ಬುಧವಾರ, ಡಿಸೆಂಬರ್ 2, 2020
17 °C

ಸ್ವಾಮಿ ವಿವೇಕಾನಂದ: ವೀರಸನ್ಯಾಸದ ತ್ಯಾಗರೂಪ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಸ್ವಾಮಿ ವಿವೇಕಾನಂದ ಜನ್ಮದಿನವನ್ನು ‘ರಾಷ್ಟ್ರೀಯ ಯುವದಿನ’ವನ್ನಾಗಿ ಆಚರಿಸಿಸುವುದರಲ್ಲಿ ಅರ್ಥವಿದೆ.

ಸಾಮಾನ್ಯವಾಗಿ ಸನ್ಯಾಸವನ್ನೂ ವೈರಾಗ್ಯವನ್ನೂ ಮುಪ್ಪಿನೊಂದಿಗೆ ಸಮೀಕರಿಸುವುದುಂಟು; ಆದರೆ ಸ್ವಾಮಿ ವಿವೇಕಾನಂದರು ಅದನ್ನು ತಾರುಣ್ಯದೊಂದಿಗೆ ಸಮೀಕರಿಸಿದರು.

ತಾರುಣ್ಯ ಎಂದರೆ ಶಕ್ತಿಯ ಅಪರಿಮಿತ ಉತ್ಸಾಹ. ಈ ಶಕ್ತಿಯನ್ನು ಧರ್ಮದ ಸ್ಥಾಪನೆಗಾಗಿ ಬಳಸಿಕೊಳ್ಳುವುದೇ ಜೀವನದ ನಿಜವಾದ ಅರ್ಥ ಎಂದು ಸನ್ಯಾಸಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದವರು ಅವರು. ಧರ್ಮ ಎಂದರೆ ಅದೇನೂ ಎಲ್ಲೋ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸು ಅಲ್ಲ; ಜನರ ನಡುವೆ ಇದ್ದುಕೊಂಡು, ಜನರಿಗಾಗಿ ನಮ್ಮ ಸಮಸ್ತ ಶಕ್ತಿಯನ್ನೂ ವಿನಿಯೋಗಿಸುವುದೇ ಧರ್ಮ ಎಂದು ಧಾರ್ಮಿಕತೆಯ ವ್ಯಾಪ್ತಿಯನ್ನೂ ಹಿಗ್ಗಿಸಿದರು. ಈ ಸಮಾಜಯಜ್ಞಕ್ಕೆ ಅವರು ವಿಶೇಷ ಆಹ್ವಾನ ನೀಡಿದ್ದು ಯುವಕರಿಗೆ. ‘ಈ ಪ್ರಪಂಚ ಇರುವುದು ಹೇಡಿಗಳಿಗೆ ಅಲ್ಲ; ಜೀವನದಲ್ಲಿ ಎದುರಾಗುವ ಸೋಲು–ಗೆಲುವುಗಳಿಗೆ ಬಗ್ಗಬೇಡಿ. ಸ್ವಾರ್ಥರಹಿತ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕೆಲಸದಲ್ಲಿ ತೊಡಗಿ; ಫಲಿತಾಂಶದ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಒಳ್ಳೆಯ ಕೆಲಸ ಕೂಡ ಬಂಧನವೇ ಆಗಬಹುದು. ಹೀಗಾಗಿ ಕೀರ್ತಿಯನ್ನು ಬಯಸಿ ಯಾವುದೇ ಕೆಲಸದಲ್ಲಿ ತೊಡಗಬೇಡಿ’ ಎಂದು ಅವರು ಯುವಕರಿಗೆ ಕರೆ ಕೊಟ್ಟರು.

‘ಸಾಧಾರಣ ಸನ್ಯಾಸಿ ಪ್ರಪಂಚದಿಂದ ಬಿಡುಗಡೆಯನ್ನು ಬಯಸುತ್ತಾನೆ; ಆದರೆ ನಿಜವಾದ ಸನ್ಯಾಸಿ ಪ್ರಪಂಚದಲ್ಲಿಯೇ ಇರುತ್ತಾನೆ; ಆದರೆ ಅದಕ್ಕೆ ಅಂಟಿಕೊಂಡಿರುವುದಿಲ್ಲ. ಮುಕ್ತಿಯನ್ನು ಬಯಸಿ ಕಾಡಿನಲ್ಲಿ ಬದುಕುವುದು ನಿಜವಾದ ಸನ್ಯಾಸ ಅಲ್ಲ; ಜೀವನಸಂಗ್ರಾಮದ ನಡುವೆ ಬದುಕಬೇಕು. ಗುಹೆಯಲ್ಲೋ ನಿದ್ರೆಯಲ್ಲೋ ಯಾರು ಬೇಕಾದರೂ ಪ್ರಶಾಂತವಾಗಿರಬಹುದು; ಆದರೆ ಪ್ರಪಂಚದ ಸುಳಿಯಲ್ಲಿ ಸಿಕ್ಕಿಯೂ ಕೇಂದ್ರವನ್ನು ಮುಟ್ಟುವುದು ನಿಜವಾದ ಸಾಧನೆ’ ಎಂದು ಬೋಧಿಸಿದ ಸ್ವಾಮೀಜಿ ಸಹಜವಾಗಿಯೇ ಈ  ‘ವೀರಸನ್ಯಾಸಿ’ ಎಂಬ ಕೀರ್ತಿಗೆ ಪಾತ್ರರಾದರು.

ಜೀವನದಲ್ಲಿ ಸೋತವರು ಹತಾಶೆಯಿಂದ ಬಯಸುವ ಖಾಲಿತನವೇ ವೈರಾಗ್ಯ ಎಂಬ ಭಾವನೆಯಿದೆಯಷ್ಟೆ. ಆದರೆ ಈ ಅಭಾವವೈರಾಗ್ಯವನ್ನು ಟೀಕಿಸಿದ ಸ್ವಾಮೀಜಿ, ಸನ್ಯಾಸ ಎಂಬ ಪರಿಕಲ್ಪನೆಗೇ ಯೌವನವನ್ನು ತುಂಬಿದರು. ಸಮಾಜಸೇವೆ, ವ್ಯಕ್ತಿತ್ವನಿರ್ಮಾಣ, ದೈಹಿಕ–ಮಾನಸಿಕ ಸದೃಢತೆ, ರಾಷ್ಟ್ರಭಕ್ತಿ, ವೈಜ್ಞಾನಿಕ ಮನೋಧರ್ಮ – ಇಂಥ ಹಲವು ಗುಣಗಳನ್ನು ಸನ್ಯಾಸದ ಪರಿಧಿಯೊಳಗೆ ತಂದವರು ಅವರೇ. ಸಾವಿರಾರು ವರ್ಷಗಳ ಭಾರತೀಯ ಭವ್ಯ ಪರಂಪರೆಯಲ್ಲಿ ಹಲವು ಕಳೆಗಳೂ ಕೊಳೆಗಳೂ ಸೇರಿಕೊಂಡಿದ್ದವು. ಇವನ್ನು ಒಂದೊಂದಾಗಿ ಕಳೆಯಲು ಜೀವನದುದ್ದಕ್ಕೂ ಶ್ರಮಿಸಿದರು. ಈ ನೆಲದ ಶುದ್ಧ ಅಧ್ಯಾತ್ಮಪರಂಪರೆಯ ಭವ್ಯರೂಪವಾದವರು. 

ಹಲವು ಪಂಥಗಳು ತಮ್ಮ ಸಿದ್ಧಾಂತಗಳ ಸಮರ್ಥನೆಗೆ ಸ್ವಾಮಿ ವಿವೇಕಾನಂದರ ಬಿಡಿ ಹೇಳಿಕೆಗಳನ್ನು ಬಳಸಿಕೊಳ್ಳುವ ಜಾಣ್ಮೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಆದರೆ ಸ್ವಾಮಿಜಿಯವರ ಒಟ್ಟು ಜೀವನವನ್ನೂ ಸಂದೇಶವನ್ನೂ ಅನುಸಂಧಾನ ಮಾಡಿದವರು ಯಾರೂ ಇಂಥ ಅಡ್ಡದಾರಿಯಲ್ಲಿ ನಡೆಯಲು ಸಾಹಸ ಮಾಡಲಾರರು.

ಅವರು ವಿಶ್ವವನ್ನು ಗೌರವಿಸಿದರು; ಆದರೆ ಭಾರತವನ್ನು ಪ್ರೀತಿಸಿದರು; ಈ ನೆಲದ ಪರಂಪರೆಯ ಶ್ರದ್ಧಾಳುವಾದರು; ಈ ಕಾರಣದಿಂದಲೇ ಅವರು ನಮಗೆ ಇಂದಿಗೂ ಪ್ರಸ್ತುತವಾಗಿರುವುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು