ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಣ ಪೆನ್ನಾರ್ ನದಿ (ಪಿನಾಕಿನಿ, ದಕ್ಷಿಣ ಪೆನ್ನಾರ್) ನೀರು ಹಂಚಿಕೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಕರೆದಿದ್ದ ಸಭೆ ಅಪೂರ್ಣಗೊಂಡಿದೆ.
ನದಿ ತೀರದಲ್ಲಿ ಕರ್ನಾಟಕ ಕೈಗೊಂಡಿರುವ ಯೋಜನೆಗಳ ಬಗ್ಗೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಯೋಜನೆಗಳ ಕುರಿತು ಅಭಿಪ್ರಾಯ ಮಂಡಿಸುವಂತೆ ಕರ್ನಾಟಕಕ್ಕೆ ಸೂಚಿಸಿದ ಆಯೋಗದ ಅಧ್ಯಕ್ಷ ಆರ್.ಕೆ. ಜೈನ್ ಮುಂದಿನ ಸಭೆಯನ್ನು ಮಾರ್ಚ್ 10ಕ್ಕೆ ನಿಗದಿಪಡಿಸಿದರು.
ಮಾರ್ಕಂಡೇಯ ನದಿಗೆ ಚೆಕ್ ಡ್ಯಾಂ ನಿರ್ಮಿಸುವುದರಿಂದ ತಮಿಳುನಾಡಿಗೆ ತೊಂದರೆಯಾಗುತ್ತದೆ ಎಂದು ತಮಿಳುನಾಡು ವಾದಿಸಿತು.
ಇದನ್ನು ತಿರಸ್ಕರಿಸಿದ ಕರ್ನಾಟಕ, ಚೆಕ್ ಡ್ಯಾಂನ ಶೇಕಡಾ 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಯೋಜನೆಯಿಂದ ಕೋಲಾರ, ಬಂಗಾರಪೇಟೆ ಮತ್ತು ಮಾಲೂರಿನ ಹಳ್ಳಿಗಳಿಗೆ ಮತ್ತು ಹಲವು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಕರ್ನಾಟಕ ವಾದ ಮಂಡಿಸಿತು.