಯಾವತ್ತಿಗೂ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿತ್ತು ಎಂದು ಆರೋಪಿಸಿದರಲ್ಲದೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ಈ ದೇಶದ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು. ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಗಳಿಗಾಗಿ ಮೇ 8ರಂದು ಸುಪ್ರೀಂ ಕೋರ್ಟಿನಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದರು.

ಸತ್ಯಕ್ಕೆ ಜಯ ಸಿಕ್ಕಿದೆ ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮೋದಿ ಸರಕಾರದ ಪ್ರಾಮಾಣಿಕತೆಯನ್ನು ಸುಪ್ರೀಂ ಕೋರ್ಟ್ ಗುರುತಿಸಿದೆ ಎಂದು ಪ್ರಸಾದ್ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದರು.

ಈಮೊದಲು, ಫ್ರೆಂಚ್ ಕಂಪನಿ ಡಸಾಲ್ಟ್ ಆವಿಯೇಶನ್ ಜತೆಗೆ ಭಾರತಕ್ಕೆ ರಫೇಲ್ ಜೆಟ್ ವಿಮಾನಗಳ ಪೂರೈಕೆಗೆ ಸಂಬಂಧಿಸಿದಂತೆ ನಡೆದಿದ್ದ ಒಪ್ಪಂದಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ. 59 ಸಾವಿರ ಕೋಟಿ ರೂ. ಒಪ್ಪಂದದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ದೂರು ನೀಡಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2018ರ ಡಿಸೆಂಬರ್ 14ರಂದು ನರೇಂದ್ರ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು. ಈ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಹಾಕಲಾಗಿದ್ದು, ಗುರುವಾರ ಈ ಅರ್ಜಿಯನ್ನೂ ಸರ್ವೋಚ್ಚ ನ್ಯಾಯಾಲಯವು ವಿಲೇವಾರಿ ಮಾಡಿದೆಯಲ್ಲದೆ, ರಫೇಲ್ ಒಪ್ಪಂದದ ಕುರಿತಾಗಿ ತನಿಖೆಯ ಅಗತ್ಯವಿಲ್ಲ ಎಂದು ಪುನಃ ಸ್ಪಷ್ಟಪಡಿಸಿದೆ.

ಇದಲ್ಲದೆ, ರಾಹುಲ್ ಗಾಂಧಿ ಮಾತನಾಡುವಾಗ ಎಚ್ಚರದಿಂದಿರುವಂತೆ ಅವರಿಗೆ ಎಚ್ಚರಿಕೆ ನೀಡಿ, ನ್ಯಾಯಾಂಗ ನಿಂದನೆ ಕೇಸನ್ನು ಕೈಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT