ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರ ಹೆಸರಿನ ಮುಂದೆ ಮೋದಿ ಎಂದಿದೆ ಹೇಳಿಕೆ-ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ

Last Updated 19 ಏಪ್ರಿಲ್ 2019, 2:46 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ನಡೆದಚುನಾವಣಾ ಪ್ರಚಾರ ಸಮಯ ನೀಡಿದ 'ಎಲ್ಲಾ ಕಳ್ಳರ ಹೆಸರಿನ ಮುಂದೆ ಮೋದಿ ಎಂದಿದೆ' ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

ಬಿಹಾರ ಉಪಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ, ಪಾಟ್ನಾ ನ್ಯಾಯಾಲಯದಲ್ಲಿ ಗುರುವಾರ ಪ್ರಕರಣ ದಾಖಲಿಸಿದ್ದಾರೆ. 'ರಾಹುಲ್ ಗಾಂಧಿ ಏ.13ರಂದು ಕೋಲಾರದಲ್ಲಿ ನೀಡಿರುವ ಹೇಳಿಕೆಯಲ್ಲಿ, ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿ ವಿದೇಶಕ್ಕೆ ಹಾರಿರುವ ನೀರವ್ ಮೋದಿ, ಐಪಿಲ್ ಕ್ರಿಕೆಟ್‌ನ ಆಡಳಿತಾಧಿಕಾರಿಯಾಗಿದ್ದ ಲಲಿತ್ ಮೋದಿ, ರಫೇಲ್ ಯುದ್ಧವಿಮಾನ ಹಗರಣದ ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಒಂದಿಲ್ಲೊಂದು ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲಾ ಕಳ್ಳರ ಹೆಸರಿನ ಮುಂದೆ ಮೋದಿ ಎಂಬ ಸರ್ ನೇಮ್ ಇದೆ ಎಂದಿರುವುದು ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಅಪರಾಧವಾಗುತ್ತದೆ. ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆ ಮಾನಹಾನಿಕರವಾಗಿದೆ. ಈ ಅಪರಾಧಕ್ಕೆ ಎರಡು ವರ್ಷ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರ ಈ ಹೇಳಿಕೆ ಮೋದಿ ಎಂಬ ಹೆಸರಿನವರ ಘನತೆಗೆ ಸಾರ್ವಜನಿಕರ ಹಿತದೃಷ್ಟಿಯಲ್ಲಿ ಕುಂದುಂಟು ಮಾಡುತ್ತದೆ. ಆದ್ದರಿಂದ ಅವರನ್ನು ಕರೆಸಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪಕ್ಷದ ಪದಾಧಿಕಾರಿಗಳಾದ ಸಂಜೀವ್ ಚೌರಾಸಿಯ ಹಾಗೂ ನಿತಿನ್ ನವಿನ್ ಈ ಪ್ರಕರಣಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಸುಶೀಲ್ ಕುಮಾರ್ ಮೋದಿ ಅವರ ವಕೀಲರು ತಿಳಿಸಿದ್ದಾರೆ.

ಇದಲ್ಲದೆ, ರಾಹುಲ್ ಗಾಂಧಿ ಅವರು ಎಲ್ಲಾ ಸಮಾರಂಭಗಳಲ್ಲೂ ನೀಡುತ್ತಿರುವ 'ಚೌಕಿದಾರ್ ಚೋರ್ ಹೈ' ಹೇಳಿಕೆಯೂ ಕೂಡ ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಅವಹೇಳನ ಮಾಡುವಂತಹ ಹೇಳಿಕೆಯಾಗಿದೆ. ರಾಹುಲ್ ಗಾಂಧಿಯವರ ಈ ನಡೆಯ ಕುರಿತು ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡುತ್ತಿದ್ದೇನೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ.

ಬಹಿರಂಗವಾಗಿ ಹೇಳುತ್ತೇನೆ ಸುಶೀಲ್ ಮೋದಿ 'ಸೃಜನ್ ಚೋರ್'- ತೇಜಸ್ವಿ ಯಾದವ್

ಈ ಮಧ್ಯೆ ರಾಷ್ಟ್ರೀಯ ಜನತಾದಳ ಮುಖಂಡ ತೇಜಸ್ವಿ ಯಾದವ್ ಅವರು ಸುಶೀಲ್ ಮೋದಿ ಅವರಿಗೆ 'ಸೃಜನ್ ಚೋರ್' ಎಂದು ಕರೆದಿದ್ದು, ನಾನು ಬಹಿರಂಗವಾಗಿ ಹೇಳುತ್ತೇನೆ, ಧೈರ್ಯವಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಿ ಎಂದು ಸವಾಲು ಹಾಕಿದ್ದಾರೆ. ಎನ್‌‌ಜಿಓ ಒಂದನ್ನು ಶಿಫಾರಸು ಮಾಡಿ, ಈ ಖಾತೆಗೆಸರ್ಕಾರಿ ಹಣವನ್ನೆಲ್ಲಾ ವರ್ಗಾವಣೆ ಮಾಡಿಕೊಂಡಿರುವ ಸುಶೀಲ್ ಮೋದಿ ಸೃಜನ್ ಚೋರ್ ಆಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಈ ಮಧ್ಯೆಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾನೊಬ್ಬ ಹಿಂದುಳಿದ ವರ್ಗದಿಂದ ಬಂದವನು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಗುರಿಯಾಗಿಸಿಕೊಂಡು ನನ್ನ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ. ಹಲವು ಬಾರಿ ಕಾಂಗ್ರೆಸ್ ಮುಖಂಡರಿಂದ ಹಾಗೂ ಮಿತ್ರರಿಂದ ನಿಂದನೆಗೆ ಒಳಗಾಗಿದ್ದೇನೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಡೀ ಹಿಂದುಳಿದ ವರ್ಗವನ್ನೇ ಕಳ್ಳರು ಎಂದು ಕರೆದಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT